ಬೆಂಗಳೂರು: ಪ್ರತಿಯೊಬ್ಬರಿಗೂ ತಮ್ಮ ಜೀವನದ ಮೊದಲ ಬೈಕ್ ಜತೆಗೆ ವಿಶೇಷ ಬಾಂಧವ್ಯ, ಭಾವನಾತ್ಮಕ ಸಂಬಂಧ ಇರುತ್ತದೆ. ಬಹು ವರ್ಷಗಳ ನಂತರ ಮತ್ತೆ ತಮ್ಮ ಬೈಕ್ ಅನ್ನು ಕಂಡರೆ ನೂರೆಂಟು ನೆನಪುಗಳು ಗರಿ ಬಿಚ್ಚಿಕೊಳ್ಳುತ್ತವೆ. ಕಣ್ಮುಂದೆ ಹಾದು ಹೋಗುತ್ತವೆ. ಅಂತಹ ಘಳಿಗೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಸಾಕ್ಷಿಯಾದರು.
ವಿಂಟೇಜ್ ಬೈಕ್ ಪ್ರೇಮಿಯಾಗಿರುವ ಸುಪ್ರೀತ್ ಎಂಬುವವರು ಭಾನುವಾರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಡಿಸಿಎಂ ಅವರ ಅವರು ಕಾಲೇಜು ದಿನಗಳಲ್ಲಿ ಬಳಸಿದ್ದ ಯಜ್ಡಿ (Yezde) ಬೈಕ್ (ನಂಬರ್ CAE 7684) ಅನ್ನು ಮರುವಿನ್ಯಾಸ ಮಾಡಿ ಸದಾಶಿವನಗರದ ನಿವಾಸಕ್ಕೆ ತಂದು ನಿಲ್ಲಿಸಿದಾಗ ಅದನ್ನು ಕಂಡ ಶಿವಕುಮಾರ್ ಅವರು ಪುಳಕಿತರಾದರು.
ತಾವೇ ಬೈಕ್ ಕಿಕ್ ಮಾಡಿ ಸ್ಟಾರ್ಟ್ ಮಾಡಿ ಖುಷಿಪಟ್ಟರು. “ನಾನು ಕಾಲೇಜು ದಿನಗಳಲ್ಲಿ ಬಳಸುತ್ತಿದ್ದ ಬೈಕ್ ಇದು, ಕನಕಪುರದ ಮನೆಯಲ್ಲಿ ಧೂಳು ಹಿಡಿದಿತ್ತು. ಸುಮಾರು 40 ವರ್ಷಗಳ ನಂತರ ನನ್ನ ಸ್ನೇಹಿತರು ಅದಕ್ಕೆ ಹೊಸ ರೂಪ ಕೊಟ್ಟು ತಂದಿದ್ದಾರೆ” ಎಂದು ಆನಂದ ತುಂದಿಲರಾದರು.
ರಸ್ತೆಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಕಮಿಷನರ್ ಗೆ ಡಿಸಿಎಂ 15 ದಿನಗಳ ಗಡುವು
ಬೆಂಗಳೂರು:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ರಸ್ತೆಗುಂಡಿಗಳನ್ನು ಇನ್ನೂ 15 ದಿನಗಳ ಒಳಗಾಗಿ ಮುಚ್ಚಿ ದುರಸ್ತಿ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ರಸ್ತೆಗುಂಡಿಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಈ ಬಗ್ಗೆ ತುರ್ತು ಗಮನ ಹರಿಸಬೇಕು ಈಗಾಗಲೇ “ರಸ್ತೆ ಗುಂಡಿ ಗಮನ” ಎನ್ನುವ ಆಪ್ ಮೂಲಕ ಸಾರ್ವಜನಿಕರು ರಸ್ತೆ ಗುಂಡಿಗಳ ಫೋಟೋ ತೆಗೆದು ಅಪ್ ಲೋಡ್ ಮಾಡುವ ವ್ಯವಸ್ಥೆ ಮಾಡಲಾಗಿದೆ. ನಗರದ ಅನೇಕ ಕಡೆ ರಸ್ತೆ ಹಾಳಾಗಿರುವುದರ ಬಗ್ಗೆ ಇಲ್ಲಿಯೂ ಸಹ ದೂರುಗಳು ಬರುತ್ತಿವೆ. ಮಳೆಗಾಲದ ಕಾರಣಕ್ಕೂ ರಸ್ತೆ ಗುಂಡಿಗಳು ಬೀಳುತ್ತಿರಬಹುದು. ಇದರ ಬಗ್ಗೆಯೂ ಬಿಬಿಎಂಪಿ ಆಯುಕ್ತರು ಆದ್ಯ ಗಮನ ಹರಿಸಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಸೂಚನೆ ನೀಡಿದ್ದಾರೆ.
