ಪುತ್ತೂರು: ಚುನಾವಣೆ ಪೂರ್ವದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಜನತೆಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ, ನಾಲ್ಕು ಗೋಡೆಗಳ ಮಧ್ಯೆ ಕಚೇರಿಯೊಳಗೆ ನಡೆಯುತ್ತಿದ್ದ ಅಕ್ರಮ ಸಕ್ರಮ ಬೈಠಕ್‌ನ್ನು ಪ್ರತೀ ಗ್ರಾಮದ ಪ್ರಜೆಗಳ ಮನೆ ಬಾಗಿಲಿಗೆ ತಂದು ಸ್ಥಳದಲ್ಲೇ ಹಕ್ಕು ಪತ್ರವನ್ನು ನೀಡುತ್ತಿದ್ದೇನೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.

ಅವರು ಕೋಟಿಂಬಾಡಿ ಗ್ರಾಪಂ ಸಭಾಂಗಣದಲ್ಲಿ ನಡೆದ ಅಕ್ರಮ ಸಕ್ರಮ ಬೈಠಕ್ ಮತ್ತು ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾವಿರಾರು ಅಕ್ರಮ ಸಕ್ರಮ ಕಡತಗಳು ತಾಲೂಕು ಕಚೇರಿಯಲ್ಲಿ ದೂಳು ಹಿಡಿದಿದೆ. ಕಳೆದ ಹತ್ತು ವರ್ಷಗಳ ಹಿಂದೆ ಸಲ್ಲಿಸಿದ ಅರ್ಜಿಗಳು ಹಾಗೇ ಬಾಕಿ ಇದೆ ಅವುಗಳೆನ್ನಲ್ಲವನ್ನೂ ವಿಲೇವಾರಿ ಮಾಡಲಾಗುತ್ತಿದೆ. ಅರ್ಜಿಗಳ ಪೈಕಿ ಬಹುತೇಕ ಬಡವರ ಮತ್ತು ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಜನರ ಕಡತಗಳಾಗಿವೆ, ಯಾವ ಕಾರಣಕ್ಕೆ ಈ ಫೈಲುಗಳು ಬಾಕಿಯಾಗಿದೆ ಎಂದು ನನಗೂ ಗೊತ್ತಿದೆ ಅರ್ಜಿ ಹಾಕಿದವರಿಗೂ ಗೊತ್ತಿದೆ ಎಂದು ಹೇಳಿದರು. ಭೃಷ್ಟಾಚಾರದ ಕಾರಣಕ್ಕೆ ಕಡತಗಳು ಕೋಮಾ ಸ್ಥಿತಿಗೆ ತಲುಪಿದ್ದವು ಅಂಥಹ ಕಡತಗಳಿಗೆ ಇಂಜೆಕ್ಷನ್ ಕೊಡಿಸುವ ಮೂಲಕ ಮರುಜೀವ ನೀಡುವ ಕೆಲಸವನ್ನು ನಾನು ಮಾಡುತ್ತಿದ್ದೇನೆ. ಜನತೆಗೆ ಕೊಟ್ಟ ಮಾತನ್ನು ಪಾಲಿಸಿಯೇ ಸಿದ್ದ ಎಂದು ಶಾಸಕರು ಹೇಳಿದರು.

೩೦ ಅಕ್ರಮ ಸಕ್ರಮ

೩೦ ೯೪ಸಿ ಹಕ್ಕು ಪತ್ರ ವಿತರಣೆ

ಕಾರ್ಯಕ್ರಮದಲ್ಲಿ ಒಟ್ಟು ೩೦ ಅಕ್ರಮ ಸಕ್ರಮ ಮತ್ತು ೩೦ ೯೪ ಸಿ ಹಕ್ಕು ಪತ್ರವನ್ನು ಶಾಸಕರು ವಿತರಣೆ ಮಾಡಿದರು. ಕೋಡಿಂಬಡಿ, ಬೆಳ್ಳಿಪ್ಪಾಡಿ, ನೆಕ್ಕಿಲಾಡಿ, ಉಪ್ಪಿನಂಗಡಿ, ಹಿರೆಬಂಡಾಡಿ, ಬಜತ್ತೂರು, ಕಬಕ, ಕೊಡಿಪ್ಪಾಡಿ, ಮ್ತತು ಪಡ್ನೂರು ಗ್ರಾಮಗಳ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

