ದೆಹಲಿ:
ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಮೋಹನ್ ಯಾದವ್ ಅವರು ಆಯ್ಕೆಯಾಗಿದ್ದಾರೆ.

ಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಉಜ್ಜೈನಿ ಶಾಸಕ ಮೋಹನ್ ಯಾದವ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಇದರೊಂದಿಗೆ ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಯಾರಾಗುವರು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.

ಶಿವರಾಜ್ ಸಿಂಗ್‌ ಚೌಹಾಣ್, ಪ್ರಹ್ಲಾದ್‌ ಪಟೇಲ್, ನರೇಂದ್ರ ಸಿಂಗ್ ತೋಮರ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ, ಮಧ್ಯಪ್ರದೇಶ ರಾಜ್ಯ ಘಟಕದ ಅಧ್ಯಕ್ಷ ವಿ.ಡಿ. ಶರ್ಮ ಅಲ್ಲದೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸಿ.ಎಂ ಸ್ಥಾನದ ಆಕಾಂಕ್ಷಿಗಳಾಗಿದ್ದರು.

58 ರ ಹರೆಯದ ಡಾ. ಮೋಹನ್ ಯಾದವ್ ಅವರು ಉಜ್ಜಯಿನಿ ದಕ್ಷಿಣ ಕ್ಷೇತ್ರದಿಂದ ವಿಧಾನಸಭೆಯ ಸದಸ್ಯರಾಗಿದ್ದಾರೆ.

2013 ರಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.2020 ರಿಂದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ನವೆಂಬರ್ 17 ರಂದು ನಡೆದ ಚುನಾವಣೆಯಲ್ಲಿ 230 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 163 ಸ್ಥಾನಗಳನ್ನು ಗೆಲ್ಲುವ ಮೂಲಕ ಮಧ್ಯಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಂಡಿತ್ತು. ಕಾಂಗ್ರೆಸ್ 66 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಚುನಾವಣೆಗೂ ಮುನ್ನ ಬಿಜೆಪಿ ಯಾರನ್ನೂ ಮುಖ್ಯಮಂತ್ರಿಯ ಅಭ್ಯರ್ಥಿಯನ್ನಾಗಿ ಬಿಂಬಿಸಿರಲಿಲ್ಲ. ಶಿವರಾಜ್ ಸಿಂಗ್ ಚೌಹಾಣ್ ಅವರು ಮುಖ್ಯಮಂತ್ರಿಯಾಗಿದ್ದರೂ ಇಡೀ ಚುನಾವಣೆಯ ಪ್ರಚಾರವು ಪ್ರಧಾನಿ ಮೋದಿಯವರ ನಾಯಕತ್ವದ ಮೇಲೆ ಆಧಾರಿತವಾಗಿತ್ತು.

ನಿನ್ನೆಯಷ್ಟೇ ಛತ್ತೀಸ್ ಗಢಕ್ಕೆ ಬಿಜೆಪಿ ಮುಖ್ಯಮಂತ್ರಿ ನೇಮಕ ಮಾಡಿತ್ತು. ಇಂದು ಮಧ್ಯಪ್ರದೇಶಕ್ಕೆ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದು ನಾಳೆ ಅಥವಾ ನಾಡಿದ್ದು ರಾಜಸ್ಥಾನಕ್ಕೂ ನೂತನ ಮುಖ್ಯಮಂತ್ರಿ ಆಯ್ಕೆ ಸಾಧ್ಯತೆ ಇದೆ.

ಮಹತ್ವದ ಬದಲಾವಣೆ :
ವಿಧಾನ ಸಭಾ ಚುನಾವಣೆಗೆ ಸ್ಪರ್ಧಿಸಿದ ಮಾಜಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಅಸೆಂಬ್ಲಿ ಸ್ಪೀಕರ್ ಮಾಡಲಾಗಿದೆ.
ಅವರ ಹೆಸರೂ ಸಿಎಂ ಹುದ್ದೆಗೆ ಬಲವಾಗಿ ಕೇಳಿಬಂದಿತ್ತು. ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ ಸಚಿವಾಲಯವನ್ನು ಮುನ್ನಡೆಸಿದ್ದ ತೋಮರ್ ಚೌಹಾಣ್ ಅವರ ನಂತರ ಉನ್ನತ ಹುದ್ದೆಗೆ ಏರಬಹುದು ಎಂಬ ಬಗ್ಗೆ ಚರ್ಚೆಯಾಗಿತ್ತು.

ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಬಿಜೆಪಿಯು ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಹೆಸರಿಸಿದೆ. ಜಗದೀಶ್ ದಿಯೋರಾ ಮತ್ತು ರಾಜೇಶ್ ಶುಕ್ಲಾ ಅವರು ಮಧ್ಯಪ್ರದೇಶ ಉಪಮುಖ್ಯಮಂತ್ರಿಗಳಾಗಲಿದ್ದಾರೆ.