ರಸ್ತೆ ಗುಂಡಿಗಳನ್ನು ಮುಚ್ಚಲು ಗಡುವು ನೀಡಿರುವ 15 ದಿನಗಳ ನಂತರ ಇಡೀ ಬೆಂಗಳೂರು ನಗರವನ್ನು ತಾವೇ ಸ್ವತಃ ಪ್ರದಕ್ಷಿಣೆ ಹಾಕಲಿದ್ದು, ಪ್ರತಿ ರಸ್ತೆಗಳನ್ನು ಪರಿಶೀಲನೆ ಮಾಡುತ್ತೇನೆ. ಅಷ್ಟರಲ್ಲಿ ಕೆಲಸ ಮುಗಿಸಿರಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಾಲ ಸೌಲಭ್ಯ, ಸಹಾಯಧನ, ಕೊಳವೆ ಬಾವಿ, ಕಾಲೇಜು ಶುಲ್ಕಕ್ಕೆ ನೆರವು; ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್
ಕನಕಪುರ:
ಸರ್ಕಾರದ ವಿವಿಧ ಯೋಜನೆಗಳಲ್ಲಿ ಸಾಲ ಸೌಲಭ್ಯ, ಸಹಾಯ ಧನ, ನಿವೇಶನ, ಮನೆ, ಗಂಗಾ ಕಲ್ಯಾಣ ಯೋಜನೆ ಅಡಿ ಕೊಳವೆ ಬಾವಿ, ಸರ್ಕಾರಿ ಶಾಲೆ ಶಿಕ್ಷಕರ ನೇಮಕ, ಕಾಲೇಜು ಶುಲ್ಕ ಪಾವತಿಗೆ ಸಹಾಯ ಸೇರಿದಂತೆ ಅರ್ಜಿ ಹೊತ್ತು ತಂದ ನೂರಾರು ಜನರ ಸಮಸ್ಯೆಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪರಿಹಾರ ನೀಡುವ ಭರವಸೆ ಕೊಟ್ಟರು.ಕನಕಪುರದ ನಿವಾಸದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದ ಶಿವಕುಮಾರ್ ಅವರು ನೂರಾರು ಜನರ ಅಹವಾಲುಗಳನ್ನು ಸ್ವೀಕರಿಸಿದರು.
ಉಯ್ಯಂಬಳ್ಳಿ ಪಂಚಾಯ್ತಿ ಸದಸ್ಯರಾದ ರಮೇಶ್ ನಾಯಕ್ ಎಂಬುವವರು ತಮ್ಮ ಗ್ರಾಮಸ್ಥರ ಪರವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಗ್ರಾಮಸ್ಥ ಮಲ್ಲೇಶ್ ಎಂಬುವವರು ತೋಟಗಾರಿಕೆ ಇಲಾಖೆಯ ಫಾರಂ ಗೇಟ್ ಯೋಜನೆಯಲ್ಲಿ ಕೊಟ್ಟಿಗೆ ಕಟ್ಟಲು ಸಹಾಯ ದೊರಕಿಸಿಕೊಡಬೇಕು ಎಂದು ಮನವಿ ಸಲ್ಲಿಸಿದರು.
