ಜೈಪುರ:
ರಾಜಸ್ಥಾನ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇಂದು (ಮಂಗಳವಾರ) ಸಂಜೆ 4ಕ್ಕೆ ನಿಗದಿಯಾಗಿದ್ದು, ನೂತನ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.
ರಕ್ಷಣಾ ಸಚಿವ ಹಾಗೂ ಪಕ್ಷದ ಕೇಂದ್ರ ವೀಕ್ಷಕರಾದ ರಾಜನಾಥ್ ಸಿಂಗ್, ರಾಷ್ಟ್ರೀಯ ಉಪಾಧ್ಯಕ್ಷ ಸರೋಜ್ ಪಾಂಡೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ನೇತೃತ್ವದಲ್ಲಿ ಪಕ್ಷದ ರಾಜ್ಯ ಕಚೇರಿಯಲ್ಲಿ ಸಭೆ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕ ಭಜನ್ಲಾಲ್ ಶರ್ಮಾ ಹೇಳಿದ್ದಾರೆ.
ಹೊಸದಾಗಿ ಆಯ್ಕೆಯಾಗಿರುವ ಎಲ್ಲ ಶಾಸಕರಿಗೂ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಲಾಗಿದೆ. ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದನ್ನು ಸಭೆ ಬಳಿಕ ಘೋಷಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ, ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೆಘವಾಲ್, ಗಜೇಂದ್ರ ಸಿಂಗ್ ಶೇಖಾವತ್, ಅಶ್ವಿನಿ ವೈಷ್ಣವ್ ಸಿಎಂ ರೇಸ್ನಲ್ಲಿದ್ದಾರೆ.
ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದ 3 ರಾಜ್ಯಗಳಲ್ಲಿ 2 ರಾಜ್ಯಗಳಲ್ಲಿ ಅಚ್ಚರಿಯ ರೀತಿಯಲ್ಲಿ ಮುಖ್ಯಮಂತ್ರಿಗಳನ್ನು ಈಗಾಗಲೇ ಆಯ್ಕೆ ಮಾಡಿದೆ.
ಮಂಗಳವಾರದಂದು ರಾಜಸ್ಥಾನದಲ್ಲೂ ಹೊಸ ಮುಖಕ್ಕೆ ಮುಖ್ಯಮಂತ್ರಿ ಪಟ್ಟ ನೀಡುವ ಮೂಲಕ 2 ಬಾರಿಯ ಮುಖ್ಯಮಂತ್ರಿ, ಬಿಜೆಪಿ ನಾಯಕಿ ವಸುಂಧರಾ ರಾಜೇ ಅವರನ್ನು ಕೈ ಬಿಡಬಹುದು ಎಂದು ಹೇಳಲಾಗಿದೆ.
ಈ ಮೊದಲು ಛತ್ತೀಸ್ಗಢದಲ್ಲಿ ವಿಷ್ಣುದೇವ್ ಮತ್ತು ಮಧ್ಯ ಪ್ರದೇಶದಲ್ಲಿ ಮೋಹನ್ ಯಾದವ್ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಬಿಜೆಪಿ ಘೋಷಣೆ ಮಾಡಿತ್ತು. ಈ 2 ರಾಜ್ಯಗಳಲ್ಲಿ ಹೊಸಬರನ್ನು ಮುಖ್ಯಮಂತ್ರಿ ಮಾಡಿರುವುದರಿಂದ ರಾಜಸ್ಥಾನದಲ್ಲೂ ಇದೇ ಮಾದರಿ ಅನುಸರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ರಾಜಸ್ಥಾನದಲ್ಲಿ ಮಾಜಿ ಸಿಎಂ ವಸುಂಧರಾ ರಾಜೇ ಸಿಎಂ ಪಟ್ಟಕ್ಕೆ ಬೇಡಿಕೆ ಇಟ್ಟಿದ್ದರಿಂದ ಇಲ್ಲಿ ಆಯ್ಕೆ ಕಗ್ಗಂಟಾಗಿತ್ತು.
200 ಸದಸ್ಯ ಬಲದ ರಾಜಸ್ಥಾನದ ವಿಧಾನಸಭೆಯ 199 ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 115 ಕಡೆ ಗೆಲುವು ಸಾಧಿಸಿ, ಸರ್ಕಾರ ರಚಿಸಲು ಬಹುಮತ ಪಡೆದುಕೊಂಡಿದೆ.
ಶ್ರೀಗಂಗಾನಗರದ ಕರಣಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ, ಹಾಲಿ ಶಾಸಕ ಗುರ್ಮೀತ್ ಸಿಂಗ್ ಕೂನಾರ್ ನಿಧನದಿಂದಾಗಿ ಈ ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದೆ.