ಬೆಂಗಳೂರು : “ಐದು ಗ್ಯಾರಂಟಿ ಯೋಜನೆಗಳ ಜೊತೆಯಲ್ಲಿ ಆರೋಗ್ಯ ಮತ್ತು ಶಿಕ್ಷಣದ ಗ್ಯಾರಂಟಿಯನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿದೆ. ಗ್ಯಾರಂಟಿಗಳನ್ನು ನೀಡಿದ್ದು ಚುನಾವಣೆಗಲ್ಲ. ಜನರ ಬದುಕಿನಲ್ಲಿ ಬದಲಾವಣೆ ತರಲು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಶಿವಾಜಿನಗರದ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಕರ್ನಾಟಕವನ್ನು ಹಸಿವು, ಬಡತನ ಮತ್ತು ಅಸಮಾನತೆ ಮುಕ್ತ ರಾಜ್ಯ ಮಾಡಬೇಕೆಂಬುದು ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗುರಿ” ಎಂದರು.
“ಸಿದ್ದರಾಮಯ್ಯ ಅವರು ಆರೋಗ್ಯ ಇಲಾಖೆಗೆ ಸಾಕಷ್ಟು ಅನುದಾನ ನೀಡುತ್ತಿದ್ದಾರೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲರು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಭಾವನೆಗೆ ಕೆಲಸ ಮಾಡುತ್ತಿಲ್ಲ. ಬದುಕಿಗಾಗಿ ಮಾಡುತ್ತಿದೆ. ರಾಜ್ಯದ ಪ್ರತಿ ಕುಟುಂಬಕ್ಕೆ ತಿಂಗಳಿಗೆ 5 ಸಾವಿರ ಹಣ ಉಳಿಸುತ್ತಿದ್ದೇವೆ” ಎಂದರು.
*ಹೆಲ್ತ್ ಟೂರಿಸಂಗೆ ಕರ್ನಾಟಕ ಹೆಸರಾಗುತ್ತಿದೆ*
“ನಮ್ಮ ರಾಜ್ಯದಲ್ಲಿ 70 ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ. ಸುಮಾರು 1 ಸಾವಿರಕ್ಕೂ ಹೆಚ್ಚು ಪ್ಯಾರಾ ಮೆಡಿಕಲ್ ಕಾಲೇಜುಗಳಿವೆ. ದೇಶದ ಯಾವ ರಾಜ್ಯಗಳಲ್ಲೂ ಇಲ್ಲದ ವೈದ್ಯಕೀಯ ಶಿಕ್ಷಣ ಸೌಲಭ್ಯ ನಮ್ಮಲ್ಲಿದೆ. ವಿದೇಶಗಳಿಂದ ಜನರು ಬಂದು ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ನಾಟಕ ಹೆಲ್ತ್ ಟೂರಿಸಂಗೆ ಹೆಸರಾಗುತ್ತಿದೆ” ಎಂದರು.
“ಈ ಆಸ್ಪತ್ರೆಗೆ ಇನ್ಪೋಸಿಸ್ ಅವರು 10 ಕೋಟಿ ಸಿಎಸ್ ಆರ್ ಅನುದಾನ ನೀಡಿದ್ದಾರೆ. ನನ್ನ ಕನಕಪುರ ಕ್ಷೇತ್ರದಲ್ಲಿಯೂ ತಾಯಿ, ಮಗು ಆಸ್ಪತ್ರೆಯನ್ನು ಕಟ್ಟಿಸಿಕೊಟ್ಟಿದ್ದಾರೆ. ಆರೋಗ್ಯ ಕ್ಷೇತ್ರ ಮಾತ್ರವಲ್ಲ ಶಿಕ್ಷಣ ಕ್ಷೇತ್ರದಲ್ಲಿ ಸಿಎಸ್ ಆರ್ ಅನುದಾನ ಬಳಸಿಕೊಂಡು ಈ ವರ್ಷ 500 ಶಾಲೆಗಳನ್ನು ಪಂಚಾಯಿತಿ ಮಟ್ಟದಲ್ಲಿ ಕಟ್ಟಲಾಗುವುದು. ಒಟ್ಟು 2 ಸಾವಿರ ಶಾಲೆಗಳ ನಿರ್ಮಾಣ ನಮ್ಮ ಸರ್ಕಾರ ಗುರಿ” ಎಂದು ತಿಳಿಸಿದರು.
“ನಮ್ಮ ಯೋಜನೆಗಳ ಫಲದಿಂದ ರಾಜ್ಯದ ಜನರು ನಮ್ಮ ಕೈ ಬಿಡುವುದಿಲ್ಲ ಎನ್ನುವ ನಂಬಿಕೆ ಅಚಲವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮಹದೇವಪುರದ ಜನರು ಕಡಿಮೆ ಮತ ನೀಡಿರಬಹುದು. ಆದರೆ ಶಿವಾಜಿನಗರದ ಜನತೆ ಅತಿ ಹೆಚ್ಚು ಮತ ನೀಡಿದ್ದಾರೆ. ನಿಮ್ಮ ಋಣವನ್ನು ತೀರಿಸಲಾಗುವುದು” ಎಂದರು.
“ದೇಶದ ಮಹಾನ್ ಋಷಿ ಚರಕ ಮಹರ್ಷಿಯ ಹೆಸರನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಇಡಲಾಗಿದೆ. ಇತ್ತೀಚೆಗೆ ದಿನೇಶ್ ಗುಂಡೂರಾವ್ ಅವರ ಕ್ಷೇತ್ರದ ಕೆ.ಸಿ.ಜನರಲ್ ಆಸ್ಪತ್ರೆ ಆವರಣದಲ್ಲಿ ನೂತನ ತಾಯಿ, ಮಗು ಆಸ್ಪತ್ರಗೆ ಗುದ್ದಲಿ ಪೂಜೆ ಮಾಡಲಾಯಿತು. ಜನರ ಆರೋಗ್ಯ ರಕ್ಷಣೆಗೆ ಸಾಕಷ್ಟು ಕೆಲಸವನ್ನು ಸರ್ಕಾರ ಮಾಡಲಿದೆ” ಎಂದರು.
“ಶಿವಾಜಿನಗರದ ಜನತೆ ಸಜ್ಜನ, ವಿದ್ಯಾವಂತ, ದೂರದೃಷ್ಟಿ ಹೊಂದಿರುವ ಯುವ ನಾಯಕನಾದ ರಿಜ್ವಾನ್ ಆರ್ಷದ್ ಅವರನ್ನು ಆಯ್ಕೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪ್ರಮುಖ ವಿಧಾನಸಭಾ ಕ್ಷೇತ್ರದಿಂದ ಇವರನ್ನು ಜನರು ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಬೆಂಗಳೂರಿಗಾಗಿ ಯಾವುದೇ ಕಾರ್ಯಕ್ರಮ ಮಾಡಿದರೂ ಆ ಸಮಿತಿಗೆ ರಿಜ್ವಾನ್ ಅವರನ್ನು ಸೇರಿಸಿಕೊಂಡು ಮಾಡಲೇಬೇಕು” ಎಂದರು.
“ಶಿವಾಜಿನಗರ ಕ್ಷೇತ್ರ ರಿಜ್ವಾನ್ ಅವರ ನೇತೃತ್ವದಲ್ಲಿ ಮಿಕ್ಕ ಯಾವ ಕ್ಷೇತ್ರಗಳಿಗೂ ಕಡಿಮೆ ಇಲ್ಲದಂತೆ ಅಭಿವೃದ್ದಿ ಹೊಂದುತ್ತಿದೆ. ನೀವುಗಳು ನಮ್ಮ ಕ್ಷೇತ್ರ ಹಿಂದುಳಿದಿದೆ ಎಂದು ಕೊರಗುವುದನ್ನು ರಿಜ್ವಾನ್ ತಪ್ಪಿಸಿದ್ದಾರೆ. ಗ್ರೇಟರ್ ಬೆಂಗಳೂರು ವಿಧೇಯಕ ಪರಿಶೀಲನೆ ಮತ್ತು ವರದಿಗಾಗಿ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿ ರಿಝ್ವಾನ್ ಆರ್ಶದ್ ಅವರನ್ನು ನೇಮಕ ಮಾಡಲಾಗಿದೆ” ಎಂದು ಹೇಳಿದರು.
ಮೇಕೆದಾಟಿನಿಂದ ತಮಿಳುನಾಡಿಗೆ ಹೆಚ್ಚು ಉಪಯೋಗ: ಡಿಸಿಎಂ ಡಿ.ಕೆ.ಶಿವಕುಮಾರ್
ಚೆನ್ನೈ:
“ಈ ವರ್ಷ ವರುಣದೇವ ನಮ್ಮನ್ನು ಕಾಪಾಡಿದ್ದಾನೆ. ಮೇಕೆದಾಟು ಯೋಜನೆ ಸಾಕಾರಗೊಂಡರೆ ಕರ್ನಾಟಕಕ್ಕಿಂತ ತಮಿಳುನಾಡಿನ ಜನತೆಗೆ ಹೆಚ್ಚು ಉಪಯೋಗ. ಈಗ ಇದರ ಬಗ್ಗೆ ಹೆಚ್ಚು ಚರ್ಚೆ ಮಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ತಮಿಳುನಾಡಿನ ಚೆನ್ನೈನಲ್ಲಿರುವ ಶ್ರೀನಿವಾಸ ಸಾಲಿಡ್ ವೇಸ್ಟ್ ಮ್ಯಾನೇಜ್ ಮೆಂಟ್ ಘಟಕಕ್ಕೆ ಮಂಗಳವಾರ ಭೇಟಿ ನೀಡಿದ ವೇಳೆ ಮೇಕೆದಾಟು ಅಣೆಕಟ್ಟಿಗೆ ತಮಿಳುನಾಡು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಹೀಗೆ ಉತ್ತರಿಸಿದರು.