ಕಾರಣ ಕೊಡದೆ ಪೆಂಡಿಂಗ್ ಇಡಬೇಡಿ: ಶಾಸಕರ ಸೂಚನೆ

ಬಾಕಿ ಇರುವ ಕಡತಗಳಲ್ಲಿ ೧೦ , ೧೫, ೨೦,೩೦, ೩೫ ಸೆಂಟ್ಸ್ ಒಳಗಿನ ಕಡತಗಳು. ಈ ಜಾಗದಲ್ಲಿ ಬಡವರು, ಮಧ್ಯಮ ವರ್ಗದವರು ಸಣ್ಣ ಮನೆಯನ್ನು ಮಾಡಿ ಉಳಿದ ಜಾಗದಲ್ಲಿ ತಕ್ಕಮಟ್ಟಿಗೆ ಕೃಷಿ ಮಾಡಿಕೊಂಡಿದ್ದಾರೆ ಈ ಕಡತಗಳು ಇಂದಿಗೂ ಹಾಗೇ ಉಳಿದಿದೆ. ಈ ರೀತಿಯ ಕಡತಗಳನ್ನು ತಕ್ಷಣ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಮತ್ತು ನನ್ನ ಗಮನಕ್ಕೆ ತಾರದೆ ಯಾವುದೇ ಕಡತಗಳನ್ನು ಪೆಂಡಿಂಗ್ ಇಡದಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದರು. ತಾಂತ್ರಿಕ ಸಮಸ್ಯೆಯಾಗಲಿ ಅಥವಾ ಇನ್ನೇನಾದರೂ ಸಮಸ್ಯೆಯಾಗಲಿ ಯಾವುದೇ ಸಮಸ್ಯೆ ಇರಲಿ ಅದನ್ನು ಇತ್ಯರ್ಥಪಡಿಸಲು ನಾನು ಯಾವ ಹಂತದವರೆಗೂ ಹೋಗಲೂ ಸಿದ್ದನಿದ್ದು ಅಧಿಕಾರಿಗಳು ಸಬೂಬು ಹೇಳಿ ಬಡವರ ಅರ್ಜಿಗಳನ್ನು ಕಪಾಟಿನಲ್ಲಿಡುವುದು ಬೇಡ ಎಂದು ಶಾಸಕರು ಸೂಚನೆ ನೀಡಿದರು.

ವಾರಕ್ಕೊಂದು ಬಾರಿ ಕಡತ ಪರಿಶೀಲನೆ

ಮುಂದಿನ ವಾರದಿಂದ ವಾರಕ್ಕೆ ಒಂದು ದಿನ ನಿಗದಿ ಮಾಡಿ ಆದಿನ ಕಂದಾಯ ಇಲಾಖೆಗೆ ಸಂಬಂಧಿಸಿದ ಕಡತಗಳನ್ನು ವಿಲೇವಾರಿ ಮತ್ತು ಪರಿಶೀಲನೆ ಮಾಡಲಾಗುತ್ತದೆ. ಅಕ್ರಮ ಸಕ್ರಮ ಫೈಲುಗಳನ್ನೂ ವಾರದಲ್ಲಿ ಒಂದು ದಿನ ವಿಲೇವಾರಿ ಮಾಡಿ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ಶೀಘ್ರದಲ್ಲೇ ವಿಲೇವಾರಿ ಮಾಡಿ ಇದೇ ತಿಂಗಳಲ್ಲಿ ಮತ್ತೊಂದು ಸುತ್ತಿನ ಬೈಠಕ್ ನಡೆಸಲಾಗುತ್ತದೆ ಎಂದು ಶಾಸಕರು ಹೇಳಿದರು. ಕಂದಾಯ ಇಲಾಖೆಯಲ್ಲಿ ಜನರಿಗಾಗುತ್ತಿರುವ ಸಮಸ್ಯೆಯನ್ನು ಶೀಘ್ರವೇ ಇತ್ಯರ್ಥಪಡಿಸಬೇಕಾಗುತ್ತದೆ. ಜನರು ತಮ್ಮ ಜಾಗದ ಹಕ್ಕಿಗಾಗಿ ಕಚೇರಿ ಅಲೆದಾಟ ಮಾಡುವುದನ್ನು ತಪ್ಪಿಸಲು ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕರು ಹೇಳಿದರು.