ಇನ್ನು ಲತಾ ಬಾಯಿ ಎಂಬುವವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉದ್ಯೋಗಿನಿ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯ ನೀಡಬೇಕು ಎಂದು ಮನವಿ ಮಾಡಿದರು.
ಇನ್ನು ಸಿದ್ದ ನಾಯಕ್ ಎಂಬುವವರು ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಬಾವಿ ಕೊರೆಸಿಕೊಡಬೇಕು ಎಂದು ಮನವಿ ಸಲ್ಲಿಸಿದರು. ಈ ಎಲ್ಲಾ ಮನವಿಗಳನ್ನು ಪರಿಶೀಲಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ಈ ಅರ್ಜಿಗೆ ಸ್ಪಂದಿಸುವಂತೆ ಸೂಚನೆ ನೀಡಿದರು.
ಮಾಲಪ್ಪನ ದೊಡ್ಡಿಯ ನಿವಾಸಿ ಮಹದೇವಸ್ವಾಮಿ ಎಂಬುವವರು ಟ್ಯಾಕ್ಸಿ ಖರೀದಿ ಮಾಡಲು ಸರ್ಕಾರದಿಂದ ನೀಡುವ 3 ಲಕ್ಷ ಸಹಾಯಧನ ಕೊಡಿಸಬೇಕು ಎಂಬ ಮನವಿಗೆ ಶಿವಕುಮಾರ್ ಅವರು ಸಹಿ ಹಾಕಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದರು.
ಉಯ್ಯಂಬಳ್ಳಿ, ಯಡಮಾರನಹಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣ ಮಾಡಿಕೊಡಬೇಕು ಎಂಬ ಗ್ರಾಮಸ್ಥರ ಮನವಿ ಒಪ್ಪಿದ ಶಿವಕುಮಾರ್ ಸಮುದಾಯ ಭವನ ನಿರ್ಮಾಣದ ಭರವಸೆ ನೀಡಿದರು.
ಮೆಲ್ಲಕೋಟೆ ರೆಹಮಾನಿಯ ನಗರ ಕ್ವಾರೆ ರಸ್ತೆ. ವಾರ್ಡ್ 31, ಮೊಹಮದ್ ಅಸ್ಲಾಂ, ಕೊಳವೆ ಬಾವಿ ಇದ್ದರೂ ನೀರಿಲ್ಲ. ಸ್ಲಂ ಬೋರ್ಡ್ 20 ಮನೆಗಳಿದ್ದರೂ ನೀರಿಲ್ಲ ಎಂದು ಮನವಿ ಮಾಡಿದರು. ಕೂಡಲೇ ಈ ಬಗ್ಗೆ ಗಮನ ಹರಿಸುವಂತೆ ಡಿಸಿಎಂ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನಕಪುರ ಟೌನ್ ಮುತ್ತತ್ತಿ ವಠಾರ ನಿವಾಸಿ ಜಯಲಕ್ಷ್ಮಿ ಎಂಬುವವರು ತಮಗೆ ನಿವೇಶನ ಆಗಿದ್ದು, ಮನೆ ಕಟ್ಟಿಕೊಡಲು ಹಣವನ್ನೂ ಪಾವತಿಸಿದ್ದು, ಕಲ್ಲು ಸಿಕ್ಕಿದೆ ಎಂಬ ಕಾರಣಕ್ಕೆ ಇನ್ನು ಮನೆ ಆಗಿಲ್ಲ ಎಂದರು. ಇವರ ಸಮಸ್ಯೆ ಬಗೆಹರಿಸುವಂತೆ ನಗರಸಭೆ ಅಧಿಕಾರಿಗಳಿಗೆ ಶಿವಕುಮಾರ್ ಅವರು ಸೂಚನೆ ನೀಡಿದರು.
