ಬೆಳಗಾವಿ : ಮರಾಠಾ ಸಮಾಜದ ಅಭ್ಯುದಯಕ್ಕೆ ಸಂಘಟಿತ ಪ್ರಯತ್ನ ನಡೆಸುವುದು ಇಂದಿನ ಅಗತ್ಯವಾಗಿದೆ ಎಂದು ಮರಾಠಾ ಸಮಾಜದ ಮುಖಂಡ ಕಿರಣ ಜಾಧವ ಹೇಳಿದರು.

ನಗರದ ಮಿಲನ್ ಹೊಟೇಲ್ ಸಭಾಗೃಹದಲ್ಲಿ ಶನಿವಾರ ನಡೆದ ಬೆಳಗಾವಿ ಉತ್ತರ ಮರಾಠಾ ಸಮಾಜ ಬಾಂಧವರ ಸಭೆಯಲ್ಲಿ ಮಾತನಾಡಿದರು.

ಮರಾಠಾ ಸಮಾಜದ ಮೀಸಲಾತಿಯನ್ನು ಈಗ ಇರುವ 3 ಬಿ ಯಿಂದ 2 ಎ ಗೆ ನೀಡಬೇಕು. ಸಮುದಾಯದವರ ಬೇಡಿಕೆಗಳ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಅವರು ಆಗ್ರಹಿಸಿದರು.

ಮರಾಠಾ ಸಮಾಜವನ್ನು ಸದ್ಯ 3 ಬಿ ನಲ್ಲಿ ಪರಿಗಣಿಸಲಾಗುತ್ತದೆ. 2 ಎ
ಸೌಲಭ್ಯ ನೀಡಿದರೆ ಸಮಾಜದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನುಕೂಲವಾಗಲಿದೆ. ಜೊತೆಗೆ ಮರಾಠಾ ಸಮಾಜ ಬಾಂಧವರಿಗೆ ಸರಕಾರಿ ಸೌಲಭ್ಯಗಳ ನೇಮಕಾತಿಗೂ ಅನುಕೂಲವಾಗಲಿದೆ. ಮರಾಠಾ ಸಮಾಜದವರೆಲ್ಲರೂ ಸಂಘಟಿತರಾಗಿ ಇದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕಿರಣ ಜಾಧವ ಹೇಳಿದರು.

ಕರ್ನಾಟಕದಲ್ಲಿ ಮರಾಠಾ ಸಮುದಾಯದ ಮೀಸಲಾತಿ ವಿಚಾರವನ್ನು ನಿರ್ಲಕ್ಷಿಸಲಾಗಿದೆ. ಇದಕ್ಕೆ ರಾಜಕೀಯ ನಿರಾಸಕ್ತಿಯೇ ಕಾರಣ. ಇದನ್ನು ಗಂಭೀರವಾಗಿ ಪರಿಗಣಿಸಿ ಮರಾಠಾ ಸಮುದಾಯವನ್ನು 3 ಬಿಯಿಂದ 2 ಎ ಗೆ ನೀಡುವಂತೆ ಒತ್ತಾಯಿಸಿ ಮರಾಠಾ ಸಮುದಾಯದವರು ಪ್ರತಿಭಟನೆ, ಹೋರಾಟ ನಡೆಸಿ ಬೇಡಿಕೆ ಈಡೇರಿಸಿಕೊಳ್ಳುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಮರಾಠಾ ಸಮಾಜ ಬಾಂಧವರನ್ನು ಸಂಘಟಿಸಿ ಚಳವಳಿಗಿಳಿಸಲು ಪ್ರಬಲ ಸಿದ್ಧತೆ ನಡೆಸಬೇಕಿದೆ. ಆ ನಿಟ್ಟಿನಲ್ಲಿ ಈ ಚಿಂತನಾ ಸಭೆ ಆಯೋಜಿಸಲಾಗಿದೆ ಎಂದು ಕಿರಣ ಜಾಧವ್ ತಿಳಿಸಿದರು.

ಮರಾಠಾ ಸಮಾಜದ ಉನ್ನತಿಗಾಗಿ ಸಮಾಜ ಬಾಂಧವರನ್ನು ಒಗ್ಗೂಡಿಸುವಂತೆ ಬೆಳಗಾವಿ ಜಿಲ್ಲೆಯ ಮರಾಠಾ ಸಮಾಜದ ನಾಯಕರಲ್ಲಿ ಅವರು ಮನವಿ ಮಾಡಿದರು.

ವೀರ ಶಿವಾಜಿ ಸೇನೆ ಕರ್ನಾಟಕ ರಾಜ್ಯಾಧ್ಯಕ್ಷ ಕಮಲೇಶರಾವ್ ಫಡತಾರೆ ಬೆಂಗಳೂರು ಮಾತನಾಡಿ, ಮರಾಠಾ ಸಮಾಜದವರು ಒಟ್ಟಾಗಿ ಸಮಾಜದ ಉನ್ನತಿಗೆ ಶ್ರಮಿಸಬೇಕು ಎಂದು ಹೇಳಿದರು.

ಸುನೀಲ ಜಾಧವ, ರಾಹುಲ್ ಮುಚ್ಚಂಡಿ, ರಾಜನ್ ಜಾಧವ, ಸೀಮಾ ಪವಾರ, ಪ್ರಜ್ಞಾ ಶಿಂಧೆ, ಪ್ರವೀಣ ಪಾಟೀಲ ಸೇರಿದಂತೆ ಬೆಳಗಾವಿ ಉತ್ತರ ಭಾಗದ ಮರಾಠಾ ಸಮಾಜದ ಬಾಂಧವರು ಉಪಸ್ಥಿತರಿದ್ದರು.