ಬೆಳಗಾವಿ : ಖಾನಾಪುರ ತಾಲೂಕಿನ ಪ್ರಭುನಗರದ ವಿದ್ಯಾರ್ಥಿಗಳು ಶನಿವಾರ ಬೆಳಗಾವಿಯ ಶಾಲಾ-ಕಾಲೇಜಿಗೆ ತೆರಳಲು ಬೆಳಿಗ್ಗೆಯಿಂದ ಯಾವುದೇ ಬಸ್ ನಿಲ್ಲದ ಕಾರಣ ಪ್ರತಿಭಟನೆ ನಡೆಸಿದರು. ಬೆಳಗಾವಿಗೆ ತೆರಳುವ ಹಲವು ಬಸ್ ಗಳು ಕೆಲಕಾಲ ಸ್ಥಗಿತಗೊಂಡಿದ್ದವು. ಕೊನೆಗೆ ಕೆಎಸ್ ಆರ್ ಟಿಸಿ ಖಾನಾಪುರ ಡಿಪೋ ಮ್ಯಾನೇಜರ್ ಸಂತೋಷ ಬೆನಕಿನಕೊಪ್ಪ ಹಾಗೂ ಖಾನಾಪುರ ಪೊಲೀಸರು ತೆರಳಿ ವಿದ್ಯಾರ್ಥಿಗಳ ಮನವೊಲಿಸಿದರು. ಇನ್ನು ಮುಂದೆ ಬಸ್ ಗಳನ್ನು ನಿಲ್ಲಿಸುವುದಾಗಿ ತಿಳಿಸಿದರು.
ಇಂದು ಪರೀಕ್ಷೆ ಇದ್ದ ಕಾರಣ ವಿದ್ಯಾರ್ಥಿಗಳು ಶಾಲಾ- ಕಾಲೇಜು ತಲುಪುವ ತರಾತುರಿಯಲ್ಲಿದ್ದರು. ಆದರೆ ಬೆಳಗ್ಗೆಯಿಂದ ಯಾವುದೇ ಬಸ್‌ಗಳು ನಿಲ್ಲದ ಕಾರಣ ಪ್ರಭುನಗರದ ವಿದ್ಯಾರ್ಥಿಗಳು ಧರಣಿ ನಿರತರಾಗಿ ಬಸ್ ತಡೆದು ಪ್ರತಿಭಟನೆ ನಡೆಸಿದರು.