ಚನ್ನಪಟ್ಟಣದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಹಂಶಿಕಾ, ಹಂಶಿಣಿ ಅವರು ಕಾಲೇಜು ಶುಲ್ಕ ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ಮನೆಗೆ ಕಳುಹಿಸಿದ್ದು, ಅವರಿಗೆ ಶುಲ್ಕ ಪಾವತಿಗೆ ನೆರವು ನೀಡಬೇಕು ಎಂದು ಶಶಾಂಕ್ ಎಂಬುವವರು ಮನವಿ ಸಲ್ಲಿಸಿದರು. ಇವರ ಅರ್ಜಿ ಸ್ವೀಕರಿಸಿದ ಶಿವಕುಮಾರ್ ಅವರು ಕಾಲೇಜಿನ ಜತೆ ಚರ್ಚೆ ಮಾಡಿ ನೆರವು ನೀಡುವುದಾಗಿ ಭರವಸೆ ನೀಡಿದರು.
ಕೂತಗೊಂಡನ ಹಳ್ಳಿ, ಸರ್ಕಾರಿ ಶಾಲೆಯಲ್ಲಿ 80 ವಿದ್ಯಾರ್ಥಿಗಳಿಗೆ ಒಬ್ಬರೇ ಶಿಕ್ಷಕರಿದ್ದಾರೆ ಎಂದು ಗ್ರಾಮಸ್ಥರು ಮನವಿ ನೀಡಿದಾಗ, ಕೂಡಲೇ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
*ಓಡಾಡುವ ರಸ್ತೆಗಾಗಿ ಎರಡು ಬಣಗಳ ನಡುವೆ ತಿಕ್ಕಾಟ*
ನಲ್ಲಹಳ್ಳಿ ಗ್ರಾಮದಲ್ಲಿ ನಾಲ್ಕೈದು ಕುಟುಂಬ ಓಡಾಡುವ ರಸ್ತೆಯಲ್ಲಿ ಕಾಂಪೌಂಡ್ ಹಾಕುವ ವಿಚಾರವಾಗಿ ಎರಡು ಬಣಗಳು ಡಿಸಿಎಂ ಎದುರೆ ವಾಗ್ವಾದ ನಡೆಸಿದರು.
ಕಮಲಮ್ಮ ಮತ್ತು ಮನೆಯವರು ಉಳಿದ ನಾಲ್ಕೈದು ಮನೆಯವರು ಓಡಾಡಲು ಇರುವ ಜಾಗದಲ್ಲಿ ಕಾಂಪೌಂಡ್ ಹಾಕಿದ್ದಾರೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ ಕಾಂಪೌಂಡ್ ಹಾಕಿದ್ದಾರೆ. ನಮಗೆ ನ್ಯಾಯ ಕೊಡಿಸಿ ಎಂದು ಒಂದು ಬಣ ವಾದ ಮಾಡಿದರೆ, ಮತ್ತೊಂದು ಬಣ ಇದು ನಮಗೆ ಸೇರಿದ ಜಾಗ ಇದಕ್ಕೆ ಸಂಬಂಧಿಸಿದ ದಾಖಲೆ ನಮ್ಮ ಬಳಿ ಇವೆ. ಅವರ ಬಳಿ ಯಾವುದೇ ದಾಖಲೆ ಇಲ್ಲ. ನೀವೇ ಪರಿಶೀಲಿಸಿ. ನಮಗೆ ಕಾಂಪೌಂಡ್ ಹಾಕಲು ಅವಕಾಶ ಮಾಡಿಕೊಡಿ ಎಂದು ಮತ್ತೊಂದು ಬಣ ವಾದಿಸಿತು.
