ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಎದುರಾಗಿದೆ. ಪ್ರಾಸಿಕ್ಯೂಶನ್‌ಗೆ ರಾಜ್ಯಪಾಲರು ಇಂದು ಅನುಮತಿ ನೀಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ಟಿ.ಜೆ ಅಬ್ರಹಾಂ ಪ್ರಾಸಿಕ್ಯೂಶನ್‌ಗೆ ಅನುಮತಿ ಕೇಳಿದ್ದರು. ದೂರುದಾರ ಅಬ್ರಹಾಂ ಅವರನ್ನು ಇಂದು ರಾಜಭವನಕ್ಕೆ ಕರೆಸಿಕೊಂಡ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ , ಪ್ರಾಸಿಕ್ಯೂಶನ್‌ಗೆ ದೂರು ದಾಖಲಿಸಲು ಅನುಮತಿ ನೀಡಿದರು. ಕಳೆದ ಒಂದು ವಾರದಿಂದ ರಾಜಭವನದ ನಡೆ ನಿಗೂಢವಾಗಿತ್ತು. ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಯಾವ ಕ್ರಮ ಜರುಗಿಸಲಿದ್ದಾರೆ ಎಂಬ ಕುತೂಹಲ ಇತ್ತು. ದಿಲ್ಲಿ ಪ್ರವಾಸದಲ್ಲಿದ್ದ ರಾಜ್ಯಪಾಲ ಥಾವರ ಚಂದ್ ಗೆಹ್ಲೋಟ್ ಕಳೆದ ವಾರ ಬೆಂಗಳೂರಿಗೆ ಮರಳಿದ ಬಳಿಕ, ತಾವು ಕೊಟ್ಟಿದ್ದ ನೋಟೀಸ್‌ಗೆ ರಾಜ್ಯ ಸಚಿವ ಸಂಪುಟದ ಉತ್ತರ ಹಾಗೂ ಸಿಎಂ ಸಿದ್ದರಾಮಯ್ಯ ನೀಡಿದ್ದ ಉತ್ತರಗಳನ್ನು ಪರಿಶೀಲಿಸಿದ್ದರು. ದೂರುದಾರ ಟಿ.ಜೆ ಅಬ್ರಾಹಂ ಮೇಲೆಯೇ ದೂರುಗಳಿವೆ ಎಂದು ಸಚಿವ ಸಂಪುಟ ಆರೋಪಿಸಿತ್ತು. ಮುಡಾ ಹಗರಣದ ವಿಚಾರಣೆಗಾಗಿ ರಾಜ್ಯ ಸರಕಾರ ನ್ಯಾ.ದೇಸಾಯಿ ಅವರ ಆಯೋಗವನ್ನು ರಚಿಸಿದೆ.
ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಮುಡಾ ಹಗರಣದಲ್ಲಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಕುರಿತಾದ ಆದೇಶವನ್ನು ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ರವಾನೆ ಮಾಡಿದ್ದಾರೆ. ಸಿದ್ಧರಾಮಯ್ಯ ಅವರ ರಾಜಕೀಯ ಜೀವನದ ಅತಿದೊಡ್ಡ ಸಂಕಷ್ಟ ಇದು ಎಂದು ಹೇಳಲಾಗಿದೆ.ಮೂರು ದೂರುಗಳನ್ನು ಒಟ್ಟಿಗೆ ಸೇರಿಸಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಂ, ಮೈಸೂರು ಮೂಲದ ಸ್ನೇಹಮಯಿ ಕೃಷ್ಟ ಹಾಗೂ ಪ್ರದೀಪ್ ಎನ್ನುವವರು ಇದೇ ವಿಚಾರದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ಈ ಮೂರೂ ಅರ್ಜಿಗಳನ್ನು ಒಟ್ಟಿಗೆ ಸೇರಿಸಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ಮುಖ್ಯ ಕಾರ್ಯದರ್ಶಿ ಕಚೇರಿಗೆ ನೋಟಿಫಿಕೇಷನ್‌ಅನ್ನೂ ಪ್ರತಿಯನ್ನೂ ನೀಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಸ್ನೇಹಮಯಿ ಕೃಷ್ಣ, ‘ನನ್ನ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ. ರಾಜಭವನಕ್ಕೆ ಬರಲು ರಾಜ್ಯಪಾಲರು ನನಗೆ ಸೂಚನೆ ನೀಡಿದ್ದಾರೆ. ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿಯಾಗಲಿದ್ದೇನೆ’ ಎಂದು ತಿಳಿಸಿದ್ದಾರೆ.