ನನ್ನ ವಿಡಿಯೋ ಸಂದರ್ಶನವೊಂದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹೊನ್ನಾವರ ಎಂದು ಸಂದರ್ಶನಕಾರರು ಹೇಳಿದ್ದರು. ಹೊನ್ನಾವರ ಉತ್ತರ ಕನ್ನಡದಲ್ಲಿದೆ. ಈ ಬಗ್ಗೆ ವಿಡಿಯೊ ನೋಡಿದವರೊಬ್ಬರು ಕೇಳಿದಾಗ ನಾನು -” ದಕ್ಷಿಣ ಕನ್ನಡ ಜಿಲ್ಲೆ ಉತ್ತರ ಕನ್ನಡಕ್ಕಿಂತ ಹೆಚ್ಚು ಪ್ರಸಿದ್ಧವಾಗಿರುವುದೇ ಅದಕ್ಕೆ ಕಾರಣ ” ಎಂದು ಹೇಳಿದ್ದೆ. ಅದು ವಾಸ್ತವವೂ ಹೌದು.
ಹಿಂದೆ ಬ್ರಿಟಿಷರ ಕಾಲದಲ್ಲಿ ಸಂಯುಕ್ತ ಕೆನರಾ ಜಿಲ್ಲೆಯಾಗಿತ್ತು. ನಂತರ ಉತ್ತರ- ದಕ್ಷಿಣ ಎಂದು ಬೇರೆ ಬೇರೆ ಆಯಿತು. ಆದರೆ ಉತ್ತರ ಕನ್ನಡ ಯಾವ ವಿಚಾರದಲ್ಲೂ ದಕ್ಷಿಣ ಕನ್ನಡದಷ್ಟು ಬೆಳೆಯಲಿಲ್ಲ. ಸಮರ್ಥ ರಾಜಕೀಯ ಧುರೀಣತ್ವ ಸಿಗದೇ ಇದ್ದುದು ಒಂದು ಕಾರಣವಾದರೆ ಉತ್ತರ ಕನ್ನಡದ ಜನ ದಕ್ಷಿಣ ಕನ್ನಡದ ಜನರಷ್ಟು ಸಾಹಸಿಗಳೂ ಅಲ್ಲ, ಜಿಲ್ಲಾಭಿಮಾನಿಗಳೂ ಅಲ್ಲ. ಅಲ್ಲದೇ ಸೋಮಾರಿಗಳು ಕೂಡ. ಕಾಯ್ಕಿಣಿಯವರು ಹೇಳಿದಂತೆ ಉ.ಕ. ಎಂದರೆ ಒನ್ ವೇ ಟ್ರಾಫಿಕ್ ಇದ್ದಂತೆ. ಬೆಳೆಯಬೇಕೆಂದುಕೊಂಡವರು ಬೇರೆ ಜಿಲ್ಲೆಗಳಿಗೆ , ರಾಜ್ಯಕ್ಕೆ ಹೋಗಿ ಬೆಳೆದರು.