ಗ್ರಾಮ ಕರಣಿಕರು ವಾರದಲ್ಲೊಂದು ದಿನ ಕಚೇರಿಯಲ್ಲಿ ಕಡ್ಡಾಯ ಇರಬೇಕು

ಗ್ರಾಮಕರಣಿಕರು ದಿನ ನಿಗದಿ ಮಾಡಿ ಆ ದಿನದಂದು ಗ್ರಾಮದ ಸಾರ್ವಜನಿಕರಿಗೆ ಕಚೇರಿಯಲ್ಲಿ ಲಭ್ಯವಿರಬೇಕು. ಆಕೆಲಸ ಈ ಕೆಲಸ , ಮೀಟಿಂಗ್ ಎಂದು ಹೇಳಿ ವಾರದ ಏಳುದಿನವೂ ಹೊರಗಡೆ ಇದ್ದರೆ ಗ್ರಾಮಸ್ಥರಿಗೆ ತೊಂದರೆಯಾಗುತ್ತದೆ. ಎಲ್ಲಾ ಗ್ರಾಮಕರಣಿಕರು ಕಚೇರಿಯಲ್ಲಿ ಇಂಥದ್ದೇ ದಿನ ಕಡ್ಡಾಯವಾಗಿ ಇರುತ್ತೇವೆ ಎಂದು ಗ್ರಾಮಸ್ಥರಿಗೆ ತಿಳಿಸುವ ಕೆಲಸವನ್ನು ಮಾಡಬೇಕು. ಕಚೇರಿಯಲ್ಲಿ ಇರುವಿಕೆಯನ್ನು ತಾನು ಪರಿಶೀಲನೆ ನಡೆಸುವುದಾಗಿ ಹೇಳಿದ ಶಾಸಕರು ಕಡತ ವಿಲೇವಾರಿಗೆ ತಡ ಮಾಡಿದರೆ ನಾನೇ ವಿ ಎ ಕಚೇರಿಗೆ ಬರಬೇಕಾದೀತಿ ಎಂದು ಎಚ್ಚರಿಕೆಯನ್ನು ಶಾಸಕರು ನೀಡಿದರು.

 

ಕುಣಿಸುವ ಕೆಲಸ ಮಾಡಬೇಡಿ

ಕಚೇರಿಗೆ ಬರುವ ಸಾರ್ವಜನಿಕರನ್ನು ಅಧಿಕಾರಿ ವರ್ಗ ವ್ಯರ್ಥ ಕಚೇರಿಯಿಂದ ಕಚೇರಿಗೆ ಕುಣಿಸುವ ಕೆಲಸ ಮಾಡಬೇಡಿ. ಯಾವುದೇ ಒಂದು ಅರ್ಜಿಗೆ ಯಾವ ದಾಖಲೆ ಬೇಕು ಎಂಬುದನ್ನು ಸಾರ್ವಜನಿಕರಿಗೆ ಬರೆದು ಕೊಡಬೇಕು. ನಿಮ್ಮ ಸೂಚನೆ ಪ್ರಕಾರ ಅವರು ಕಚೇರಿಗೆ ಬಂದು ಅರ್ಜಿ ಸಲ್ಲಿಸುತ್ತಾರೆ . ಅರ್ಜಿ ಸಲ್ಲಿಸಿದ ಬಳಿಕ ಅದು ಇಲ್ಲ ಇದು ಇಲ್ಲ ಎಂದು ಹೇಳಿ ಜನರಿಗೆ ತೊಂದರೆ ಕೊಡುವ ಕೆಲಸವನ್ನು ಯಾವ ಅಧಿಕಾರಿಯೂ ಮಾಡಬಾರದು. ಏನೂ ಗೊತ್ತಿಲ್ಲದ ಬಡವರು ಕಚೇರಿಗೆ ಬಂದಾಗ ಅವರಿಗೆ ಸ್ಪಷ್ಟ ಮಾಹಿತಿ ನೀಡುವ ಕೆಲಸವನ್ನು ಮಾಡಲೇಬೇಕು ಎಂದು ಹೇಳಿದ ಶಾಸಕರು ಲಂಚವನ್ನು ಎಂದೂ ಸಹಿಸುವುದೇ ಇಲ್ಲ ಎಂದು ಹೇಳಿದರು.