ಎರಡೂ ಬಣಗಳ ಮಾತನ್ನು ಆಲಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಜಿಲ್ಲಾಧಿಕಾರಿಗಳು ಹಾಗೂ ಉಪ ಆಯುಕ್ತರನ್ನು ಕರೆದು ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಿ ದಾಖಲೆ ಪರಿಶೀಲಿಸಿ ಕಾನೂನು ಚೌಕಟ್ಟಿನಲ್ಲಿ ಯಾರಿಗೂ ಅನ್ಯಾಯ ಆಗದ ರೀತಿಯಲ್ಲಿ ಸಮಸ್ಯೆ ಬಗೆಹರಿಸಿ ಎಂದು ಸೂಚನೆ ನೀಡಿದರು.
ಹದಿನೈದು ದಿನಕ್ಕೊಮ್ಮೆ ಜಿಲ್ಲೆಯ ಜನರ ಅಹವಾಲು ಆಲಿಸುತ್ತೇನೆ: ಡಿಸಿಎಂ ಡಿ.ಕೆ. ಶಿವಕುಮಾರ್
ಕನಕಪುರ :
“ಶನಿವಾರ ರಾಜ್ಯಪಾಲರನ್ನು ಭೇಟಿ ಮಾಡಬೇಕಾದ ಹಿನ್ನೆಲೆಯಲ್ಲಿ ಜಿಲ್ಲೆಯ ಜನರನ್ನು ಭೇಟಿ ಮಾಡಲು ಆಗಿರಲಿಲ್ಲ. ಹೀಗಾಗಿ ಭಾನುವಾರ ರಜೆ ದಿನವಾದರೂ ಅಧಿಕಾರಿಗಳನ್ನು ಕರೆದುಕೊಂಡು ಸಾರ್ವಜನಿಕರ ಅಹವಾಲು ಆಲಿಸುತ್ತಿದ್ದೇನೆ. ನಾನು ರಾಜ್ಯದಲ್ಲಿ ಇದ್ದಾಗ ಹದಿನೈದು ದಿನಕ್ಕೊಮ್ಮೆ ಈ ಕಾರ್ಯಕ್ರಮ ಮಾಡಿ, ಜಿಲ್ಲೆಯ ಜನರ ಸಮಸ್ಯೆ ಕೇಳುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.ಕನಕಪುರದ ನಿವಾಸದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದ ಶಿವಕುಮಾರ್ ಅವರು ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದರು.
“ನಾನು ಪ್ರತಿ ತಿಂಗಳು ಎರಡನೇ ಮತ್ತು ನಾಲ್ಕನೇ ಶನಿವಾರ ಕನಕಪುರದ ನಿವಾಸದಲ್ಲಿ ಸಾರ್ವಜನಿಕರನ್ನು ಭೇಟಿ ಮಾಡುವುದಾಗಿ ಮಾತು ಕೊಟ್ಟಿದ್ದೆ. ಕನಕಪುರದ ಜತೆಗೆ ರಾಮನಗರ, ಚನ್ನಪಟ್ಟಣ, ಮಾಗಡಿ, ಹಾರೋಹಳ್ಳಿ ತಾಲ್ಲೂಕಿನ ಜನ ಬಂದು ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು. ನಮ್ಮ ಜನ ಬೆಂಗಳೂರಿಗೆ ಬಂದು ಕಾಯುವುದನ್ನು ನೋಡಿ ಬಹಳ ಬೇಸರವಾಗುತ್ತಿತ್ತು. ಹೀಗಾಗಿ ನಾನೇ ಅವರಿಗೆ ತಿಂಗಳಿಗೆ ಎರಡು ದಿನ ಮೀಸಲಿಡಲು ತೀರ್ಮಾನಿಸಿದ್ದೇನೆ. ಅವರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ಪ್ರಯತ್ನ ಮಾಡಲಾಗುವುದು” ಎಂದು ತಿಳಿಸಿದರು.
