ಬೆಂಗಳೂರು : ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ರದ್ದುಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್ ಅರ್ಜಿ ಗುರುವಾರ ಹೈಕೋರ್ಟ್ ಒಂಬತ್ತರಲ್ಲಿ ವಿಚಾರಣೆಗೆ ಬರಲಿದ್ದು, ಇಡೀ ರಾಜ್ಯದ ಗಮನ ಕಲಾಪದ ಮೇಲಿದೆ. ಒಟ್ಟಾರೆ ಈ ಪ್ರಕರಣ ಇದೀಗ ರಾಜ್ಯದ ಗಮನ ಸೆಳೆದಿದ್ದು ಸಂಚಲನಕ್ಕೆ ಕಾರಣವಾಗಿದೆ.

ಈ ವಿಚಾರಣೆಯ ಫಲಿತಾಂಶ ಏನಾಗಬಹುದು ಎಂಬ ತೀವ್ರ ಕುತೂಹಲ ರಾಜ್ಯ ಹಾಗೂ ರಾಷ್ಟ್ರ ರಾಜಕೀಯ ವಲಯದಲ್ಲಿದೆ. ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಗುರುವಾರವೇ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸುತ್ತದೆಯೇ ಅಥವಾ ವಾದ-ಪ್ರತಿ ವಾದ ಪೂರ್ಣಗೊಳ್ಳದೆ ಅರ್ಜಿ ವಿಚಾರಣೆ ಮುಂದೂಡಿಕೆ ಕಾಣುತ್ತದೆಯೇ ಎಂಬ ಕುತೂಹಲ ಮೂಡಿದೆ. ರಾಜಕೀಯ ವಲಯದಲ್ಲಂತೂ ಈ ಬಗ್ಗೆ ಚರ್ಚೆಗಳು ಗಹನವಾಗಿ ಸಾಗಿವೆ.