ನಮ್ಮ ದೇಶ ಸಾಂಸ್ಕ್ರತಿಕವಾಗಿ ಸಂಪದ್ಭರಿತ ದೇಶ. ನಾನಾ ಭಾಷೆ, ವೇಷ- ಭೂಷಣಗಳ ಜೊತೆಗೆ ಆಚಾರ ವಿಚಾರಗಳಲ್ಲೂ ವೈವಿಧ್ಯತೆ ಇಲ್ಲಿನ ವಿಶೇಷ. ಅದರಲ್ಲೂ ಆಗಾಗ ಬರುವ ಹಬ್ಬ ಹರಿದಿನಗಳು ವಿವಿಧತೆಯಲ್ಲಿ ಏಕತೆಯನ್ನು ಸಾರುವ ಪರಿ, ಕೌಟುಂಬಿಕ ಜೀವನಕ್ಕೆ ಅಡಿಪಾಯ ಹಾಕುವ ರೀತಿ ಅನನ್ಯ. ಒಂದಕ್ಕಿಂತ ಒಂದು ಭಿನ್ನವಾಗಿರುವ ಈ ಹಬ್ಬಗಳು ನಮ್ಮೊಳಗೆ ಹೊಸ ಜೀವನೋತ್ಸಾಹ ತುಂಬುತ್ತವೆ.ಅಂತೆಯೆ ಬಾಧ್ರಪದ ಮಾಸದ ಶುಕ್ಲಪಕ್ಷದಲ್ಲಿ ಆಚರಿಸುವ ಗಣೇಶ್ ಚತುರ್ಥಿ ಭಾರತದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುವ ಹಬ್ಬಗಳಲ್ಲಿ ಒಂದಾಗಿದೆ. ಇದು ವಿದ್ಯೆಯ ಮತ್ತು ಜ್ಞಾನದ ಅಧಿಪತಿ, ಸಂಪತ್ತು ಮತ್ತು ಅದೃಷ್ಟದ ಅಧಿನಾಯಕನಾದ ನಮ್ಮ ಮೂಷಿಕ ವಾಹನನ ಜನನವನ್ನು ಸಾರುವ ಹಬ್ಬ. ಈ ಹಬ್ಬವನ್ನು ವಿನಾಯಕ ಚತುರ್ಥಿ ಅಥವಾ ಗಣೇಶ ಚತುರ್ಥಿ ಇಲ್ಲವೇ ಚೌತಿ ಎಂದು ಸಹ ಕರೆಯುತ್ತಾರೆ. ಇದನ್ನು ಹಿಂದೂಗಳೆಲ್ಲರು ಶ್ರದ್ಧಾ ಭಕ್ತಿಗಳಿಂದ ಆಚರಿಸುತ್ತಾರೆ. ವಿಶೇಷವಾಗಿ ಮಹಾರಾಷ್ಟ್ರದಲ್ಲಿರುವ ಜನರು ಇದನ್ನು ಮತ್ತಷ್ಟು ಸಂಭ್ರಮದಿಂದ ಆಚರಿಸುತ್ತಾರೆ.
ಗಣೇಶನ ಹಬ್ಬ ಆರಂಭಗೊಳ್ಳಲು ಹಲವಾರು ದಂತ ಕತೆಗಳ ಹಿನ್ನಲೆಯಿದೆ. ಶಿವಪುರಾಣದ ಪ್ರಕಾರ ಪಾರ್ವತಿಯ ಮೈಯಿಂದ ಹುಟ್ಟಿದವನು. ಸ್ವರ್ಣಗೌರಿಯ ಮಾನಸ ಪುತ್ರ ಈತ. ಗೌರಿ ತನ್ನ ಮೈಕೊಳೆಯಿಂದ ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವತುಂಬಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಅಣತಿಯಂತೆ ಗಣಪ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪ ಅವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ.
ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಅವನ ಶಿರವನ್ನು ಕತ್ತರಿಸುವನು. ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೆಬರ ಕಂಡು ರೋದಿಸುತ್ತಾಳೆ. ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ತನ್ನ ಗಣಗಳನ್ನು ಕರೆದು ಉತ್ತರ ದಿಕ್ಕಿಗೆ ಯಾರಾದರೂ ತಲೆ ಹಾಕಿ ಮಲಗಿದ್ದರೆ, ಅಂತಹವರ ತಲೆಯನ್ನು ಕತ್ತರಿಸಿ ತರುವಂತೆ ಆಜ್ಞಾಪಿಸುತ್ತಾನೆ.
ಅವರು ಉತ್ತರ ದಿಕ್ಕಿನಲ್ಲಿ ಮಲಗಿದ್ದ ಮರಿಯಾನೆ ತಲೆಯನ್ನು ಕತ್ತರಿಸಿ ತರುತ್ತಾರೆ. ನಂತರ ಅದನ್ನು ಗಣಪನ ಶರೀರಕ್ಕೆ ಅಂಟಿಸುವರು. ಹೀಗಾಗಿ ಗಣಪ ಗಜಮುಖನಾಗಿ, ಗಣಗಳ ಅಧಿಪತಿ ಮತ್ತು ಮೊದಲ ಅಗ್ರಪೂಜೆಗೆ ಅರ್ಹನಾಗುತ್ತಾನೆ. ವಿಘ್ನ ವಿನಾಶಕ ವಿನಾಯಕನಾಗಿರುವನು.ವಿದ್ಯೆ, ಬುದ್ಧಿ, ಸಂಪತ್ತು ಮತ್ತು ಜ್ಞಾನದ ಆದಿದೇವತೆಯಾಗಿರುವ ಪ್ರಥಮ ವಂದಿತ, ಆದಿ ಪೂಜಿತ, ಬುದ್ಧಿ – ಸಿದ್ಧಿ ದಾಯಕ, ಗಣಗಳ ಅಧಿಪತಿ, ಮೋದಕ-ಗರಿಕೆ ಪ್ರಿಯ, ವಿಘ್ನ ಹರ ಎಲ್ಲವೂ ಆದ ಶ್ರೀ ಗಣೇಶನ ಚೌತಿ ಉತ್ಸವದ ಸಡಗರ. ಮಹಾಭಾರತದ ರಚನೆಕಾರ ವೇದವ್ಯಾಸ, ಸ್ವಾಮಿ ರಾಮದಾಸ ಮೊದಲಾದ ಅನೇಕ ಸಂತರು ಶ್ರೀ ಗಣೇಶನ ಓಂಕಾರ ಸ್ವರೂಪದ ಗುಣಗಾನ ಮಾಡಿದ್ದಾರೆ. ಸಂತ ತುಳಸೀದಾಸ ತನ್ನ ಪ್ರಖ್ಯಾತ ಕೃತಿ ಶ್ರೀರಾಮಚರಿತ ಮಾನಸದಲ್ಲಿ ಎಲ್ಲಕ್ಕಿಂತ ಮೊದಲಾಗಿ ಶ್ರೀ ಗಣೇಶನಿಗೇ ವಂದಿಸಿದ್ದಾರೆ.
