ಬೆಂಗಳೂರು: ಪಿಎಸ್ಐ 402 ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಸೆಪ್ಟೆಂಬರ್ 22ರ ಬದಲಿಗೆ ಸೆಪ್ಟೆಂಬರ್ 28 ರ ಶನಿವಾರದಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಪತ್ರಕರ್ತರ ಜೊತೆ ಮಾತನಾಡಿದ ಅವರು, ನೂರಕ್ಕೂ ಹೆಚ್ಚು ಆಕಾಂಕ್ಷಿಗಳು ಯುಪಿಎಸ್ಸಿ ಪ್ರಿಲಿಮ್ಸ್ ಪರೀಕ್ಷೆ ಬರೆದು ಮುಖ್ಯ ಪರೀಕ್ಷೆಗೆ ಅರ್ಹತೆ ಹೊಂದಿದ್ದಾರೆ. ಮುಖ್ಯ ಪರೀಕ್ಷೆಗೆ ಮತ್ತು ಪಿಎಸ್ಐ ಪರೀಕ್ಷೆ ಸೆಪ್ಟೆಂಬರ್ 22ರಂದು ನಿಗದಿಯಾಗಿರುವುದರಿಂದ ಯಾವುದಾದರೂ ಒಂದು ಪರೀಕ್ಷೆ ಅವಕಾಶ ಕೈ ತಪ್ಪುತ್ತದೆ. ಹೀಗಾಗಿ ಆಕಾಂಕ್ಷಿಗಳು ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಕೆ ಇ ಎ ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಡಿಸೆಂಬರ್ ವರೆಗೆ ಪರೀಕ್ಷೆ ನಡೆಸಲು ಭಾನುವಾರ ದಿನ ಖಾಲಿ ಇಲ್ಲ ಎಂದು ತಿಳಿಸಿದ್ದರು. ಕೊನೆಗೂ ಎಲ್ಲಾ ಆಕಾಂಕ್ಷಿಗಳ ಹಿತ ಗಮನಿಸಿ ಸೆಪ್ಟೆಂಬರ್ 28 ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.