“ರಸ್ತೆ ವಿಚಾರವಾಗಿ ಎರಡು ಗುಂಪಿನ ನಡುವಣ ಸಮಸ್ಯೆ ನಿವಾರಣೆ ಬಗ್ಗೆ ಸಮಸ್ಯೆ ಹೇಳಿಕೊಂಡರು. ಇದು ಆಯಾಯ ಕುಟುಂಬಗಳ ನಡುವಣ ಸಮಸ್ಯೆ. ಅವರುಗಳ ಅಹಂನಿಂದ ಸಮಸ್ಯೆ ಹೆಚ್ಚಾಗುತ್ತದೆ. ಅದು ನನಗೆ ಪರಿಚಿತ ಊರು. ಎರಡು ಬಣದವರೂ ನಮ್ಮವರೇ. ಈಗ ದೊಡ್ಡವರಾಗಿದ್ದಾರೆ. ಜನ ಓಡಾಡುವ ಜಾಗಕ್ಕೆ ಅವಕಾಶ ತಪ್ಪಿಸಲು ಆಗುವುದಿಲ್ಲ. ಯಾರಿಗೂ ಅನ್ಯಾಯ ಆಗದ ರೀತಿಯಲ್ಲಿ ಕಾನೂನು ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಉಪ ಆಯುಕ್ತರಿಗೆ ತಿಳಿಸಿದ್ದೇನೆ” ಎಂದು ತಿಳಿಸಿದರು.
ಚನ್ನಪಟ್ಟಣ ಕನಕಪುರ ಭಾಗದಲ್ಲಿ ಕಾಡಾನೆ ಹಾವಳಿ, ಚಿರತೆ ಕಾಟ ಹೆಚ್ಚಾಗಿದೆ ಎಂದು ಕೇಳಿದಾಗ, “ಕಾಡಾನೆ ದಾಳಿಯಿಂದ ಅನೇಕ ಪ್ರಾಣ ಹಾನಿಯಾಗಿವೆ. ಇದನ್ನು ತಡೆಯಲು ರೈಲ್ವೇ ಕಂಬಿಯ ಬೇಲಿ ಹಾಕಲು ಸಚಿವರ ಜತೆ ಚರ್ಚೆ ಮಾಡಿದ್ದೇನೆ. ಹಂತ ಹಂತವಾಗಿ ಇದನ್ನು ಜಾರಿ ಮಾಡಲಾಗುವುದು” ಎಂದು ತಿಳಿಸಿದರು.
ಚನ್ನಪಟ್ಟಣ ಕೆರೆಗಳ ತುಂಬಿಸುವ ಬಗ್ಗೆ ಕೇಳಿದಾಗ, “ಅರ್ಕಾವತಿ ನದಿಗೆ ಇನ್ನು ನೀರು ಬಂದಿಲ್ಲ. ಬೆಂಗಳೂರಿನಲ್ಲಿ ಬಿದ್ದ ಮಳೆ ಮಾತ್ರ ಈಗ ಬರುತ್ತಿದೆ. ಮಂಡ್ಯದಲ್ಲೂ ಸರಿಯಾಗಿ ಮಳೆ ಆಗಿಲ್ಲ. ಆದರೂ ಕಾಲುವೆ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸುತ್ತೇವೆ” ಎಂದು ತಿಳಿಸಿದರು.
ರಾಜ್ಯಾದ್ಯಂತ ನಾಳೆಯಿಂದ ಒತ್ತುವರಿ ತೆರವು ಕಾರ್ಯ ಆರಂಭವಾಗುತ್ತಿದ್ದು, ಪ್ರಭಾವಿಗಳ ಜಾಗವನ್ನೂ ತೆರವು ಮಾಡುತ್ತೀರಾ ಎಂದು ಕೇಳಿದಾಗ, “ಆ ಇಲಾಖೆ ಮಂತ್ರಿಗಳು ಅದರ ಜವಾಬ್ದಾರಿ ನಿಭಾಯಿಸಲಿದ್ದಾರೆ” ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಕೊಟ್ಟರೆ ನಾನು ಸಿಎಂ ಆಗುತ್ತೇನೆ ಎಂಬ ಆರ್.ವಿ.ದೇಶಪಾಂಡೆ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಬಹಳ ಸಂತೋಷ. ಅವರು ಹಿರಿಯ ನಾಯಕರು. ಅವರು ಯಾಕೆ ಆಗಬಾರದು” ಎಂದು ತಿಳಿಸಿದರು.
