ವಿಜಯಪುರ: ಜಿಲ್ಲೆಯ ಜಂಬಗಿ (ಆ) ಗ್ರಾಮದ ಕೆರೂರವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ವಸ್ತಿ ಶಾಲೆ ಬಳಿ ಹಾರಿಬಂದ ರಾಷ್ಟ್ರ ಪಕ್ಷಿಯನ್ನು ಕಂಡು ಮಕ್ಕಳು ಸಂಭ್ರಮಿಸಿದ್ದಾರೆ.

ಶಾಲಾ ಆವರಣದಲ್ಲಿ ಪಂಕ್ತಿ ಸಾಲಿನಲ್ಲಿ ಕುಳಿತು ಮಕ್ಕಳು ಬಿಸಿಯೂಟ ಸೇವಿಸುವ ಮುನ್ನ ಪ್ರಾರ್ಥನೆ ಸಲ್ಲಿಸುವಾಗ ಆಹಾರ ಅರಸಿ ಅಲ್ಲಿಗೆ ಹಾರಿ ಬಂದ ನವಿಲು ಮಕ್ಕಳ ಅನ್ನದ ತಟ್ಟೆಯತ್ತ ಸಾಗಿದೆ. ಈ ವೇಳೆ ಸ್ಥಳದಲ್ಲಿ ಬಿಸಿಯೂಟ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶಿಕ್ಷಕರ ಸಲಹೆ ಮೇರೆಗೆ ಓರ್ವ ವಿದ್ಯಾರ್ಥಿನಿ ತನ್ನ ತಟ್ಟೆಯನ್ನು ನವಿಲಿಗೆ ಕೊಟ್ಟು ತಾನು ಬೇರೊಂದು ತಟ್ಟೆ ಪಡೆದು ಊಟ ಮಾಡಿದ್ದಾಳೆ.

ಇತ್ತ ಆ ಪಕ್ಷಿಯೂ ಮಕ್ಕಳೊಂದಿಗೆ ತರಗತಿಗೆ ಭೇಟಿ ನೀಡಿ ಪುಳಕವನ್ನುಂಟು ಮಾಡಿತು. ಪ್ರಾರ್ಥನೆ ವೇಳೆ ಧ್ವನಿಗೂಡಿಸಿತು. ಬಿಸಿಯೂಟ ವೇಳೆ ಮಕ್ಕಳ ಜತೆ ಊಟವನ್ನು ಸೇವಿಸಿ ಗಮನ ಸೆಳೆಯಿತು. ವರ್ಗ ಕೋಣೆಯ ಬಳಿ ಬಂದ ನಾಟ್ಯಮಯೂರಿ ಧಾನ್ಯಗಳನ್ನು ಸವಿದು ತನ್ನ ಹಸಿವು ನೀಗಿಸಿಕೊಂಡಿದೆ. ಒಟ್ಟಾರೆ ಈ ದೃಶ್ಯ ಈಗ ಸಂಚಲನಕ್ಕೆ ಕಾರಣವಾಗಿದೆ. ಮಕ್ಕಳ ಪಕ್ಷಿ ಪ್ರೇಮ ಹಾಗೂ ನವಿಲು ಸಹ ಯಾವುದೇ ರೀತಿಯಲ್ಲಿ ಬೆದರದೆ ಆಹಾರ ಸೇವನೆ ಮಾಡುತ್ತಿರುವ ಸನ್ನಿವೇಶ ಎಲ್ಲರ ಗಮನ ಸೆಳೆದಿದೆ.