ಪುತ್ತೂರು: ಕಾಡಿನ ರಾಜ ಎಂದೇ ಕರೆಸಿಕೊಂಡಿರುವ ಸಿಂಹ ತಾನು ನಡೆಯುವಾಗ ಪ್ರತಿ ಎರಡು ಹೆಜ್ಜೆಗೊಮ್ಮೆ ಹಿಂತಿರುಗಿ ನೋಡುವ ಮೂಲಕ ತಾನು ನಡೆದ ಬಂದ ದಾರಿಯ ಬಗ್ಗೆ ಅವಲೋಕನ ಮಾಡುತ್ತೆ ಮನುಷ್ಯ ಕೂಡ ಅದೇ ರೀತಿ ತಾನು ಬೆಳೆದು ಬಂದ ದಾರಿಯ ಬಗ್ಗೆ ಮರೆಯಬಾರದು. ತಾನು ಎಷ್ಟೇ ಶ್ರೀಮಂತನಾದರೂ, ಅಧಿಕಾರದಲ್ಲಿದ್ದರೂ ತನ್ನ ಹುಟ್ಟಿನ ದಿನಗಳ ಬಗ್ಗೆ ಮೆಲುಕು ಹಾಕುತ್ತಾ ತನ್ನ ಸಂಪಾದನೆಯ ಒಂದಂಶವನ್ನು ಸಮಾಜದ ಒಳ್ಳೆಯ ಕೆಲಸಗಳಿಗೆ ಕೊಡುವ ಗುಣ ನಮ್ಮಲ್ಲಿ ಬೆಳೆಯಬೇಕು ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ಪಬ್ಲಿಕ್ ಸ್ಕೂಲ್ ಕುಂಬ್ರ ಮತ್ತು ಹಿರಿಯ ವಿದ್ಯಾರ್ಥಿ ಸಂಘ ಕುಂಬ್ರ ಇದರ ಜಂಟಿ ಆಶ್ರಯದಲ್ಲಿ ಸೆ.೧ ರಂದು ಕುಂಬ್ರ ಶಾಲೆಯ ಆಟದ ಮೈದಾನದಲ್ಲಿ ನಡೆದ ಬಾಂತಲಪ್ಪುಡ್ ಕುಸಾಲ್ದ ಗೊಬ್ಬುಲು ೨೦೨೪ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಸಿ ಮಾತನಾಡಿದರು. ತಾನು ಕೂಡ ಬಡತನದಲ್ಲಿ ಹುಟ್ಟಿ ಬೆಳೆದವ ಇಂದೂ ಕೂಡ ನಾನು ಶ್ರೀಮಂತ ಅಂತ ಕರೆಸಿಕೊಳ್ಳಲು ಇಷ್ಟಪಡಲ್ಲ. ನನ್ನ ಗಳಿಕೆಯ ಒಂದಂಶವನ್ನು ಸಮಾಜಕ್ಕಾಗಿ ನಾನು ಮೀಸಲಿಟ್ಟಿದ್ದೇನೆ. ಇದರಿಂದ ನನಗೆ ಎಳ್ಳಷ್ಟು ಕಡಿಮೆಯಾಗಿಲ್ಲ, ಸಮಾಜದ ಬಡವರಿಗೆ ಕೊಟ್ಟಷ್ಟು ನನಗೆ ದೇವರು ಕೊಡುತ್ತಿದ್ದಾನೆ ಎಂದ ಅಶೋಕ್ ಕುಮಾರ್ ರೈಯವರು ನನ್ನನ್ನು ತಿದ್ದಿ ತೀಡಿ ಬೆಳೆಸಿದ ಹೆತ್ತವರಿಗೆ ಮತ್ತು ಗುರುಗಳಿಗೆ ಈ ಸಂದರ್ಭದಲ್ಲಿ ನಮನಗಳನ್ನು ಸಲ್ಲಿಸಿದರು.