ಪ್ರತಿಯೊಂದು ಮಂಗಳ ಕಾರ್ಯದ ಆರಂಭದಲ್ಲಿ ಶ್ರೀಗಣೇಶನ ಆವಾಹನೆ, ಸಂಸ್ಥಾಪನೆ ಮತ್ತು ಪೂಜೆ ಮಾಡಲಾಗುತ್ತದೆ. ಮಹಾಭಾರತ ಕಾಲಕ್ಕೂ ಬಹು ಹಿಂದೆಯೇ ಗಣೇಶ ಪೂಜೆ ಅಥವಾ ಗಣೇಶ ಚತುರ್ಥಿ ವ್ರತ ಇತ್ತೆಂಬುದಕ್ಕೆ ಪೌರಾಣಿಕ ಪುರಾವೆಗಳಿವೆ. ಸ್ವಯಂ ಭಗವಾನ್ ಶ್ರೀಕೃಷ್ಣನೇ ಗಣೇಶನ ವ್ರತ ಆಚರಿಸಿದ್ದ ಎಂದೂ ಶಾಸ್ತ್ರ-ಪುರಾಣಗಳು ಹೇಳುತ್ತವೆ. ಅಷ್ಟೇ ಅಲ್ಲದೇ ಗಣೇಶನು ಮಂಗಳಕಾರಕವೂ ವಿಘ್ನ ನಿವಾರಕನೂ ಆಗಿದ್ದಾನೆ ಮತ್ತು ವಿದ್ಯಾ-ಬುದ್ಧಿಯ ಅಭೀಷ್ಟ ಪ್ರದಾಯಕನೂ ಆಗಿದ್ದಾನೆ.ಭಾದ್ರಪದ ಮಾಸ ಶುಕ್ಲ ಪಕ್ಷದ ಚತುರ್ಥೀ ತಿಥಿಯಂದು ಭಗವಾನ್ ಗಣೇಶನ ಅವತಾರವಾಯಿತು. ಗಣೇಶ ಪುರಾಣದ ಎರಡನೇ ಅಧ್ಯಾಯದಲ್ಲಿ ಇದರ ಉಲ್ಲೇಖವಿದೆ.
ಇವನು ವಿದ್ಯೆ, ಬುದ್ಧಿ, ಸಂಪತ್ತು ಮತ್ತು ಜ್ಞಾನದ ಆಧಿದೇವತೆಯೂ ಹೌದು. ಮಾತ್ರವಲ್ಲ, ಎಲ್ಲ ಭಜಕ ಜನರಿಗೆ, ವಿಶೇಷವಾಗಿ ಮಕ್ಕಳಿಗೆ ಅತ್ಯಂತ ಪ್ರಿಯನಾದ ದೇವಾಧಿದೇವನೂ ಹೌದು. ಎಲ್ಲರಿಂದ ಹೊಗಳಿಸಿಕೊಳ್ಳುವ ಮತ್ತು ಎಲ್ಲರ ಆರೋಗ್ಯಕರ ವ್ಯಂಗ್ಯಕ್ಕೆ ತುತ್ತಾದವನೂ ಗಣೇಶ ಎಂದರೆ ತಪ್ಪಿಲ್ಲ. ಗಣೇಶನ ಕೈಯಲ್ಲಿರುವ ಆಯುಧಗಳನ್ನು ಪರಿಗಣಿಸಿದರೆ, ಅಂಕುಶ ಎಂಬುದು ಅಹಂ ನಿಯಂತ್ರಣ ಪ್ರತೀಕ. ಅಷ್ಟು ಬೃಹತ್ತಾದ ಆನೆಯನ್ನು ಈ ಪುಟ್ಟ ಅಂಕುಶವೊಂದರಿಂದ ನಿಯಂತ್ರಿಸಬಹುದಲ್ಲವೇ? ಅದೇ ರೀತಿ ಮನುಷ್ಯನ ಅಹಂ ಎಂಬುದು ಯಾವ ಪ್ರಮಾಣಕ್ಕೂ ಬೆಳೆಯಬಹುದು. ಅದನ್ನು ನಿಯಂತ್ರಿಸಲು ಈ ಅಂಕುಶವೆಂಬ, ಛಲ, ಮನೋಬಲ ಅಥವಾ ಇಚ್ಛಾಶಕ್ತಿ ಸಾಕು.
