ಬೆಂಗಳೂರು : ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಸಾಕ್ಷ್ಯ ಲಭಿಸಿದೆ. ದರ್ಶನ್, ಪವಿತ್ರಾ ಗೌಡ ಹಾಗೂ ಸಹಜರರು ಚಿತ್ರ ಹಿಂಸೆ ನೀಡಿ ರೇಣುಕಸ್ವಾಮಿಯನ್ನು ಭೀಕರವಾಗಿ ಕೊಲೆ ಮಾಡಿದ್ದರು. ಅದರ ಫೋಟೋಗಳ ದತ್ತಾಂಶ ಮರು ಸಂಗ್ರಹದ ವೇಳೆ ಇದೀಗ ಲಭ್ಯವಾಗಿದೆ. ಇದರಲ್ಲಿ ಆರೋಪಿಗಳ ಮತ್ತೊಂದು ಮುಖ ಅನಾವರಣಗೊಂಡಿದೆ.
ದೋಷಾರೋಪ ಪಟ್ಟಿ ಸಲ್ಲಿಕೆ ಬೆನ್ನಲ್ಲೇ ಈ ಫೋಟೋ ಈಗ ವೈರಲ್ ಆಗಿದೆ. ರೇಣುಕ ಸ್ವಾಮಿ ಕೈ ಮುಗಿದು ಬೇಡಿಕೊಳ್ಳುತ್ತಿರುವ ದೃಶ್ಯ ಎಂಥವರನ್ನು ಕರುಳು ಹಿಂಡುವಂತಿದೆ. ರೇಣುಕಸ್ವಾಮಿ ನಿತ್ರಾಣಗೊಂಡು ಅಂಗಾತ ಮಲಗಿರುವ ಫೋಟೋ ಲಭ್ಯವಾಗಿದೆ. ಈ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಇತರರ ವಿರುದ್ಧ ಇನ್ನಷ್ಟು ಪ್ರಬಲ ಸಾಕ್ಷ್ಯಗಳು ಸಿಕ್ಕಿದಂತಾಗಿದೆ. ಪಟ್ಟಣಗೆರೆಯ ಶೆಡ್ ನಲ್ಲಿ ಕೊಲೆ ಮಾಡುವ ವೇಳೆ ತೆಗೆದ ಫೋಟೋ ಇದು. ರೇಣುಕ ಸ್ವಾಮಿಯ ಮೈ ಮೇಲೆ ಗಾಯದ ಗುರುತುಗಳು ಮೂಡಿವೆ. ತೀವ್ರ ಚಿತ್ರ ಹಿಂಸೆ ನೀಡಿ ಕೊನೆಗೆ ಕೊಲೆಗೈಯ್ಯಲಾಗಿದೆ. ಇನ್ನು ಮುಂದೆ ಪವಿತ್ರಾ ಅವರಿಗೆ ಅಶ್ಲೀಲ ಸಂದೇಶ ಕಳಿಸುವುದಿಲ್ಲ, ನನ್ನ ತಪ್ಪಾಯ್ತು ಬಿಡಿ ಎಂದು ರೇಣುಕ ಸ್ವಾಮಿ ಪರಿಪರಿಯಾಗಿ ಕ್ಷಮೆ ಕೋರುವ ದೃಶ್ಯಾವಳಿ ಇದರಲ್ಲಿದೆ. ಆದರೆ, ಆರೋಪಿಗಳ ಮನಸು ಮಾತ್ರ ಕರಗಲೇ ಇಲ್ಲ. ಮನಸೋ ಇಚ್ಛೆ ದಂಡಿಸಿದ್ದಾರೆ. ಇವೆಲ್ಲ ಅಂಶಗಳನ್ನು ತನಿಖಾಧಿಕಾರಿಗಳು ದೋಷಾರೋಪ ಪಟ್ಟಿಯಲ್ಲಿ ಅತ್ಯಂತ ವಿಸ್ತಾರವಾಗಿ ಉಲ್ಲೇಖಿಸಿದ್ದಾರೆ. ಹಲ್ಲೆ ನಡೆಸಿದ ಸಂದರ್ಭದಲ್ಲಿ ಪವಿತ್ರಾ ಗೌಡ ಅವರ ವ್ಯವಸ್ಥಾಪಕ ಕೆ.ಪವನ್ ಫೋಟೋ ತೆಗೆದಿದ್ದಾನೆ. ಅದನ್ನು ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಮಾಲಿಕ ವಿನಯ್ ಮತ್ತು ದರ್ಶನ್ ಅವರ ಆಪ್ತ, ಸದ್ಯ ಬೆಳಗಾವಿ ಜೈಲಲ್ಲಿರುವ ಪ್ರದೂಷ ಅವರಿಗೆ ಕಳಿಸಲಾಗಿದೆ. ಆದರೆ ಕೊನೆಗೆ ರೇಣುಕ ಸ್ವಾಮಿ ಮೃತಪಟ್ಟ ಕಾರಣಕ್ಕೆ ಫೋಟೋ ಡಿಲೀಟ್ ಮಾಡಿ ಸಾಕ್ಷ್ಯ ನಾಶಪಡಿಸಲಾಗಿದೆ. ಆದರೆ, ಇದೀಗ ದತ್ತಾಂಶ ಮರು ಸಂಗ್ರಹದ ವೇಳೆ ಹಳೇ ಫೋಟೋಗಳು ಲಭ್ಯವಾಗಿದ್ದು ವೈರಲ್ ಆಗಿವೆ.
