ಹುಬ್ಬಳ್ಳಿ: ಹುಬ್ಬಳ್ಳಿ – ಪುಣೆ ಮಧ್ಯೆ ನೂತನ ವಂದೇ ಭಾರತ ರೈಲು ಆರಂಭಿಸಲು ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದೆ. ಅತಿ ಶೀಘ್ರದಲ್ಲೇ ಹುಬ್ಬಳ್ಳಿ – ಪುಣೆ ನಡುವೆ ವಂದೇ ಭಾರತ ರೈಲು ಸಂಚಾರ ಆರಂಭಿಸುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಮಾಹಿತಿ ನೀಡಿದ್ದಾರೆ.

ಕೇಂದ್ರ ಸಚಿವ ಜೋಶಿ ಅವರ ಪ್ರಸ್ತಾವನೆಗೆ ಸ್ಪಂದಿಸಿದ್ದಾರೆ. ಹುಬ್ಬಳ್ಳಿ ಮತ್ತು ಪುಣೆ ನಡುವೆ ವಂದೇ ಭಾರತ ರೈಲು ಸಂಚಾರಕ್ಕಾಗಿ ಮತ್ತೊಂದು ವಂದೇ ಭಾರತ​ ರೈಲು ನೀಡುವಂತೆ ಅಶ್ವಿನ್ ವೈಷ್ಣವ್ ಅವರಿಗೆ ಸಚಿವ ಪ್ರಹ್ಲಾದ ಜೋಶಿ ಅವರು ಜುಲೈ ಮೊದಲ ವಾರದಲ್ಲಿ ಪತ್ರ ಬರೆದು ಮನವಿ ಮಾಡಿದ್ದರು.

ರಾಜ್ಯದಲ್ಲಿ ಬೆಂಗಳೂರು ನಂತರ ಪ್ರಮುಖ ವಾಣಿಜ್ಯ ನಗರಿ ಎಂಬ ಹೆಗ್ಗಳಿಕೆ ಹುಬ್ಬಳ್ಳಿ – ಧಾರವಾಡ ಅವಳಿ ನಗರಕ್ಕಿದೆ. ವಂದೇ ಭಾರತ ರೈಲು ಸಂಚಾರದಿಂದ ಈ ಭಾಗದ ವಾಣಿಜ್ಯೋದ್ಯಮ, ಕೈಗಾರಿಕಾ ವಸಾಹತು ಬೆಳವಣಿಗೆಗೆ ಅನುಕೂಲ ಆಗುತ್ತದೆ ಎಂದು ಸಚಿವ ಜೋಶಿ ಗಮನ ಸೆಳೆದಿದ್ದರು. ಹುಬ್ಬಳ್ಳಿಯಿಂದ ಮುಂಬೈ ಸಂಪರ್ಕಕ್ಕೂ ಈ ಮಾರ್ಗ ಅತ್ಯಂತ ಪ್ರಮುಖವಾಗಲಿದೆ ಎಂಬುದನ್ನು ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟು ವಂದೇ ಭಾರತ ರೈಲು ಸಂಚಾರ ಆರಂಭಿಸಲು ಒತ್ತಾಯಿಸಿದ್ದರು.
ಶೀಘ್ರದಲ್ಲಿಯೇ ಹುಬ್ಬಳ್ಳಿ- ಪುಣೆ ನಡುವೆ ವಂದೇ ಭಾರತ ಎಕ್ಸಪ್ರೆಸ್ ರೈಲು ಸಂಚರಿಸಲಿದೆ ಎಂದು ಸಚಿವ ಪ್ರಹ್ಲಾದ​​ ಜೋಶಿ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ರೈಲು ಸಂಚಾರದ ಉದ್ಘಾಟನೆ ದಿನ ಮತ್ತು ವೇಳಾಪಟ್ಟಿಯನ್ನು ರೈಲ್ವೆ ಇಲಾಖೆ ಆದಷ್ಟು ಬೇಗನೆ ಪ್ರಕಟಿಸಲಿದೆ ಎಂದು ತಿಳಿಸಿದ್ದಾರೆ.