ಬೆಳಗಾವಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿ ಟಿ ಯು) ಸೆಕ್ಷನ್ 8 ಕಂಪನಿಯಾದ ವಿಶ್ವೇಶ್ವರಯ್ಯ ರಿಸರ್ಚ್ ಮತ್ತು ಇನ್ನೋವೇಶನ್ ಫೌಂಡೇಶನ್ (ವಿ ಆರ್ ಐ ಎಫ್ ) ವತಿಯಿಂದ ವಿಶ್ವ ವಾಣಿಜ್ಯೋದಮ ದಿನವನ್ನು ಗುರುವಾರ ಆಚರಿಸಲಾಯಿತು.

ಅಂತರಾಷ್ಟ್ರೀಯ ಖ್ಯಾತಿಯ ಬೆಳಗಾವಿಯ ಹೆಲ್ಮೆಟ್ ಉದ್ಯಮ ಆಗಿರುವ ವೇಗಾ ಆಟೋ ಎಕ್ಸಸೆರೀಸನ ಸಂಸ್ಥಾಪಕ ಮತ್ತು ಎಂಡಿ ಆಗಿರುವ ದಿಲೀಪ್ ಚಂಡಕ್ ಅವರು ಸಸಿಗೆ ನೀರೆರೆದು ಉದ್ಘಾಟನೆ ನೆರವೇರಿಸಿ ಮಾತನಾಡಿ, ವೇಗಾ ಹೆಲ್ಮೆಟ್ ಬೆಳವಣಿಗೆಯ ಕಾಲದಲ್ಲಿ ಅನುಭವಿಸಿದ ಏರಿಳಿತಗಳ ಬಗ್ಗೆ ಹೇಳುತ್ತಾ ಯಾವುದೇ ಉದ್ಯಮ ಆರಂಭಿಸಬೇಕಾದರೆ ಮೊದಲು ಕಷ್ಟ ಮತ್ತು ನಷ್ಟಗಳು ಎರಡು ಜೊತೆಯಾಗುತ್ತವೆ ಹಾಗೂ ಅದನ್ನು ಸಹಿಸಿಕೊಂಡು ತಾಳ್ಮೆಯಿಂದ ಮುಂದುವರಿದರೆ ಮಾತ್ರ ಬೆಳೆಯುವುದಕ್ಕೆ ಹಾಗೂ ಯಶಸ್ವಿ ಉದ್ಯಮಿಯಾಗಲು ಸಾಧ್ಯ ಎಂದು ತಮ್ಮ ವೇಗಾ ಕಂಪನಿ ಬೆಳೆದು ಬಂದ ಕಥೆಯನ್ನು ತೆರೆದಿಟ್ಟರು.

ಉದ್ಯಮದ ಬೆಳವಣಿಗೆಯ ಕಾಲದಲ್ಲಿ ಗುಣಮಟ್ಟ ಮತ್ತು ನಿರ್ವಹಣಾ ಬಗ್ಗೆ ಅನೇಕ ರೀತಿಯಲ್ಲಿ ನಕಾರಾತ್ಮಕ ಪ್ರತಿಕ್ರಿಯೆಗಳು ಬರುವುದು ಸಹಜ. ಆ ಕ್ಷಣದಲ್ಲಿ ಧೃತಿಗಾಡಬಾರದು. ಯಾಕೆಂದರೆ ನಾವು ಎಲ್ಲರ ಬೇಡಿಕೆ ಮತ್ತು ಆಸಕ್ತಿಗಳನುಸಾರ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಮತ್ತು ಎಲ್ಲರನ್ನೂ ಸಂತೋಷಗೊಳಿಸಲು ಸಾಧ್ಯವಿಲ್ಲ. ಆದರೂ ಆ ಬೇಡಿಕೆಯನ್ನು ಅಭ್ಯಾಸ ಮಾಡಿ ಪರಿಶೀಲಿಸಿ ನಾವು ಮುಂದುವರಿಯಬೇಕು ಎಂದು ಹೇಳಿದರು.

