ಗೋಕಾಕ: ರಾತ್ರಿ ಹೊತ್ತು ಮಂದಿರದಲ್ಲಿ ನಡೆದ ಭಜನೆ ಕಾರ್ಯಕ್ರಮ ಮುಗಿಸಿ,ಗುಡಿಯ ಕಟ್ಟೆಯ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬನನ್ನು ಕಬ್ಬು ಕಡಿಯುವ ಕೊಯ್ತಾದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಮಮದಾಪುರ ಗ್ರಾಮದಲ್ಲಿ ನಡೆದಿದೆ.

ಮಮದಾಪುರ ಗ್ರಾಮದ ಬೀರ ಸಿದ್ದೇಶ್ವರ ಗುಡಿಯಲ್ಲಿ ಭಜನೆ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮ ಮುಗಿಸಿ ಗುಡಿಯ ಕಟ್ಟೆಯ ಮೇಲೆ ಮಲಗಿದ್ದ ಮಡ್ಡೆಪ್ಪ ಯಲ್ಲಪ್ಪ ಬಾನಸಿ (47) ಎಂಬಾತನಿಗೆ ಅದೇ ಗ್ರಾಮದ ಬೀರಪ್ಪ ಸಿದ್ದಪ್ಪ ಸೋನದೋಳಿ ಎಂಬಾತ ಕೊಯ್ತಾದಿಂದ ಕುತ್ತಿಗೆ ಭಾಗದಲ್ಲಿ ಕೊಚ್ಚಿ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ಮಡ್ಡೆಪ್ಪನನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಡ್ಡೆಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಹೊಲದ ಸೀಮೆಯ ವಿಚಾರದಲ್ಲಿ ಮಡ್ಡೆಪ್ಪ ಮತ್ತು ಬೀರಪ್ಪನ ನಡುವೆ ಕಲಹ ನಡೆದಿತ್ತು. ಇದೇ ವಿಚಾರಕ್ಕೆ ಬೀರಪ್ಪ ಮಡ್ಡೆಪ್ಪನ ಕೊಲೆ ಮಾಡಿದ್ದು, ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.