ಬೆಳಗಾವಿ: ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯ ನಾಗೇಶ ಅಸುಂಡಿ ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದ ವಾಹನ ಸಂಖ್ಯೆ ಕೆಎ 24,ಎಂ 5622 ನಂಬರ್‌ ನ ಮಹಿಂದ್ರ ಸ್ಕಾರ್ಪಿಯೋ ವಾಹನ ಇದೀಗ ಬೆಂಗಳೂರು ದೇವನಹಳ್ಳಿಯ ಕ್ಲಾರ್ಕ್ ಎಕ್ಸಾಟಿಕಾ ಕನ್ವೆನ್ಷನ್ ರೆಸಾರ್ಟ್ ಬಳಿ ಪತ್ತೆಯಾಗಿದೆ.

ಘಟನೆಗೆ ಸಂಬಂಧಿಸಿ ಹೋಟೆಲ್ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ಮಾಡಲಾಗಿದೆ. ಆ ಸಂದರ್ಭದಲ್ಲಿ ಮತ್ತು ಅಪಹರಿಸಿದ ವ್ಯಕ್ತಿಗಳು ಇರುವ ದೃಶ್ಯಗಳು ಕಂಡುಬಂದಿವೆ. ಆದರೆ, ನಾಗರಾಜ ಅಸುಂಡಿ ಮತ್ತು ಅಪಹರಣಕಾರರು ಸ್ಥಳದಲ್ಲಿ ಇರಲಿಲ್ಲ. ಅಪಹರಣಕ್ಕೆ ಬಳಸಿದ ವಾಹನವನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಪಿಐ ಶಿವಾನಂದ ಗುಡಗಾನಟ್ಟಿ ತಿಳಿಸಿದ್ದಾರೆ.

ಚನ್ನಮ್ಮನ ಕಿತ್ತೂರು ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರೊಬ್ಬರನ್ನು ಗುರುವಾರ ತಂಡ ರಾತ್ರಿ ಅಪಹರಣ ಮಾಡಲಾಗಿತ್ತು.

ನಾಗರಾಜ ಅವರು ಕಿತ್ತೂರು ಪಟ್ಟಣದ ಚೌಕಿಮಠದ ಬಳಿ ನಿಂತಾಗ, ಸ್ಕಾರ್ಪಿಯೊ ವಾಹನದಲ್ಲಿ ಬಂದ ಕೆಲವರು ಬಲವಂತವಾಗಿ ನಾಗರಾಜ ಅವರನ್ನು ಎಳೆದುಕೊಂಡು ಅಪಹರಣ ಮಾಡಿದ್ದರು.

ಸೆ.3ರಂದು ಚುನಾವಣೆ ನಿಗದಿಯಾಗಿದೆ. 9 ಬಿಜೆಪಿ ಸದಸ್ಯರು, 5 ಕಾಂಗ್ರೆಸ್ ಸದಸ್ಯರು, ನಾಲ್ವರು ಪಕ್ಷೇತರ ಸದಸ್ಯರು ಪಟ್ಟಣ ಪಂಚಾಯಿತಿಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ 4 ಪಕ್ಷೇತರ ಸದಸ್ಯರು ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗಿದೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಗಾದಿಗೆ ಏರಲು ಕಾಂಗ್ರೆಸ್ ಪಕ್ಷದ ಬೆಂಬಲಿಗರು ಬಿಜೆಪಿ ಸದಸ್ಯನ ಅಪಹರಣ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿ ಪ್ರತಿಭಟನೆ ನಡೆಸಿತ್ತು.