ಶಾಸಕರ ಮುತುವರ್ಜಿಯಿಂದ ಅರ್ಜಿ ವಿಲೇವಾರಿ ಆಗುತ್ತಿದೆ: ತಹಶೀಲ್ದಾರ್

ಅಕ್ರಮ ಸಕ್ರಮ ಬೈಠಕ್ ನಡೆಯುವಲ್ಲಿ ಶಾಸಕರ ಮುತುವರ್ಜಿ ಗಮನಾರ್ಹವಾಗಿದೆ. ನನ್ನನ್ನೂ ಸೇರಿದಂತೆ ಕಂದಾಯ ಇಲಾಖೆಯ ಎಲ್ಲರನ್ನೂ ಶಾಸಕರು ನಿಕಟ ಸಂಪರ್ಕ ಹೊಂದಿದ್ದು ಕಡತ ವಿಲೇವಾರಿ ವಿಚಾರದಲ್ಲಿ ವಿಳಂಬವಾಗದಂತೆ ಪದೇ ಪದೇ ಒತ್ತಡವನ್ನು ಮಾಡುತ್ತಿದ್ದಾರೆ ಈ ಕಾರಣಕ್ಕೆ ಕರ್ನಾಟಕ ರಾಜ್ಯದಲ್ಲಿ ಪುತ್ತೂರು ತಾಲೂಕು ಪ್ರಥಮ ಸ್ಥಾನವನ್ನು ಪಡೆದಿದೆ. ರಾಜ್ಯದಲ್ಲಿ ಎಲ್ಲೂ ಅಗದ ಕೆಲಸ ಪುತ್ತೂರಲ್ಲಿ ನಡೆದಿದೆ ಈ ಕಾರಣಕ್ಕೆ ನಮಗೆ ಬೇರೆ ಜಿಲ್ಲೆಗಳಿಂದ , ತಾಲೂಕುಗಳಿಂದ ನಿತ್ಯ ಕರೆಗಳು ಬರುತ್ತಿದೆ. ಪುತ್ತೂರು ಶಸಕರ ಕಾರ್ಯವೈಖರಿಯನ್ನು ಹೊರ ಜಿಲ್ಲೆಯ ಜನರು ಕೊಂಡಾಡುತ್ತಿರುವುದು ನಿಮ್ಮ ಭಾಗ್ಯ ಎಂದು ತಹಶಿಲ್ದಾರ್ ಪುರಂದರ ಹೆಗ್ಡೆ ಹೇಳಿದರು. ಇದೇ ರೀತಿ ಮುಂದುವರೆದರೆ ಪುತ್ತೂರು ರಾಜ್ಯಕ್ಕೆ ಮಾದರಿಯಾಗಲಿದೆ. ಅಕ್ರಮ ಸಕ್ರಮ ಕಡತಗಳು ಸೇರಿದಂತೆ ೯೪ಸಿ ೯೪ ಸಿಸಿ ಕಡತಗಳು ಬಹುತೇಕ ವಿಲೇವಾರಿಯಗುತ್ತಿದೆ, ಬಡವರ ಆಸೆಗಳು ಈಡೇರುತ್ತಿರುವುದು ಶ್ಲಾಘನೀಯ ಎಂದು ಹೇಳಿದ ಅವರು ಶಾಸಕರು ಎಲ್ಲಾ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿರುವುದು ಕ್ಷೇತ್ರದ ಜನರ ಭಾಗ್ಯ ಎಂದು ಹೇಳಿದರು.