ನಟ ದರ್ಶನ್ ತೂಗುದೀಪ ಅವರ ಆಜ್ಞೆಯ ಮೇರೆಗೆ ಕೊಲೆಯಾದ 33 ವರ್ಷದ ಚಿತ್ರದುರ್ಗದ ರೇಣುಕಸ್ವಾಮಿ ಸಾಯುವ ಕೆಲವೇ ಕ್ಷಣಗಳ ಮೊದಲಿನ ಹೊಸ ಫೋಟೋಗಳು ಇವು. ಹೊರಬಂದ ಎರಡು ಫೋಟೊಗಳ ಪೈಕಿ ಒಂದರಲ್ಲಿ ರೇಣುಕಾಸ್ವಾಮಿ ಪ್ರಾಣಭಯದಿಂದ ಬೇಡಿಕೊಳ್ಳುತ್ತಿರುವುದು ಕಾಣುತ್ತದೆ.
ಎರಡೂ ಚಿತ್ರಗಳಲ್ಲಿ ರೇಣುಕಸ್ವಾಮಿ ಶರ್ಟ್ ಧರಿಸಿಲ್ಲ, ಹಿಂದೆ ಕೆಲ ಟ್ರಕ್‌ಗಳು ನಿಂತಿವೆ. ಅವರ ದೇಹದ ಮೇಲೆ ಗಾಯದ ಗುರುತು ಕೂಡ ಕಾಣಿಸುವಂತಿದೆ. ಎರಡನೇ ಚಿತ್ರದಲ್ಲಿ, ರೇಣುಕಾಸ್ವಾಮಿ ನೆಲದ ಮೇಲೆ ಮಲಗಿರುವುದನ್ನು ನೋಡಬಹುದು.
ಆರೋಪಿಗಳ ಮೊಬೈಲ್ನಲ್ಲಿ ಇದನ್ನು ಸೆರೆಹಿಡಿದುಕೊಳ್ಳಲಾಗಿತ್ತು. ಆ ಬಳಿಕ ಇದನ್ನು ಡಿಲೀಟ್ ಮಾಡಿದ್ದರು. ಈಗ ರಿಟ್ರೀವ್ (ದತ್ತಾಂಶ ಮರುಸಂಗ್ರಹ) ಮಾಡಿದಾಗ ಈ ಫೊಟೊಗಳು ಸಿಕ್ಕಿವೆ. ಇದು ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಆಗಬಹುದಾಗಿದೆ.ಜೂನ್ 9 ರಂದು ಬೆಂಗಳೂರಿನ ಫ್ಲೈಓವರ್ ಬಳಿ ರೇಣುಕಸ್ವಾಮಿ ಶವ ಪತ್ತೆಯಾಗಿತ್ತು. ಪೊಲೀಸರ ಪ್ರಕಾರ, ದರ್ಶನ್ ಅಭಿಮಾನಿಯಾಗಿದ್ದ 33 ವರ್ಷದ ವ್ಯಕ್ತಿ ರೇಣುಕಸ್ವಾಮಿಯನ್ನು ನಟ ದರ್ಶನ್ ನಿರ್ದೇಶನದ ಮೇರೆಗೆ ಗ್ಯಾಂಗ್ ಅಪಹರಿಸಿ ಕೊಲೆ ಮಾಡಿದೆ, ರೇಣುಕಸ್ವಾಮಿ ನಟಿ ಹಾಗೂ ಪವಿತ್ರಾ ಗೌಡ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದ ಎಂದು ಆರೋಪಿಸಲಾಗಿದೆ.
ರೇಣುಕಸ್ವಾಮಿ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ರೇಣುಕಸ್ವಾಮಿ ಅವರಿಗೆ ದೊಣ್ಣೆಗಳಿಂದ ಹೊಡೆಯಲಾಗಿದೆ ಮತ್ತು “ಹಲವು ಗಾಯಗಳ ಪರಿಣಾಮವಾಗಿ ಅವರು ಆಘಾತ ಮತ್ತು ರಕ್ತಸ್ರಾವದಿಂದಾಗಿ” ಸಾವಿಗೀಡಾಗಿದ್ದಾರೆ. ಅವರಿಗೆ ವಿದ್ಯುತ್ ಶಾಕ್ ಸಹ ನೀಡಲಾಗಿತ್ತು ಎಂದು ವರದಿಯು ಸೂಚಿಸಿದೆ.ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು 15 ಮಂದಿಯನ್ನು ಬಂಧಿಸಲಾಗಿದೆ. ಅವರ ನ್ಯಾಯಾಂಗ ಬಂಧನ ಸೆಪ್ಟೆಂಬರ್ 9 ರಂದು ಕೊನೆಗೊಳ್ಳಲಿದೆ.
ಬೆಂಗಳೂರು ಪೊಲೀಸರು ಸ್ಥಳೀಯ ನ್ಯಾಯಾಲಯದಲ್ಲಿ ಕೊಲೆ ಪ್ರಕರಣದ ಆರೋಪಪಟ್ಟಿ ಸಲ್ಲಿಸಿದ್ದಾರೆ. ಸುಮಾರು 230 ಸಾಕ್ಷ್ಯಗಳನ್ನೊಳಗೊಂಡ ಆರೋಪಪಟ್ಟಿಯಲ್ಲಿ ದರ್ಶನ್ ಅವರ ಬಟ್ಟೆ, ಪವಿತ್ರಾ ಗೌಡ ಅವರ ಪಾದರಕ್ಷೆಗಳ ಮೇಲೆ ರಕ್ತದ ಕಲೆಗಳು ಪತ್ತೆಯಾಗಿವೆ ಎಂದು ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.