ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್ ತೂಗುದೀಪ ಶ್ರೀನಿವಾಸ ಕುರಿತು ಆರೋಪಪಟ್ಟಿಯಲ್ಲಿರುವ ಯಾವುದೇ ರಹಸ್ಯ ಮಾಹಿತಿಯನ್ನು ಪ್ರಸಾರ ಮಾಡದಂತೆ ಮಧ್ಯಮಗಳಿಗೆ ಹೈಕೋರ್ಟ್ ಮಂಗಳವಾರ ನಿರ್ಬಂಧ ವಿಧಿಸಿದೆ.

ತಮ್ಮ ವಿರುದ್ಧದ ಮಾಹಿತಿ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ತನಿಖಾಧಿಕಾರಿಗಳು ಸಲ್ಲಿಸಿರುವ ಆರೋಪಪಟ್ಟಿಯ ಕುರಿತು ವಿಚಾರಣಾ ನ್ಯಾಯಾಲಯದಲ್ಲಿ ತೀರ್ಪು ಪ್ರಕಟವಾಗುವುದಕ್ಕೂ ಮುನ್ನ ಆರೋಪಪಟ್ಟಿಯ ಯಾವುದೇ ಗುಪ್ತ ಮಾಹಿತಿಯನ್ನು ಪ್ರಸಾರಮಾಡದಂತೆ ಕೋರ್ಟ್ ನಿರ್ಬಂಧ ವಿಧಿಸಿದೆ.

ಇದೇ ಪ್ರಕರಣದಲ್ಲಿ ದರ್ಶನ್ ಪತ್ನಿ ಸಲ್ಲಿಸಿದ್ದ ಅರ್ಜಿ ಕುರಿತಂತೆ ವಿಚಾರಣಾ ನ್ಯಾಯಾಲಯ, ದರ್ಶನ್ ವಿರುದ್ಧ ಯಾವುದೇ ಆಧಾರರಹಿತ ಮಾಹಿತಿ ಪ್ರಸಾರ ಮಾಡದಂತೆ ನಿರ್ಬಂಧಕಾಜ್ಞೆ ವಿಧಿಸಿ ಆದೇಶಿಸಿದೆ. ಆದರೂ, ಮಾಧ್ಯಮಗಳು ಆರೋಪಪಟ್ಟಿಯಲ್ಲಿನ ಗೌಪ್ಯ ಮಾಹಿತಿಯನ್ನು ಪ್ರಸಾರ ಮಾಡುತ್ತಿವೆ ಎಂದು ಅರ್ಜಿದಾರರ ಪರ ವಕೀಲರ ವಾದವನ್ನು ಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ.
ಅಲ್ಲದೇ, ಮುಂದಿನ ಆದೇಶವರೆಗೂ ಮಾಧ್ಯಮಗಳು ಆರೋಪಪಟ್ಟಿಯಲ್ಲಿನ ಗೌಪ್ಯ ಮಾಹಿತಿ ಪ್ರಸಾರ ಮಾಡುವುದು/ಮುದ್ರಿಸುವುದು/ಪ್ರಕಟಿಸುವುದು ಕೇಬಲ್ ಟೆಲಿವಿಷನ್ ನೆಟ್‌ವರ್ಕ್ ರೆಗ್ಯುಲೇಷನ್ ಆಕ್ಟ್ 1995ರ ನಿಯಮ 5 ಮತ್ತು ಸುಪ್ರೀಂ ಕೋರ್ಟ್‌ನ ತೀರ್ಪಿಗೆ ವಿರುದ್ಧವಾಗುತ್ತದೆ. ಹೀಗಾಗಿ ದರ್ಶನ್ ಕುರಿತಂತೆ ಆರೋಪಪಟ್ಟಿಯಲ್ಲಿನ ಗುಪ್ತ ಮಾಹಿತಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ದೇಶನ ನೀಡುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.