ಎಲ್ಲಾ ಅರ್ಜಿಗಳನ್ನೂ ವಿಲೇವಾರಿ ಮಾಡುವಂತೆ ಶಾಸಕರ ಸೂಚನೆ ಇದೆ: ಮಹಮ್ಮದ್ ಬಡಗನ್ನೂರು

ಈಗಾಗಲೇ ಹಲವಾರು ಅರ್ಜಿಗಳನ್ನು ಪ್ರತೀ ಗ್ರಾಮಕ್ಕೆ ತೆರಳಿ ವಿಲೇವಾರಿ ಮಾಡಲಾಗುತ್ತಿದೆ, ನಮ್ಮ ಅರ್ಜಿಗಳು ಏನಾಗಿದೆಯೋ ಎಂದು ಆತಂಕದಲ್ಲಿದ್ದವರಿಗೆ ಹಕ್ಕು ಪತ್ರ ನೀಡುವ ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ. ಯಾರಿಂದಲೂ ನಯಾ ಪೈಸೆ ಲಂಚ ಇಲ್ಲದೆ ಪುತ್ತೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಅಕ್ರಮ ಸಕ್ರಮ ಕಡತಗಳ ವಿಲೇವಾರಿ ನಡೆಯುತ್ತಿದೆ ಎಂದು ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಹೇಳಿದರು.

ಪೆಂಡಿಂಗ್ ಇರುವ ಸಾವಿರಾರು ಅರ್ಜಿಗಳನ್ನು ಶೀಘ್ರದಲ್ಲೇ ವಿಲೇವಾರಿ ಮಾಡುವಂತೆ ಶಾಸಕರ ಸೂಚನೆ ಇದೆ ಅದರಂತೆ ಸಮಿತಿಯ ಸದಸ್ಯರು ಮತ್ತು ಕಂದಾಯ ಅಧಿಕಾರಿ ವರ್ಗದವರು ಸಮರೋಪಾದಿಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಬಡವರಿಗೆ ಸೇರಿದ ಜಾಗವನ್ನು ಅವರಿಗೇ ನ್ಯಾಯಯುತವಾಗಿ ಕೊಡಿಸುವ ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ ಎಂದು ಹೇಳಿದರು.

ಹಕ್ಕು ಪತ್ರ ಸಿಕ್ಕಿದೆ ಎಂದು ಮಕ್ಕಳಿಗೆ ಹೇಳಿ: ಬದಿನಾರ್

ನಿಮಗೆ ಕಾಂಗ್ರೆಸ್ ಸರಕಾರ , ಕಾಂಗ್ರೆಸ್ ಶಾಸಕರು ಹಕ್ಕು ಪತ್ರ ಕೊಟ್ಟಿರುವುದು ಈ ವಿಚಾರವನ್ನು ನೀವು ನಿಮ್ಮ ಮನೆಯ ಮಕ್ಕಳಿಗೂ ಹೇಳಬೇಕು. ಹಕ್ಕು ಪತ್ರ ಕೊಟ್ಟವರು ಯಾರೆಂದು ಮಕ್ಕಳಿಗೆ ಹೇಳದೆ ಇದ್ದರೆ ಅದು ನಿಮ್ಮ ತಪ್ಪಾಗುತ್ತದೆ ಎಂದು ಕೋಡಿಂಬಡಿ ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರ್ ಹೇಳಿದರು.