ಮಳೆಯಿಂದ ಕರ್ನಾಟಕಕ್ಕೆ ಉಪಯೋಗವಾಗಿದೆಯೇ ಎಂದು ಕೇಳಿದಾಗ “ಮಳೆಯಿಂದ ತಮಿಳುನಾಡಿಗೆ ಒಳ್ಳೆಯದಾಗಿದೆ” ಎಂದು ಚುಟುಕಾಗಿ ಉತ್ತರಿಸಿದರು.
*ಘನ ತ್ಯಾಜ್ಯ ನಿರ್ವಹಣೆಯಲ್ಲಿ ಚೆನ್ನೈ ಮಾದರಿ ಅಧ್ಯಯನಕ್ಕೆ ಭೇಟಿ*
“ಘನ ತ್ಯಾಜ್ಯ ನಿರ್ವಹಣೆ ಸೇರಿದಂತೆ ಕಸದಿಂದ ಗ್ಯಾಸ್ ಉತ್ಪಾದನೆಯ ಬಗ್ಗೆ ತಿಳಿದುಕೊಳ್ಳಲು 15 ಮಂದಿ ಅಧಿಕಾರಿಗಳ ಜೊತೆ ಕಸ ನಿರ್ವಹಣೆಯಲ್ಲಿ ಚೆನ್ನೈ ಮಾದರಿಯ ಅಧ್ಯಯನಕ್ಕೆ ಬಂದಿದ್ದೇನೆ. ಇಲ್ಲಿನ ತ್ಯಾಜ್ಯ ನಿರ್ವಹಣೆಯಿಂದ ಸಾಕಷ್ಟು ವಿಚಾರಗಳನ್ನು ತಿಳಿದುಕೊಂಡಂತಾಯಿತು. ಕಳೆದ ಒಂದು ವರ್ಷದಿಂದ ಭೇಟಿ ನೀಡಬೇಕು ಎಂದುಕೊಂಡಿದ್ದೆ. ಈಗ ಸಮಯ ಸಿಕ್ಕ ಕಾರಣಕ್ಕೆ ಭೇಟಿ ನೀಡಿದ್ದೇನೆ. ನಮ್ಮ ರಾಜ್ಯದಲ್ಲೂ ಒಂದಷ್ಟು ಇಲ್ಲಿನ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳಲಾಗುವುದು” ಎಂದರು.
“ಅನೇಕ ಕಡೆ ಘನ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಯಶಸ್ಸು ಕಂಡಿಲ್ಲ. ನಮ್ಮಲ್ಲಿಯೂ 10 ಕಡೆ ಕಸದಿಂದ ವಿದ್ಯುತ್ ಉತ್ಪಾದನೆಗೆ ಅವಕಾಶ ನೀಡಲಾಗಿತ್ತು. ಈ ಹಿಂದೆ ಹೈದರಾಬಾದ್ ಗೆ ಭೇಟಿ ನೀಡಿದ್ದೆ. ಇಲ್ಲಿ ನಗರದ ನಡುವೆಯೇ ಸಿಎನ್ ಜಿ ಉತ್ಪಾದನಾ ಘಟಕವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ನಮ್ಮಲ್ಲೂ ಒಂದಷ್ಟು ಒಳ್ಳೆ ಕೆಲಸ ಮಾಡಿದ್ದೇವೆ. ಇಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ” ಎಂದರು.
*ಕಾನೂನಾತ್ಮಕವಾಗಿ ನಿವೇಶನ ಹಂಚಿಕೆ*
ಬಿಜೆಪಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಕೆಐಡಿಬಿ ಸಿಎ ನಿವೇಶನ ಹಂಚಿಕೆಯಲ್ಲಾಗಿರುವ ಅಕ್ರಮದ ಬಗ್ಗೆ ಪ್ರಶ್ನಿಸಿದ್ದಾರೆ ಎಂದಾಗ “ಸಿಎ ನಿವೇಶನ ಹಂಚಿಕೆ ಕಾನೂನಾತ್ಮಕವಾಗಿ ನಡೆದಿದೆ. ಇದರಲ್ಲಿ ಯಾವುದೇ ಅಕ್ರಮವಾಗಿಲ್ಲ. ವ್ಯಕ್ತಿಗೆ ಸೈಟು ಹಂಚಿಲ್ಲ, ಚಾರಿಟಬಲ್ ಟ್ರಸ್ಟಿಗೆ ಹಂಚಿದ್ದೇವೆ” ಎಂದರು.
ತಮಿಳುನಾಡು ಸಿಎಂ ವಿದೇಶಪ್ರಯಾಣದಲ್ಲಿದ್ದಾರೆ. ತಮಿಳುನಾಡು ಡಿಸಿಎಂ ಅವರನ್ನು ಭೇಟಿ ಮಾಡುವಿರಾ ಎಂದಾಗ “ತಮಿಳುನಾಡು ಡಿಸಿಎಂ ಅವರು ಉತ್ತಮ ಸ್ನೇಹಿತರು ಹಾಗೂ ನಮ್ಮ ನಾಯಕರು. ಸಮಯ ಮಾಡಿಕೊಂಡು ಸ್ನೇಹಪೂರ್ವಕವಾಗಿ ಅವರನ್ನು ಭೇಟಿ ಮಾಡಲಾಗುವುದು” ಎಂದು ಹೇಳಿದರು.