ಒಬ್ಬ ವಿದ್ಯಾರ್ಥಿ ಉದ್ಯಮಿಯಾಗಬೇಕಂದರೆ ಮನಸ್ಸಿನಲ್ಲಿ ಯಾವುದೇ ರೀತಿಯ ನಕಾರಾತ್ಮಕ ಚಿಂತನೆಯನ್ನು ಹೊಂದಿರದೆ ಬೇರೆಯವರು ಅಥವಾ ಸ್ನೇಹಿತರು ಯಾವುದೇ ಒಳ್ಳೆಯ ಕೆಲಸವನ್ನು ಅಥವಾ ಸಾಧನೆಯನ್ನು ಮಾಡಿದಾಗ ಅದನ್ನು ಹೀಯಾಳಿಸದೆ ಆ ಸಾಧನೆಯನ್ನು ಹತ್ತು ಜನರ ಮುಂದೆ ಹೊಗಳಿ ಅವನ ಬೆಳವಣಿಗೆಗೆ ಸಹಾಯ ಮಾಡಿದರೆ ನಿಮ್ಮ ಬೆಳವಣಿಗೆಗೆ ಅನೇಕರು ಬೆಂಬಲಕ್ಕೆ ನಿಂತಿರುತ್ತಾರೆ ಎಂದು ಹೇಳಿದರು.

ವಿಟಿಯು ಕುಲಪತಿ ವಿದ್ಯಾಶಂಕರ ಮಾತನಾಡಿ,
ಜಗತ್ತಿನಲ್ಲೆ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಉದ್ಯೋಗಿಗಳ ಬದಲು ಉದ್ಯಮಿಗಳನ್ನು ಬೆಳೆಸುವ ಅವಶ್ಯಕತೆ ಇದೆ ಹೇಳಿದರು.
ಒಬ್ಬ ವ್ಯಕ್ತಿ ಉದ್ಯಮಿಯಾಗಿ ಬೆಳೆಯಲು ಅವನಲ್ಲಿರುವ ಆಸಕ್ತಿ ಮುಖ್ಯ ಕಾರಣವಾಗಿರುತ್ತದೆ. ಅಂದರೆ ಆಸಕ್ತಿಯಿಂದ ಉದ್ಯಮಿಗಳಾಗಿರುತ್ತಾರೆ. ಆದರೇ ಇವತ್ತು ಆ ಆಸಕ್ತಿ ಇಲ್ಲದೆ ಇರುವ ವಿದ್ಯಾರ್ಥಿಗಳಲ್ಲಿ ಅಥವಾ ಯುವಜನರಲ್ಲಿರುವ ಇನ್ನೊವೇಟಿವ್ ಚಿಂತನೆ ಮತ್ತು ಕೌಶಲ್ಯವನ್ನು ಬಳಸಿಕೊಂಡು ಅವರನ್ನು ಸ್ಟಾರ್ಟ್ ಅಪ್ ಗಳನ್ನು ಹುಟ್ಟುಹಾಕಿ ಉದ್ಯಮಿಗಳಾಗಿ ಬೆಳೆಯುವಂತೆ ಆಸಕ್ತಿಯನ್ನು ಅವರಲ್ಲಿ ಹುಟ್ಟುಹಾಕಿ ಅದನ್ನು ಪ್ರೋತ್ಸಾಹಿಸಬೇಕಾಗಿದೆ ಎಂದು ಹೇಳಿದರು.

ಈ ನಿಟ್ಟಿನಲ್ಲಿ
ವಿ ಟಿ ಯು ವಿಶ್ವೇಶ್ವರಯ್ಯ ಸಂಶೋಧನಾ ಮತ್ತು ಇನ್ನೋವೇಶನ್ ಫೌಂಡೇಶನ್ ನ್ನು ಸ್ಥಾಪಿಸಿ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಬಗ್ಗೆ ಆಸಕ್ತಿ ಬೆಳೆಸಿ ಅದನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.

“ಎಮರ್ಜ್ -24” ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದರ ಮುಖಾಂತರ ಹೊಸ ಉದ್ಯಮಗಳನ್ನು ಹುಟ್ಟು ಹಾಕುವ ಕಾರ್ಯಮಾಡಲಾಗುವುದು ಎಂದು ಹೇಳಿದರು.

ವಿ ಟಿ ಯು ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಆರ್ ಐ ಎಫ್ ಸಂಚಾಲಕ ಸಂತೋಷ ಇಟ್ಟಣಗಿ ವಂದಿಸಿದರು.