ಬೆಳಗಾವಿ: ಆಂಜನೇಯ ನಗರದ ವಿಶ್ವಾಸ ಪೌಂಡೇಶನ್ ವತಿಯಿಂದ ಆಧುನಿಕ ಕೃತಕ ಕಾಲು ಜೋಡಣಾ ವಿತರಣಾ ಸಮಾರಂಭ ರವಿವಾರ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ಅಧ್ಯಾಪಕ ಶಶಿಕಾಂತ ತಾರದಾಳೆ ಮಾತನಾಡಿ, ವಿಶ್ವಾಸ ಪೌಂಡೇಶನ್ ಅತ್ಯುತ್ತಮವಾದ ಸೇವೆ ಸಲ್ಲಿಸುತ್ತಿದೆ. ವಿಕಲಾಂಗ ವ್ಯಕ್ತಿಗಳನ್ನು ಸಬಲೀಕರಣಗೊಳಿಸುವ ಉದ್ದೇಶ ಹೊಂದಿದೆ. ಈ ಸಂಸ್ಥೆಯು ದೈಹಿಕ ಅಶಕ್ತ ವ್ಯಕ್ತಿಗಳ ಸಾಂಸ್ಕೃತಿಕವಾಗಿ ಯೋಗಕ್ಷೇಮವನ್ನು ಸುಧಾರಿಸಲು ಪ್ರಯತ್ನಸುತ್ತಿದೆಂದು ಹೇಳಿದರು.

ಬೆಳಗಾವಿಯ ಖ್ಯಾತ ವೈದ್ಯ ಡಾ. ಜಯಪ್ರಕಾಶ ಅಪ್ಪಾಜಿಗೋಳ ಮಾತನಾಡಿ, ಸಮಾಜದಲ್ಲಿ ವಿಕಲಾಂಗರಿಗೆ ಸ್ವಾತಂತ್ರ್ಯ,ನ್ಯಾಯ ಗೌರವ ಸಿಗಬೇಕು. ಎಲ್ಲ ಕ್ಷೇತ್ರದಲ್ಲಿ ಸಮಾನ ಅವಕಾಶ ದೊರೆಯಬೇಕು. ಸಮಾಜದಲ್ಲಿ ವಿಕಲಾಂಗರು ಸಬಲೀಕರಣಗೊಳಿಸಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವಾಸ ಪೌಂಡೇಶನ್ ಮಾರ್ಗದರ್ಶಕ ಸಂತೋಷ ಜೋಶಿ ಮಾತನಾಡಿ, ವಿಕಲಾಂಗರು ಸಮಾಜದಲ್ಲಿ ಮುಂಚಣಿಯಲ್ಲಿ ಬರಬೇಕಾದರೆ ಅವರಿಗೆ ಸಹಾಯ ಸಹಕಾರ ಸಿಗಬೇಕು. ಅವರನ್ನು ಸಶಕ್ತರನ್ನಾಗಿ ಮಾಡುವಲ್ಲಿ ಉತ್ತೇಜನ ನೀಡಬೇಕೆಂದರು.

ಅಂತರರಾಷ್ಟ್ರೀಯ ಕ್ರೀಡಾಪಟುಗಳಾದ ಸಂಜೀವ ಹಮ್ಮನವರ, ಸ್ವಾತಿ ಶೆಟ್ಟೆನವರ, ಎಲ್ಲ ಆಡಳಿತ ಮಂಡಳಿಯ ಸದಸ್ಯರು ಮತ್ತು ವಿಕಲಾಂಗ ಕ್ರೀಡಾಪಟುಗಳು ಉಪಸ್ಥಿತರಿದ್ದರು.

ರಾಷ್ಟ್ರೀಯ ವ್ಹಿಲ್ ಚೇರ್ ವಿಕಲಾಂಗ ಕ್ರೀಡಾಪಟು ಸಿದ್ದಪ್ಪ ಪಟಗುಂದಿ ಅವರಿಗೆ ವಿಶ್ವಾಸ ಪೌಂಡೇಶನ್ ವತಿಯಿಂದ ಆಧುನಿಕ ಕೃತಕ ಕಾಲು ನೀಡಲಾಯಿತು. ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಕಲಾಂಗ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.

ವಿಶ್ವಾಸ ಪೌಂಡೇಶನ್ ಕಾರ್ಯದರ್ಶಿ ಬಸವರಾಜ ಸುಣದೊಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನ್ಯಾಯವಾದಿ ಚಂದ್ರು ನಿರೂಪಿಸಿ, ವಂದಿಸಿದರು.