ನಮ್ಮ ಜಾಗವನ್ನು ಅಂದಿನ ಶಾಸಕ ವಿನಯಕುಮಾರ್ ಸೊರಕೆಯವರು ಮಾಡಿಕೊಟ್ಟಿದ್ದರು, ಈ ವಿಚಾರವನ್ನು ನಮ್ಮ ಅಪ್ಪ ಅಮ್ಮ ನಮ್ಮಲ್ಲಿ ಹೇಳಿದ್ದರು ಈ ಕಾರಣಕ್ಕೆ ನಾನು ಅಂದಿನಿಂದ ಇಂದಿನ ತನಕ ಕಾಂಗ್ರೆಸ್ ಪಕ್ಷವನ್ನು ಅಪ್ಪಿಕೊಂಡಿದ್ದೇನೆ. ನಮಗೆ ನ್ಯಾಯ ಕೊಡಿಸಿದ ಕಾಂಗ್ರೆಸ್ಸನ್ನು ನಾವು ಎಂದೂ ಮರೆಯಬಾರದು ಇದನ್ನು ಮಕ್ಕಳಿಗೂ ಹೇಳಬೇಕು ಎಂದು ಹೇಳಿದ ಶಾಸಕರು ಬಡವರಿಗೆ , ಮಧ್ಯಮ ವರ್ಗದವರಿಗೆ ನ್ಯಾಯ ಸಿಗುವುದು ಕಾಂಗ್ರೆಸ್ ಸರಕಾರದಿಂದ ಮಾತ್ರವಾಗಿದೆ. ಸರಕಾರದ ಐದು ಗ್ಯಾರಂಟಿ ಯೋಜನೆಗಳು ಪ್ರತೀ ಮನೆಯನ್ನು ಬೆಳಗಿಸಿದೆ ಇದೀಗ ಮನೆಯ ಅಡಿಸ್ಥಳಕ್ಕೂ ಹಕ್ಕು ಪತ್ರ ನೀಡುವ ಮೂಲಕ ನಮಗೆಲ್ಲರಿಗೂ ಕಾಂಗ್ರೆಸ್ ಬದುಕು ಕೊಟ್ಟಿದೆ ಅದನ್ನು ಎಂದಿಗೂ ನಾವು ಮರೆಯಬಾರದು ಎಂದು ಹೇಳಿದರು.

 

ಅಶೋಕ್ ರೈ ಶಾಸಕರಾಗಿದ್ದರಿಂದ ನ್ಯಾಯ ಸಿಕ್ಕಿದೆ: ಮಲ್ಲಿಕಾ

ಅಶೋಕ್ ರೈ ಶಾಸಕರಾಗಿದ್ದರಿಂದ ಇಂದು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ನ್ಯಾಯ ಸಿಕ್ಕಿದೆ, ಬೇರೆ ಪಕ್ಷದವರು ಶಾಸಕರಾಗಿರುತ್ತಿದ್ದರೆ ಹಣ ಕೊಡದೆ ಹಕ್ಕು ಪತ್ರ ಸಿಗುತ್ತಿರಲಿಲ್ಲ ಎಂಬುದನ್ನು ನಾವು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಎಂದೂ ನ್ಯಾಯದ ಪರ ಇರುವ ಶಾಸಕ ಅಶೋಕ್ ರೈಗಳ ಕೈ ಗಟ್ಟಿ ಮಾಡುವ ಕೆಲಸವನ್ನು ಪ್ರತೀಯೊಬ್ಬರೂ ಮಾಡಬೇಕು ಎಂದು ಕೋಡಿಂಬಾಡಿ ಗ್ರಾಪಂ ಅಧ್ಯಕ್ಷ ಮಲ್ಲಿಕಾ ಹೇಳಿದರು.

ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ರಾಮಣ್ಣ ಪಿಲಿಂಜ, ರೂಪರೇಖಾ ಆಳ್ವ ಉಪಸ್ಥಿತರಿದ್ದರು. ಉಪ್ಪಿನಂಗಡಿ ಕಂದಾಯ ನಿರೀಕ್ಷಕ ಚಂಧ್ರನಾಯ್ಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.