ದಕ್ಷಿಣ ಕನ್ನಡಕ್ಕೆ ವೈಕುಂಠ ಬಾಳಿಗಾ, ಪೈಗಳಂತಹ ಸಮರ್ಥರು ದೊರಕಿದರು. ಮಂಗಳೂರು ಬಂದರು, ಮಣಿಪಾಲದಂತಹ ಮಾಯಾನಗರಿ, ಉಡುಪಿ, ಧರ್ಮಸ್ಥಳ, ಕೊಲ್ಲೂರಿನಂತಹ ಕ್ಷೇತ್ರ ಸ್ಥಳಗಳು, ಸಿಂಡಿಕೇಟ್ ಮತ್ತಿತರ ಬ್ಯಾಂಕುಗಳು ಎಲ್ಲವೂ ಆ ಜಿಲ್ಲೆಯ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡಿವೆ. ಪಂಜೆಯವರು, ಶಿವರಾಮ ಕಾರಂತರಂತಹ ಪ್ರಸಿದ್ಧ ವ್ಯಕ್ತಿಗಳಿಂದಲೂ ಆ ಜಿಲ್ಲೆಗೆ ಹೆಸರು ಬಂದಿದೆ. . ಅಲ್ಲಿಯ ದೇವಸ್ಥಾನಗಳು ಅನೇಕ ಯಕ್ಷಗಾನ ವೃತ್ತಿ ಮೇಳಗಳ ಹುಟ್ಟಿಗೆ ಕಾರಣವಾಗಿವೆ. ಉತ್ತರ ಕನ್ನಡದ ಒಂದು ದೇವಸ್ಥಾನವೂ ಅಂತಹ ಪ್ರಯತ್ನಕ್ಕೆ ಕೈಹಾಕಲಿಲ್ಲ. ಸಿರಸಿ ಮಾರಿಕಾಂಬಾ, ಇಡಗುಂಜಿ ದೇವಸ್ಥಾನಗಳಿಗೆ ಅದು ಸಾಧ್ಯವಿತ್ತು. ಆದರೆ ಅಂತಹ ಸಾಹಸ ಮಾಡುವ ಜನರು ಇರಲಿಲ್ಲ.ಎಲ್ಲ ವಿಷಯಗಳಲ್ಲೂ ಅವರು ನಮ್ಮನ್ನು ಹಿಂದೆ ಹಾಕಿದರು. ಬೇರೆ ದೇಶಕ್ಕೆ ಹೋದರೂ ಅಲ್ಲಿ ಉಡುಪಿ ಹೊಟೆಲ್ ಹಾಕಿದರು. ಉದಯವಾಣಿ ಪತ್ರಿಕೆ ತರಿಸಿದರು. ( ಕೇರಳದ ಕಾಕಾಗಳ ಹಾಗೆ). ಅವರಲ್ಲಿ ಬೆಳೆಯುವ ಛಲ ಇದೆ. ಜಿಲ್ಲಾಭಿಮಾನ ಇದೆ. ಸಾಹಸ ಪ್ರವೃತ್ತಿ ಇದೆ. ಮಹತ್ವಾಕಾಂಕ್ಷೆ ಇದೆ. ಉತ್ತರ ಕನ್ನಡ ಜಿಲ್ಲೆಯವರಿಗೆ ? ಒಂದು ಸೂಪರ್ ಸ್ಪೆ. ಹಾಸ್ಪಿಟಲ್ ಕೊಡಿ, ಒಂದು ವಿವಿ ಕೊಡಿ, ಒಂದು ವಿಮಾನ ನಿಲ್ದಾಣ ಕೊಡಿ ಎಂದೆಲ್ಲ ಬೇಡುವ ಸ್ಥಿತಿಯನ್ನು ಇಂದಿಗೂ ನಾವು ಹಾಗೇ ಉಳಿಸಿಕೊಂಡಿದ್ದೇವೆ. ಪ್ರಗತಿ ವಿರೋಧಿ ಮನಸ್ಥಿತಿಯವರು ಮಾತ್ರ ಇದ್ದೇಇದ್ದಾರೆ. ನಮ್ಮ ಜಿಲ್ಲೆಯ ಅಭಿಮಾನ ನಮಗಿರಬೇಕಾದ್ದು ನಿಜವಾದರೂ ಸತ್ಯವನ್ನು ಒಪ್ಪಿಕೊಳ್ಳಲೇಬೇಕಷ್ಟೆ.
ಆದ್ದರಿಂದ ಬೇರೆ ಪ್ರದೇಶಗಳ ಜನರಿಗೆ ತಟ್ಟನೇ ದ.ಕ. ನೆನಪಾದಂತೆ ಉ.ಕ. ನೆನಪಾಗದೇ ಇದ್ದರೆ ಅಚ್ಚರಿಯೇನಿಲ್ಲ.
*ಎಲ್. ಎಸ್. ಶಾಸ್ತ್ರಿ, ಹಿರಿಯ ಪತ್ರಕರ್ತರು, ಸಾಹಿತಿಗಳು