ಬೆಳಗಾವಿ : ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ಸಭಾಭವನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ಕಳೆದ 30 ದಿನಗಳಿಂದ ನಡೆದಿರುವ ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಸಂಪನ್ನಗೊಂಡಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹಿರಿಯ ಪತ್ರಕರ್ತ ಪಿ.ಕೆ. ಬಡಿಗೇರ ಆಗಮಿಸಿ ಮಾತನಾಡಿ, ಇಂದು ಫೋಟೋಗ್ರಾಫಿ ಉದ್ಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಕಾರಣ ತಾವುಗಳು ತರಬೇತಿಯಲ್ಲಿ ಪಡೆದ ಕೌಶಲ್ಯಗಳ ಸದುಪಯೋಗ ಪಡಿಸಿಕೊಳ್ಳಿ. ಮುಂದಿನ ದಿನಗಳಲ್ಲಿ ಫೋಟೋಗ್ರಾಫಿ ಮತ್ತು ವೀಡಿಯೋಗ್ರಾಫಿಗಳಲ್ಲಿ ಇನ್ನೂ ಹೆಚ್ಚಿನ ಬದಲಾವಣೆಗಳು ಬರಲಿದ್ದು ಅದೆಲ್ಲವನ್ನು ಎದುರಿಸಲು ತಾವುಗಳು ಕಾರ್ಯಪ್ರವೃತ್ತರಾಗಿರಿ ಎಂದು ತಿಳಿಸಿದರು.
ತರಬೇತಿ ಕಲಿಕೆಯು ನಿರಂತರವಾಗಿರಲಿ. ಕಲಿತಿರುವುದು ಕೇವಲ ಸಾಗರದಲ್ಲಿ ಒಂದು ಬಿಂದುವಿನಷ್ಟು ಮಾತ್ರ. ಕೆಲಸದಲ್ಲಿ ತಾಳ್ಮೆ, ಸಮಯಪ್ರಜ್ಞೆ, ಶಿಸ್ತು ಎಲ್ಲವನ್ನು ಕಲಿತಿರಬೇಕು. ಅಂದಾಗ ಮಾತ್ರ ಯಶಸ್ಸಿನ ಹಾದಿ ಹಿಡಿಲು ಸಾಧ್ಯ ಎಂದು ಹೇಳಿದರು.
ತರಬೇತಿ ಸಂಪನ್ಮೂಲ ವ್ಯಕ್ತಿ ನಾಗರಾಜ್ ಎಸ್. ದಸಮನಿ ಮಾತನಾಡಿ, ಇಲ್ಲಿ ಕಲಿತಿರುವ ತರಬೇತಿಯನ್ನು ಸರಿಯಾದ ಕ್ರಮದಲ್ಲಿ ಉಪಯೋಗಿಸಿಕೊಂಡು ಮುಂದೆ ಸಾಗಿ. ಜೊತೆಗೆ ಉದ್ಯೋಗದಲ್ಲಿ ಯಶಸ್ವಿಯಾಗಿರಿ ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಪ್ರವೀಣ್ ಕೆ.ಎಸ್. ಮಾತನಾಡಿ, ನೀವೆಲ್ಲರೂ ತರಬೇತಿಯನ್ನು ಪಡೆದಿರುವಿರಿ. ಆದರೆ, ಕಲಿಕೆ ಇಲ್ಲಿಗೆ ಮುಕ್ತಾಯವಲ್ಲ. ಕಲಿಕೆಯು ನಿರಂತರವಾಗಿರಲಿ. ಅಂದಾಗ ಮಾತ್ರ ನೀವು ಯಶಸ್ವಿಯಾಗಲು ಸಾಧ್ಯ.
ಸಂಸ್ಥೆ ಯಾವಾಗಲೂ ನಿಮಗಾಗಿ ನಿಮ್ಮ ಸೇವೆಗಾಗಿ ಇರುತ್ತದೆ ಎಂದು ಹೇಳಿದರು.ತರಬೇತಿದಾರರು ತೆಗೆದ ಛಾಯಾಚಿತ್ರ ಪ್ರದರ್ಶನವನ್ನು ಹಾಗೂ ತರಬೇತಿ ನಂತರದ ಪ್ರಮಾಣ ಪತ್ರವನ್ನು ವಿತರಿಸಲಾಯಿತು.