ಒಂದು ಬಂಡೆಕಲ್ಲು ಕಾಲಡಿ ಇದ್ದರೆ ಅದನ್ನು ತುಳಿದುಕೊಂಡು ಹೋಗುತ್ತೇವೆ ಅದೇ ಕಲ್ಲು ಶಿಲ್ಪಿಯ ಕೈ ಸೇರಿದರೆ ದೇವರಾಗುತ್ತದೆ ಅದೇ ರೀತಿ ಮಕ್ಕಳು ಕೂಡ ಮಕ್ಕಳಲ್ಲಿ ಬೇರೆ ಬೇರೆ ಪ್ರತಿಭೆಗಳಿವೆ ಆ ಪ್ರತಿಭೆಗಳನ್ನು ಸಮಾಜಕ್ಕೆ ತೋರಿಸುವ ಕೆಲಸವನ್ನು ಶಿಕ್ಷಕರು ಮಾಡುತ್ತಾರೆ ಎಂದ ಅಶೋಕ್ ಕುಮಾರ್ ರೈಯವರು, ಮಕ್ಕಳ ಪ್ರತಿಭೆಗಳಿಗೆ ಪ್ರೋತ್ಸಾಹ ಕೊಡುವ ಕೆಲಸ ಹೆತ್ತವರು ಮಾಡಬೇಕು ಎಂದರು.
ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಕಾರ್ಯಾಧ್ಯಕ್ಷ, ಹಿರಿಯ ವಿದ್ಯಾರ್ಥಿ ಸಂಘದ ಸಂಚಾಲಕ ರಕ್ಷಿತ್ ರೈ ಮುಗೇರುರವರು ಮಾತನಾಡಿ, ಎಲ್ಲರ ಸಹಕಾರದಿಂದ ಕಾರ್ಯಕ್ರಮ ನಡೆದಿದೆ. ಕುಂಬ್ರ ಶಾಲೆಯಲ್ಲಿ ಕಲಿತು ಹೋದವರನ್ನು ಮತ್ತೊಮ್ಮೆ ಈ ಶಾಲೆಯೊಳಗೆ ಕರೆಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಭೇಟಿ ಕೊಡುವ ಮೂಲಕ ಶಾಲೆಯ ಅಭಿವೃದ್ದಿಯಲ್ಲಿ ಪಾಲ್ಗೊಳ್ಳಬೇಕು ಎಂಬುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ಬಾಂತಲಪ್ಪುಡ್ ಕುಸಾಲ್ದ ಗೊಬ್ಬುಲು ಎಂಬ ಕಾರ್ಯಕ್ರಮದೊಂದಿಗೆ ಎಲ್ಲರನ್ನು ಸೇರಿಸುವ ಪ್ರಯತ್ನ ನಡೆದಿದೆ. ಸಹಕಾರ ನೀಡಿದ ಸರ್ವರಿಗೂ ವಂದನೆಗಳನ್ನು ಅರ್ಪಿಸುತ್ತೇನೆ ಎಂದರು.
ಸನ್ಮಾನ ಕಾರ್ಯಕ್ರಮ
ನಿವೃತ್ತ ಪ್ರಾಂಶುಪಾಲ ಜತ್ತಪ್ಪ ರೈ ಕುಂಬ್ರ ಮತ್ತು ಕುಂಬ್ರ ಅಂಗನವಾಡಿ ಸಹಾಯಕಿ ರಾಜೀವಿ ಕುಂಬ್ರರವರುಗಳನ್ನು ಈ ಸಂದರ್ಭದಲ್ಲಿ ಶಾಸಕರು ಹಾಗೂ ಗಣ್ಯರು ಶಾಲು, ಹಾರ, ಪೇಟಾ, ಫಲಪುಷ್ಪ ಕೊಟ್ಟು ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿದ ಜತ್ತಪ್ಪ ರೈಯವರು ಕೃತಜ್ಞತೆಯ ಮಾತುಗಳನ್ನಾಡಿ ಎಲ್ಲರಿಗೂ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿದ್ದ ಬಿಎಂಎಸ್ ಕಟ್ಟಡ ಕಾರ್ಮಿಕರ ಸಂಘದ ಕುಂಬ್ರ ವಲಯ ಅಧ್ಯಕ್ಷ ಪುರಂದರ ಶೆಟ್ಟಿ ಮುಡಾಲ ಶುಭ ಹಾರೈಸಿದರು. ವೇದಿಕೆಯಲ್ಲಿ ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ವಿನೋದ್ ಶೆಟ್ಟಿ ಮುಡಾಲ, ಶೀನಪ್ಪ ನಾಯ್ಕ ಮುಡಾಲ, ನಿಮಿತಾ ರೈ, ಶಾರದಾ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಪೂರ್ವಾಧ್ಯಕ್ಷ ಪುರಂದರ ರೈ ಕುಯ್ಯಾರು, ಕುಂಬ್ರ ಕೆಪಿಎಸ್ ಪ್ರೌಢ ಶಾಲಾ ವಿಭಾಗದ ಹಿರಿಯ ಪದವೀಧರ ಸಹಾಯಕರಾದ ಮಮತಾ ಕೆ.