ಇನ್ನು ಪಾಶ ಎಂಬುದು ಹುಚ್ಚೆದ್ದ ಮನಸ್ಸಿಗೆ ಕಡಿವಾಣ ಹಾಕುವ ಸಂಕೇತ. ಹುಚ್ಚುಗುದುರೆಯಂತೆ ಮಾನವನ ಮನಸ್ಸು ಓಡಾಡುತ್ತಿರುತ್ತದೆ, ಓಲಾಡುತ್ತಿರುತ್ತದೆ. ಅದನ್ನು ಹಗ್ಗ ಕಟ್ಟಿ, ಆಧ್ಯಾತ್ಮದತ್ತ ಕೇಂದ್ರೀಕರಿಸುವುದರಿಂದ, ನಿಯಂತ್ರಿಸುವುದರಿಂದ ಮಾನಸಿಕ ನೆಮ್ಮದಿ ಸದಾ ಸಾಧ್ಯ ಎಂದು ಬಿಂಬಿಸುತ್ತದೆ ಈ ಆಯುಧ.
ಭಕ್ತಿ ಹಾಗೂ ಭಾವೈಕ್ಯತೆಯ ಹಿನ್ನೆಲೆಯಲ್ಲಿ, ತಿಲಕರ ಮುಂದಾಳತ್ವದಲ್ಲಿ ದೇಶದೆಲ್ಲೆಡೆ ಪಸರಿಸಿದ ಗಣೇಶ ಹಬ್ಬವು ಇಂದು ನಮ್ಮೆಲ್ಲರ ಅಚ್ಚುಮೆಚ್ಚಿನ ಹಬ್ಬ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ.
ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಅಂತ್ಯಂತ ವಿಜೃಂಭಣೆಯಿಂದ ಇ ಹಬ್ಬವನ್ನು ಆಚರಿಸುತ್ತಾರೆ. ಇಲ್ಲಿ ಡೊಳ್ಳು ಕುಣಿತ,ಹುಲಿವೇಷ, ಯಕ್ಷಗಾನ ಮುಂತಾದವು ಇಲ್ಲಿನ ಗಣೇಶೋತ್ಸವಕ್ಕೆ ಮೆರಗು ತರುತ್ತದೆ. ಕುಂದಾಪುರ, ಶಿರೂರು, ಮಂಗಳೂರು, ಉಡುಪಿ ಭಟ್ಕಳ ಕುಮಟಾ ಅಂಕೋಲಾ, ಕಾರವಾರ ಮೊದಲಾದ ಕಡೆಯಲ್ಲಿ ಸುಂದರವಾದ ಸಂಭ್ರಮದ ಗಣೇಶ ಚತುರ್ಥಿ ನಡೆಯುತ್ತದೆ.
ವರುಷಗಳು ಸಾವಿರ ಉರುಳಿದರೂ ಪೀಳಿಗೆಗಳು ನೂರಾರು ಕಳೆದರೂ ಹಿಂದುಗಳ ಆಚರಣೆಗಳು ಎಂದಿಗೂ ನಿಲ್ಲಲಾರದು. ಅಂತೆಯೇ ಮೊದಲ ಪೂಜಿತನಾದ ಗಣೇಶನ ಹಬ್ಬವೂ ಕೂಡ ಈ ಜಗತ್ತು ಇರುವವರೆಗೂ ನಿಲ್ಲುವಂತದ್ದು. ಎಲ್ಲರೂ ಈ ಸಂಭ್ರವನ್ನು ಆಚರಿಸೋಣ.ಈ ಕಾರಣದಿಂದಾರೂ ಒಂದಿಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಲಗಳಲ್ಲಿ ಮಕ್ಕಳನ್ನು ಯುವ ಪೀಳಿಗೆಯನ್ನು ಸನ್ನದ್ದು ಮಾಡೋಣ.
✒️ರೇಷ್ಮಾ ಉಮೇಶ ಭಟ್ಕಳ
ಶಿಕ್ಷಕರು ಶ್ರೀವಲ್ಲಿ ಪ್ರೌಢಶಾಲೆ ಚಿತ್ರಾಪುರ