ನವದೆಹಲಿ:ರಣತಂತ್ರಗಳನ್ನು ಹೆಣೆಯುವಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಗೆ ಎತ್ತಿದ ಕೈ. ಇದೀಗ ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆ ಎದುರಲ್ಲೇ ಸದ್ದು ಗದ್ದಲವಿಲ್ಲದೆ ಲಡಾಕ್ ಪ್ರಾಂತ್ಯದಲ್ಲಿ ಹೊಸ ಜಿಲ್ಲೆಗಳನ್ನು ಘೋಷಣೆ ಮಾಡಿರುವುದು ಸಂಚಲನಕ್ಕೆ ಕಾರಣವಾಗಿದೆ. ಎಲ್ಲರೂ ಚುನಾವಣೆಯಲ್ಲಿ ಮುಳುಗಿರುವಾಗ ಹೊಸ ಜಿಲ್ಲೆಗಳ ಘೋಷಣೆ ಬಿಜೆಪಿ ಪಾಲಿಗೆ ಮುಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಲಾಭ ತಂದು ಕೊಡುತ್ತದೆ ಕಾದು ನೋಡಬೇಕಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮತ್ತೊಂದು ರಣತಂತ್ರ ಹೆಣೆದಿದ್ದಾರೆ .

ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ ಐದು ಹೊಸ ಜಿಲ್ಲೆಗಳನ್ನು ರಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಗೃಹ ಸಚಿವ ಅಮಿತ್ ಶಾ ಸೋಮವಾರ ತಿಳಸಿದ್ದಾರೆ.

ಹೊಸ ಜಿಲ್ಲೆಗಳಿಗೆ ಝನ್‌ಸ್ಕರ್, ದ್ರಾಸ್, ಶಾಮ್, ನುಬ್ರಾ ಮತ್ತು ಛಾಂಗ್‌ಥಂಗ್ ಎಂದು ಹೆಸರಿಸಲಾಗುವುದು ಎಂದೂ ಹೇಳಿದ್ದಾರೆ.

ಈ ಸಂಬಂಧ ಎಕ್ಸ್/ಟ್ವಿಟರ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಅಭಿವೃದ್ಧಿ ಹೊಂದಿದ ಹಾಗೂ ಸಮೃದ್ಧ ಲಡಾಖ್ ನಿರ್ಮಿಸುವ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ, ಕೇಂದ್ರಾಡಳಿತ ಪ್ರದೇಶದಲ್ಲಿ ಐದು ಹೊಸ ಜಿಲ್ಲೆಗಳನ್ನು ರಚಿಸಲು ಕೇಂದ್ರ ಗೃಹ ಸಚಿವಾಲಯ ತೀರ್ಮಾನಿಸಿದೆ. ಹೊಸ ಜಿಲ್ಲೆಗಳಾದ ಝನ್‌ಸ್ಕರ್, ದ್ರಾಸ್, ಶಾಮ್, ನುಬ್ರಾ ಮತ್ತು ಛಾಂಗ್‌ಥಂಗ್‌ನ ಪ್ರತಿ ಮೂಲೆ ಮೂಲೆಗೂ ಆಡಳಿತವನ್ನು ವಿಸ್ತರಿಸುವ ಮೂಲಕ ಜನರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ಒದಗಿಸಲಾಗುವುದು’ ಎಂದು ತಿಳಿಸಿದ್ದಾರೆ.

ಇದರಿಂದಾಗಿ ಲಡಾಖ್‌ನಲ್ಲಿ ಜಿಲ್ಲೆಗಳ ಸಂಖ್ಯೆ 7ಕ್ಕೆ ಏರಲಿದೆ. ಈವರೆಗೆ ಕಾರ್ಗಿಲ್ ಮತ್ತು ಲೇಹ್ ಮಾತ್ರವೇ ಇದ್ದವು.

‘ಲಡಾಖ್ ಜನರಿಗೆ ಹೇರಳ ಅವಕಾಶಗಳನ್ನು ಕಲ್ಪಿಸಲು ಮೋದಿ ಸರ್ಕಾರ ಬದ್ಧವಾಗಿದೆ’ ಎಂದೂ ಹೇಳಿದ್ದಾರೆ.

ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರವು 2019ರ ಆಗಸ್ಟ್ 5ರಂದು ರದ್ದುಪಡಿಸಿತ್ತು. ಜೊತೆಗೆ, ರಾಜ್ಯವನ್ನು ‘ಜಮ್ಮು ಮತ್ತು ಕಾಶ್ಮೀರ’ ಹಾಗೂ ‘ಲಡಾಖ್’ ಎಂದು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು.

ಇದೀಗ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದೆ. ಅಲ್ಲಿನ 90 ವಿಧಾನಸಭಾ ಕ್ಷೇತ್ರಗಳಿಗೆ ಸೆಪ್ಟೆಂಬರ್ 18, 25 ಹಾಗೂ ಅಕ್ಟೋಬರ್ 1ರಂದು ಮತದಾನ ನಡೆಯಲಿದೆ. ಅಕ್ಟೋಬ‌ರ್ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ಬೆಳವಣಿಗೆ ನಡುವೆ ಲಡಾಖ್‌ನಲ್ಲಿ ಹೊಸ ಜಿಲ್ಲೆಗಳನ್ನು ರಚಿಸುವ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.