ಎಸ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ಜೂಲಿಯಾನ ಮೊರೆಸ್, ಕುಂಬ್ರ ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಉದ್ಯಮಿ ಶಿವರಾಮ ಅಳ್ವ ಸಾಜ ಮತ್ತಿತರರು ಉಪಸ್ಥಿತರಿದ್ದರು. ಪದ್ಮನಾಭ ಆಚಾರ್ಯ ಪ್ರಾರ್ಥಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮೇಶ್ ಕುಮಾರ್ ಬರೆಮೇಲು ಸ್ವಾಗತಿಸಿ, ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈಯವರು ಆಶಯ ಮಾತುಗಳೊಂದಿಗೆ ವಂದಿಸಿದರು. ನೇಮಾಕ್ಷ ಸುವರ್ಣ ಮತ್ತು ಹರೀಶ್ ರೈ ಮುಗೇರ್ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಕಾರ್ಯಾಧ್ಯಕ್ಷ, ಹಿರಿಯ ವಿದ್ಯಾರ್ಥಿ ಸಂಘದ ಸಂಚಾಲಕ ರಕ್ಷಿತ್ ರೈ ಮುಗೇರುರವರು ಕ್ರೀಡಾ ಜ್ಯೋತಿ ಬೆಳಗಿಸಿದರು. ಕೋಟಿ ಚೆನ್ನಯ ಕ್ರೀಡಾಂಗಣವನ್ನು ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಶಾಂತಿವನರವರು ಉದ್ಘಾಟಿಸಿದರು. ಚಿಣ್ಣರ ಕ್ರೀಡೆಯನ್ನು ಕುಂಬ್ರ ವರ್ತಕರ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ ರೈ ಕೊಪ್ಪಳ ಉದ್ಘಾಟಿಸಿದರು. ಅಗೋಳಿ ಮಂಜಣ್ಣ ಪಾಕ ಶಾಲೆಯನ್ನು ಉದ್ಯಮಿ, ಮಾತೃಶ್ರೀ ಅರ್ಥ್ ಮೂವರ್‍ಸ್ ಮಾಲಕ ಮೋಹನದಾಸ ರೈ ಕುಂಬ್ರ ಉದ್ಘಾಟಿಸಿದರು. ಕೊರಗಜ್ಜ ಕ್ರೀಡಾಂಗಣವನ್ನು ಉದ್ಯಮಿ ಅಶೋಕ್ ಪೂಜಾರಿ ಬೊಳ್ಳಾಡಿ ಉದ್ಘಾಟಿಸಿದರು. ವಾಲಿಬಾಲ್ ಕ್ರೀಡೆಯನ್ನು ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಹಾಗೂ ಪತ್ರಕರ್ತ ಸಿಶೇ ಕಜೆಮಾರ್ ಉದ್ಘಾಟಿಸಿದರು. ಸಭಾ ವೇದಿಕೆಯನ್ನು ರಂಗಭೂಮಿ ಕಲಾವಿದ, ಸಾಂಸ್ಕೃತಿಕ ಸಂಘಟಕ ಸುಂದರ ರೈ ಮಂದಾರ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮೇಶ್ ಕುಮಾರ್ ಬರೆಮೇಲು ಅಧ್ಯಕ್ಷತೆ ವಹಿಸಿದ್ದರು.