ಚನ್ನಪಟ್ಟಣ ಚುನಾವಣೆ ಬಗ್ಗೆ ಕೇಳಿದಾಗ, “ಈ ಬಗ್ಗೆ ನೀವು ವಿಷಯ ಹೇಳಬೇಕು. ಅಲ್ಲಿ ಯಾರಿಗೆ ಟಿಕೆಟ್ ಸಿಕ್ಕಿದೆ? ಬಿಜೆಪಿಗೋ, ಜೆಡಿಎಸ್ ಗೋ?” ಎಂದು ಹೇಳಿದರು.
ನಿಮ್ಮ ಪಕ್ಷದಲ್ಲಿ ಯಾರು ಅಭ್ಯರ್ಥಿ ಎಂದು ಕೇಳಿದಾಗ, “ನಾನೇ ಬಿ ಫಾರಂ ನೀಡುತ್ತಿರುವುದರಿಂದ, ನಾನೇ ಅಭ್ಯರ್ಥಿ. ನಮ್ಮ ಪಕ್ಷದ ಸಿದ್ಧತೆ ನಾವು ಮಾಡಿಕೊಳ್ಳುತ್ತಿದ್ದೇವೆ. ನಮಗೆ ಅಭ್ಯರ್ಥಿ ಮುಖ್ಯವಲ್ಲ. ನಾನು, ಸುರೇಶ್, ರವಿ, ಬಾಲಕೃಷ್ಣ, ಇಕ್ಬಾಲ್ ಹುಸೇನ್, ಪುಟ್ಟಣ್ಣ ಎಲ್ಲರೂ ಒಂದೊಂದು ಹೋಬಳಿ ಹಂಚಿಕೊಂಡು ಕೆಲಸ ಹಾಗೂ ಜನಸೇವೆ ಮಾಡುತ್ತೇವೆ. ಯಾರೇ ಸ್ಪರ್ಧೆ ಮಾಡಿದರೂ ನಾನೇ ಅಭ್ಯರ್ಥಿ. ನನಗಿರುವ ಜವಾಬ್ದಾರಿ ಹಾಗೂ ನನ್ನ ಮುಖ ನೋಡಿ ಎಂದು ಮನವಿ ಮಾಡುತ್ತೇನೆ. ಮೊನ್ನೆಯಷ್ಟೇ ಉದ್ಯೋಗ ಮೇಳ ಮಾಡಿದ್ದೇನೆ. ಅಲ್ಲಿನ ಬಡ ಜನರಿಗೆ ನಿವೇಶನ ಹಂಚಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. 5 ಸಾವಿರ ಮನೆಗಳನ್ನು ನಿಗದಿ ಮಾಡಲಾಗಿದೆ. ವಿವಿಧ ಅಭಿವೃದ್ಧಿ ಯೋಜನೆಗಳಿಗೆ ₹150 ಕೋಟಿ ಅನುದಾನ ಮೀಸಲಿಟ್ಟಿದ್ದೇವೆ. ಮುಂದಿನ ವಾರದಲ್ಲಿ ಕೆಲವು ಕಾಮಗಾರಿಗೆ ಚಾಲನೆ ನೀಡುತ್ತೇವೆ. ಈ ಹಿಂದೆ ಇದ್ದವರೂ ಈ ಕೆಲಸ ಮಾಡಬಹುದಿತ್ತು. ಅವರು ಎಂದಾದರೂ ಉದ್ಯೋಗ ಮೇಳ ಮಾಡಿದ್ದಾರಾ? ನಿವೇಶನ ಹಂಚಿಕೆ ಮಾಡಿದ್ದಾರಾ?” ಎಂದು ಪ್ರಶ್ನೆ ಮಾಡಿದರು.
“ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಬೆಳಗಾವಿ ಅಧಿವೇಶನ ಮಾಡಿ ನೂರು ವರ್ಷಗಳು ಕಳೆದಿವೆ. ಗಾಂಧೀಜಿ ಅವರು ಚನ್ನಪಟ್ಟಣ ಹಾಗೂ ಕನಕಪುರಕ್ಕೂ ಭೇಟಿ ನೀಡಿದ್ದರಂತೆ. ಈ ಕುರಿತ ಕಾರ್ಯಕ್ರಮವನ್ನು ಮಾಡುತ್ತೇವೆ” ಎಂದು ತಿಳಿಸಿದರು.
ನಿವೇಶನ ವಿಚಾರವಾಗಿ ಕೆಲವು ಗ್ರಾಮಗಳಲ್ಲಿ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಪ್ರತಿಭಟನೆ ಮಾಡಬೇಕು. ಆಗಲೇ ಸಮಸ್ಯೆ ಏನಿದೆ ಎಂದು ತಿಳಿಯುತ್ತದೆ. ಶ್ರಮ ಇದ್ದರೆ ಫಲ. ನಮ್ಮ ತಪ್ಪಿದ್ದರೆ ನಾವು ತಿದ್ದುಕೊಳ್ಳುತ್ತೇವೆ. ಹೋರಾಟ ಮಾಡುವವರನ್ನು ನಾವು ಬೇಡ ಎನ್ನುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡಬೇಕು. ಆಗಲೇ ತಪ್ಪು ಏನು ಎಂದು ತಿಳಿಯುತ್ತದೆ. ನನ್ನ ಟೀಕೆ ಮಾಡುವವರನ್ನು ಬೇಡ ಎನ್ನುವುದಿಲ್ಲ. ಕೆಲವರು ಚಟಕ್ಕೆ ಮಾತನಾಡುತ್ತಾರೆ ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ” ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರದಲ್ಲಿ ಮೈತ್ರಿ ಯಶಸ್ವಿಯಾಗಿದ್ದು, ಚನ್ನಪಟ್ಟಣದಲ್ಲಿ ಅದೇ ಆಗಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಪ್ರಚಾರ ಮಾಡುತ್ತಿರುವ ಬಗ್ಗೆ ಕೇಳಿದಾಗ, “ದೊಡ್ಡವರು ಏನಾದರೂ ಹೇಳಿಕೊಳ್ಳಲಿ. ಕನಿಷ್ಠ ಪಕ್ಷ ನಮ್ಮ ಹೆಣ ಹೊರಲು ನಾಲ್ಕು ಜನ ಸಿದ್ಧವಾಗಿದ್ದಾರಲ್ಲ ಅಷ್ಟು ಸಾಕು” ಎಂದು ತಿಳಿಸಿದರು.
ನೀವೇ ಅಭ್ಯರ್ಥಿ ಎಂಬ ಕಾರಣಕ್ಕೆ ಕುಮಾರಸ್ವಾಮಿ ಅವರಿಗೆ ಟೆನ್ಷನ್ ಆಗಿದೆಯೇ ಎಂದು ಕೇಳಿದಾಗ, “ಅವರೇಕೆ ಟೆನ್ಷನ್ ಆಗುತ್ತಾರೆ. ಅವರು ತಮ್ಮ ಚುನಾವಣೆಗೆ ಮಾತ್ರ ಟೆನ್ಷನ್ ಆಗುತ್ತಾರೆ. ಬೇರೆಯವರ ಚುನಾವಣೆಗೆ ಅಲ್ಲ” ಎಂದು ತಿಳಿಸಿದರು.