ಬೆಂಗಳೂರು: “ಕನ್ನಡ ಭಾರತಿ ಈಗ ವಿಶ್ವಕ್ಕೆ ಆರತಿ. ಕನ್ನಡ ಭಾಷೆಯ ಡಿಂಡಿಮ ಸಪ್ತ ಸಾಗರದ ಆಚೆ ಮೊಳಗುತಿದೆ. ಕನ್ನಡ ತಾಯಿ ಈಗ ವಿಶ್ವ ಸಾರಥಿಯಾಗಿದ್ದಾಳೆ. ಕನ್ನಡ ನುಡಿ ವಿಶ್ವ ನುಡಿಯಾಗುತ್ತಿದೆ, ಕನ್ನಡಿಗರ ತತ್ವ ವಿಶ್ವಮಾನವ ತತ್ವವಾಗಿ ಅಕ್ಕ ಕನ್ನಡ ಸಮ್ಮೇಳನದಿಂದ ಸಾಕಾರಗೊಂಡಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಅಕ್ಕ ಸಮ್ಮೇಳನಕ್ಕೆ ಶುಭ ಕೋರಿದ ಅವರು “ಇದು ಅಕ್ಕ ಸಮ್ಮೇಳನವಲ್ಲ, ಎಲ್ಲಾ ಭಾಷೆಗಳ ಹಿರಿಯಕ್ಕನ ಸಮ್ಮೇಳನ. ವಿಶ್ವಮಟ್ಟದಲ್ಲಿ ಕನ್ನಡದ ಹಬ್ಬವನ್ನು ಮಾಡುತ್ತಿರುವ ಹೊರ ನಾಡಿನ ಕನ್ನಡಿಗರ ಭಾಷಾ ಅಭಿಮಾನ ಮೆಚ್ಚುವಂತಹದ್ದು. ಮಾತೃಭಾಷೆಯ ಹಬ್ಬದ ಮೂಲಕ ನಮ್ಮ ಕನ್ನಡದ ಸಂಸ್ಕೃತಿಯನ್ನು ಈ ನಾಡಿನಿಂದ ಹೊರಗೆ ಇದ್ದರೂ ಉಳಿಸಿ ಬೆಳೆಸುತ್ತಿರುವ ಎಲ್ಲ ವಿಶ್ವ ಕನ್ನಡಿಗರ ಪ್ರಯತ್ನ ಶ್ಲಾಘನೀಯ” ಎಂದರು.
“ಕರ್ನಾಟಕದಲ್ಲಿ ಕನ್ನಡದ ಹಬ್ಬವನ್ನು ಆಚರಣೆ ಮಾಡುವುದು ಸಾಮಾನ್ಯ. ಆದರೆ ಹೊರನಾಡಿನಲ್ಲಿ ಆಚರಣೆ ಮಾಡುತ್ತಿರುವುದು ಅಮೆರಿಕದಲ್ಲಿರುವ ಕನ್ನಡಿಗರ ಭಾಷಾಭಿಮಾನಕ್ಕೆ ಕನ್ನಡಿ. ಪ್ರತಿ ಎರಡು ವರ್ಷಕ್ಕೆ ಒಮ್ಮೆ ನಡೆಯುವ ಹಬ್ಬವನ್ನು ನಡೆಸುವ ಬದ್ಧತೆಗೆ ವಂದನೆಗಳು” ಎಂದರು.
“ಜಗತ್ತಿನಲ್ಲಿಯೇ ಅತ್ಯಂತ ಮುಂದುವರೆದ ರಾಷ್ಟ್ರದಲ್ಲಿ ನೀವು ಇದ್ದೀರಿ. ಇಡೀ ಪ್ರಪಂಚದಾದ್ಯಂತ ಕನ್ನಡಿಗರು ಅನೇಕ ದೇಶದಲ್ಲಿ ಹರಡಿಕೊಂಡಿದ್ದಾರೆ. ಕರ್ನಾಟಕದ ಮುಖಾಂತರ ಭಾರತವನ್ನು ನೋಡಲಾಗುತ್ತಿದೆ. ನಮ್ಮಲ್ಲಿ ಇರುವ ಮಾನವ ಸಂಪನ್ಮೂಲ, ವೈದ್ಯರು, ಇಂಜಿನಿಯರ್ ಗಳು ವಿಶ್ವದ ಅನೇಕ ದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದ ಮಣ್ಣಿನ ಜ್ಞಾನ ಶಕ್ತಿ ವಿಶ್ವದ ನಾನಾ ದೇಶಗಳಿಗೆ ಸಿಗುತ್ತಿದೆ ” ಎಂದು ಹೇಳಿದರು.
“ಅನೇಕ ವೃತ್ತಿಗಳಲ್ಲಿ, ಸ್ವಂತ ಉದ್ಧಿಮೆಗಳನ್ನು ನಡೆಸಿಕೊಂಡು ಅನಿವಾಸಿ ಕನ್ನಡಿಗರು ಉತ್ತಮ ಹೆಸರು ಮಾಡಿದ್ದಾರೆ. ಕನ್ನಡದ ರಾಯಭಾರಿಗಳು ಹಾಗೂ ಭಾರತದ ರಾಯಭಾರಿಗಳೂ ಹೌದು. ಕರ್ನಾಟಕ ಎಂದು ಹೆಸರಿಟ್ಟು 50 ವರ್ಷ ತುಂಬಿದ ಈ ಹೊತ್ತಿನಲ್ಲಿ ನಡೆಯುತ್ತಿರುವ ಅಕ್ಕ ಸಮ್ಮೇಳನ ಕರ್ನಾಟಕದ ಕನ್ನಡಿಗರಿಗೂ ಸ್ಪೂರ್ತಿ ತಂದಿದೆ” ಎಂದು ಹೇಳಿದರು.
“ರಾಜಕೀಯ ಕಾರ್ಯಗಳ ಒತ್ತಡದ ಕಾರಣಕ್ಕೆ ನಾವು ಭಾಗವಹಿಸಲು ಆಗಲಿಲ್ಲ. ಮುಖ್ಯಮಂತ್ರಿಗಳು ಸಹ ನಿಮ್ಮ ಬಳಿ ಕ್ಷಮೆ ಕೇಳಿದ್ದಾರೆ. ಈ ಕಾರ್ಯಕ್ರಮಕ್ಕೆ ದುಡಿದಿರುವ ಹೊರನಾಡಿನ ಹಾಗೂ ಕರ್ನಾಟಕದ ಕನ್ನಡಿಗರಿಗೆ ಈ ವೇಳೆ ಶುಭ ಕೋರುತ್ತೇನೆ” ಎಂದರು.
“ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ, ಪದುಮನಾಭನ ಪಾದ ಭಜನೆ ಪರಮ ಸುಖವಯ್ಯ ಎನ್ನುವ ಪುರಂದರದಾಸರ ಮಾತಿದೆ. ವಿಶ್ವ ಕನ್ನಡಿಗರ ಸಂಭ್ರಮದಲ್ಲಿ ವರ್ಚುಯಲ್ ಆಗಿ ಭಾಗವಹಿಸುವ ಭಾಗ್ಯ ಸಿಕ್ಕಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದಗಳು” ಎಂದರು.