ಒಳಮೊಗ್ರು ಗ್ರಾಪಂ ಸದಸ್ಯರುಗಳಾದ ವಿನೋದ್ ಶೆಟ್ಟಿ ಮುಡಾಲ, ಶೀನಪ್ಪ ನಾಯ್ಕ, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ, ಕುಂಬ್ರ ಕೆಪಿಎಸ್ ಪ್ರೌಢ ಶಾಲಾ ವಿಭಾಗದ ಹಿರಿಯ ಪದವೀಧರ ಸಹಾಯಕರಾದ ಮಮತಾ ಕೆ.ಎಸ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕರಾದ ಜೂಲಿಯಾನ ಮೊರೆಸ್ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮೇಶ್ ಕುಮಾರ್ ಬರೆಮೇಲು ಸ್ವಾಗತಿಸಿ, ಕಾರ್ಯದರ್ಶಿ ನಝೀರ್ ಪಿ.ಪರ್ಪುಂಜ ವಂದಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಶೇಖರ ರೈ ಕುರಿಕ್ಕಾರ, ಕೋಶಾಧಿಕಾರಿ ವಿಶ್ವನಾಥ ರೈ ಕೋಡಿಬೈಲು, ಕ್ರೀಡಾ ಕಾರ್ಯದರ್ಶಿ ಮನೋಜ್ ಕುಮಾರ್, ಶ್ರೀನಿವಾಸ ರೈ ಕುಂಬ್ರ, ಎಸ್.ಮಾಧವ ರೈ ಕುಂಬ್ರ, ಮೋನಪ್ಪ ಪೂಜಾರಿ ಬಡಕ್ಕೋಡಿ, ಪದ್ಮನಾಭ ರೈ ಅರೆಪ್ಪಾಡಿ, ಚೆನ್ನ ಬಿಜಳ, ಚಿನ್ನಯ್ಯ ಆಚಾರ್ಯ, ಸುಂದರ ರೈ ಮಂದಾರರವರುಗಳು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಸಂಘದ ಪದಾಧಿಕಾರಿಗಳು ಸಹಕರಿಸಿದ್ದರು.

ಈ ದೀಪಾವಳಿಗೆ ೭೫ ಸಾವಿರ ಮಂದಿಗೆ ಸೀರೆ ವಿತರಣೆ
ದುಡ್ಡು ಇದ್ದವರು ಈ ಸಮಾಜಕ್ಕೆ ಬಹಳಷ್ಟು ಮಂದಿ ಇದ್ದಾರೆ ಆದರೆ ಅದರಲ್ಲಿ ಸಮಾಜದ ಬಡವರಿಗೆ ಸಹಾಯ ಮಾಡುವವರು ಕೆಲವು ಮಂದಿ ಮಾತ್ರ ಇದ್ದಾರೆ. ೧೩ ವರ್ಷಗಳ ಹಿಂದೆ ದೀಪಾವಳಿ ಹಬ್ಬಕ್ಕೆ ನಮ್ಮ ಮನೆಗೆ ಬರುತ್ತಿದ್ದ ಒಂದಷ್ಟು ಮಂದಿಗೆ ಅಮ್ಮ ತಿಂಡಿ, ದೋಸೆ ಕೊಡುತ್ತಿದ್ದರು. ಮುಂದೆ ನನಗೆ ಉದ್ಯಮದಲ್ಲಿ ಸ್ವಲ್ಪ ಹಣ ಬಂತು ಆಗ ಅಮ್ಮನಲ್ಲಿ ಮುಂದಿನ ವರ್ಷಕ್ಕೆ ಸೀರೆ ಕೊಡುವ ಅಂತ ಹೇಳಿದೆ.ಅದಕ್ಕೆ ಅಮ್ಮ ಒಮ್ಮೆ ಕೊಟ್ಟರೆ ಮುಂದೆ ಮತ್ತಷ್ಟು ಜನ ಬಂದಾರೂ ಅಂತ ಹೇಳಿದ್ರು ಹಾಗೇ ಪ್ರಥಮ ವರ್ಷ ಒಂದಷ್ಟು ಮಂದಿಗೆ ಸೀರೆ ಕೊಟ್ಟೆವು, ಅಮ್ಮ ಹೇಳಿದಂತೆ ಮುಂದೆ ೨೦೦ ಕ್ಕೂ ಅಧಿಕ ಮಂದಿಗೆ ಸೀರೆ ಕೊಡುವ ಭಾಗ್ಯ ಬಂತು ಹಾಗೇ ಬಂದು ಕಳೆದ ವರ್ಷ ೬೩ ಸಾವಿರದ ೫೦೦ ಮಂದಿಗೆ ಸೀರೆ ವಿತರಣೆ ಮಾಡಿದ್ದೇವೆ. ಈ ವರ್ಷದ ದೀಪಾವಳಿಗೆ ೭೫ ಸಾವಿರ ಮಂದಿಗೆ ಸೀರೆ ಕೊಡುವ ಬಗ್ಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ ಎಂದು ಅಶೋಕ್ ಕುಮಾರ್ ರೈಯವರು ಹೇಳಿದರು. ಸೀರೆ ಕೊಡುವ ವ್ಯವಸ್ಥೆಗೆ ದೇವರು ನನಗೆ ಎಲ್ಲೂ ಕಡಿಮೆ ಮಾಡಿಲ್ಲ, ಸುಮಾರು ೩ ರಿಂದ ೪ಕೋಟಿ ರೂಪಾಯಿ ಖರ್ಚು ಆಗುತ್ತದೆ. ತಿಂಗಳಿಗೆ ೩೦ ಲಕ್ಷ ರೂಪಾಯಿ ಬರೇ ಸೀರೆಗೆ ನಾನು ಮೀಸಲು ಇಡಬೇಕಾಗಿದೆ ಎಂದ ಅಶೋಕ್ ರೈಯವರು, ನಾವು ನಮ್ಮ ಗಳಿಕೆಯ ಒಂದಂಶವನ್ನು ಸಮಾಜದ ಬಡವರಿಗೆ ದಾನ ಮಾಡಿದರೆ ದೇವರು ನಮಗೆ ಇನ್ನೊಂದು ರೂಪದಲ್ಲಿ ಕೊಡುತ್ತಾನೆ ಎಂಬುದಕ್ಕೆ ನಾನೇ ಉದಾಹರಣೆ ಎಂದು ಅವರು ಹೇಳಿದರು.

ಹಿರಿಯ ವಿದ್ಯಾರ್ಥಿ ಸಂಘಕ್ಕೆ ಶಾಸಕರಿಂದ ಶ್ಲಾಘನೆ
ಬಹಳಷ್ಟು ಕಡೆಗಳಲ್ಲಿ ಹಿರಿಯ ವಿದ್ಯಾರ್ಥಿ ಸಂಘಗಳಿವೆ ಅದರೆ ಹೆಚ್ಚಿನ ಕಡೆಗಳಲ್ಲಿ ಕೇವಲ ಲೆಕ್ಕಕ್ಕೆ ಮಾತ್ರ ಹಳೆ ವಿದ್ಯಾರ್ಥಿ ಸಂಘಗಳಿವೆ ಅದರೆ ಕುಂಬ್ರದ ಈ ಹಳೆ ವಿದ್ಯಾರ್ಥಿ ಸಂಘ ಒಂದು ಒಳ್ಳೆಯ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ, ತುಳುನಾಡಿನ ಸಂಸ್ಕೃತಿ, ಸಂಸ್ಕಾರ ಹಾಗೇ ಆಟಗಳನ್ನು ಮತ್ತೊಮ್ಮೆ ನೆನಪು ಮಾಡಿಸುವ ಕೆಲಸ ಸಂಘದಿಂದ ಆಗಿದೆ ಎಂದು ಅಶೋಕ್ ಕುಮಾರ್ ರೈಯವರು ಶ್ಲಾಘನೆ ವ್ಯಕ್ತಪಡಿಸಿದರು.

ಮನರಂಜಿಸಿದ ಕುಸಾಲ್ದ ಗೊಬ್ಬುಲು
ವಿಶೇಷವಾಗಿ ತುಳುನಾಡಿನ ಕ್ರೀಡೆಗಳಾದ ಕುಟ್ಟಿದೊಣ್ಣೆ, ಚೆನ್ನೆಮಣೆ, ಕಲ್ಲಾಟ, ಲಗೋರಿ, ಮೂರು ಕಾಲಿನ ಓಟ, ಗೋಣಿ ಚೀಲ ಓಟ, ಒಂಟಿ ಕಾಲಿನ ಓಟ, ರಂಗೋಲಿ ಅಲ್ಲದೆ ವಾಲಿಬಾಲ್, ಹಗ್ಗ ಜಗ್ಗಾಟ, ಗುಂಡೆಸೆತ ಇತ್ಯಾದಿ ಸ್ಪರ್ಧೆಗಳು ನಡೆಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.