ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ನವದೆಹಲಿಯಲ್ಲಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಅವರ ನಿವಾಸದಲ್ಲಿ ಬುಧವಾರ ಗಣೇಶ ಪೂಜೆಯಲ್ಲಿ ಪಾಲ್ಗೊಂಡರು. ಆದರೆ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ಪ್ರಧಾನಿ ನಡೆಯನ್ನು ತೀವ್ರವಾಗಿ ಟೀಕಿಸಿದವು. ಇದಕ್ಕೆ ಪ್ರತಿಯಾಗಿ ಬಿಜೆಪಿ ಇದೀಗ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮುಖ್ಯ ನ್ಯಾಯಮೂರ್ತಿಯಾಗಿದ್ದ ಕೆ.ಜಿ.ಬಾಲಕೃಷ್ಣನ್ ಅವರು ಜೊತೆಗೆ ಇರುವ ಫೋಟೋಗಳನ್ನು ವೈರಲ್ ಮಾಡಿದೆ. ಬಾಲಕೃಷ್ಣನ್ ಅವರ ಜೊತೆ ಮನಮೋಹನ್ ಸಿಂಗ್ ಇಫ್ತಾರ್ ಕೂಟದಲ್ಲಿ ಭಾಗಿಯಾಗಿದ್ದರು. ಅಂದು ಇಲ್ಲದ ಮಡಿವಂತಿಕೆ ಇಂದೇಕೆ ಎಂದು ಬಿಜೆಪಿ ಈಗ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ನ್ಯಾಯಮೂರ್ತಿ ಮತ್ತು ಅವರ ಪತ್ನಿ ಕಲ್ಪನಾ ದಾಸ್ ಅವರೊಂದಿಗೆ ಪ್ರಾರ್ಥನೆಗಳನ್ನು ಸಲ್ಲಿಸಿದ್ದಾರೆ. ಗಣೇಶ ಚತುರ್ಥಿ ಆಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಬುಧವಾರ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮನೆಗೆ ಆಗಮಿಸಿದರು.
ಮುಖ್ಯ ನ್ಯಾಯಮೂರ್ತಿ ಮತ್ತು ಅವರ ಪತ್ನಿ ಪ್ರಧಾನಿ ಮೋದಿಯನ್ನು ತಮ್ಮ ನಿವಾಸಕ್ಕೆ ಸ್ವಾಗತಿಸಿದರು. ಮಹಾರಾಷ್ಟ್ರದ ಸಾಂಪ್ರದಾಯಿಕ ಟೋಪಿಯನ್ನು ಧರಿಸಿದ ಪ್ರಧಾನಿ ಮೋದಿ, ಡಿವೈ ಚಂದ್ರಚೂಡ್ ಮತ್ತು ಅವರ ಪತ್ನಿಯೊಂದಿಗೆ ಗಣೇಶನ ಮೂರ್ತಿಯ ಆರತಿ ಮತ್ತು ಪ್ರಾರ್ಥನೆ ಸಲ್ಲಿಸಿದರು.
ಗಣೇಶ ಚತುರ್ಥಿಯನ್ನು ದೇಶಾದ್ಯಂತ ಧಾರ್ಮಿಕ ಶ್ರದ್ಧೆ ಮತ್ತು ಭಕ್ತಿಯಿಂದ ಆಚರಿಸಲಾಗುತ್ತಿದೆ. ಹತ್ತು ದಿನಗಳ ಪವಿತ್ರ ಹಬ್ಬವು ‘ಚತುರ್ಥಿ’ಯಂದು ಪ್ರಾರಂಭವಾಗುತ್ತದೆ ಮತ್ತು ‘ಅನಂತ ಚತುರ್ದಶಿ’ಯಂದು ಮುಕ್ತಾಯವಾಗುತ್ತದೆ.ಪ್ರಧಾನಿ ಮೋದಿ ಅವರು ಎಲ್ಲಾ ದೇಶವಾಸಿಗಳಿಗೆ ಗಣೇಶ ಚತುರ್ಥಿಯ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. “ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಹೃತ್ಪೂರ್ವಕ ಶುಭಾಶಯಗಳು. ಗಣಪತಿ ಬಪ್ಪಾ ಮೋರಿಯಾ,’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗಣೇಶ ಚತುರ್ಥಿಯ ಮುನ್ನಾದಿನದಂದು ಜನರಿಗೆ ಶುಭಾಶಯ ಕೋರಿದರು ಮತ್ತು ಹಬ್ಬವು ಸಾಮಾಜಿಕ ಸಾಮರಸ್ಯ ಮತ್ತು ಸಹೋದರತ್ವದ ಸಂದೇಶವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಗಣೇಶ ಹಬ್ಬದ ದಿನ ಸಿಜೆಐ ಮನೆಗೆ ಭೇಟಿ ನೀಡಿರುವುದಕ್ಕೆ ಟೀಕಿಸುತ್ತಿರುವ ಪ್ರತಿಪಕ್ಷಗಳಿಗೆ ಬಿಜೆಪಿ ಬಲವಾಗಿಯೇ ತಿರುಗೇಟು ನೀಡಿದೆ. ಯುಪಿಎ ಸರಕಾರದ ಅವಧಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ 2009ರಲ್ಲಿ ಮುಸ್ಲಿಮರಿಗಾಗಿ ‘ಇಫ್ತಾರ್ ಕೂಟ’ ಆಯೋಜಿಸಿದ್ದನ್ನೂ, ಅದಕ್ಕೆ ಅಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಕೆ.ಜಿ.ಬಾಲಕೃಷ್ಣನ್ ಹಾಜರಾಗಿದ್ದನ್ನು ಫೋಟೊ ಸಮೇತ ನೆನಪಿಸಿ ಬಲವಾಗಿಯೇ ಕುಟುಕಿದೆ. ಆ ಮೂಲಕ ಪ್ರಧಾನಿ ಮೋದಿ ಅವರು ಗಣಪತಿ ಹಬ್ಬದ ದಿನ ಸಿಜೆ ಐ ಮನೆಗೆ ಭೇಟಿ ನೀಡಿರುವುದರಲ್ಲಿ ತಪ್ಪೇನೂ ಇಲ್ಲ ಎಂದು ಬಲವಾಗಿಯೆ ಸಮರ್ಥಿಸಿಕೊಂಡಿದೆ. 2009ರ ಫೋಟೊ ವನ್ನು ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ಪ್ರಧಾನಿ ಮೋದಿ ಈಗಿನ ಸಿಜೆಐ ಮನೆಗೆ ಗಣಪತಿ ಹಬ್ಬಕ್ಕೆ ಹೋದರೆ ಅದು ‘ನ್ಯಾಯಾಂಗ ಅಪಾಯದಲ್ಲಿದೆ’ ಎಂದಾಗುತ್ತದೆ.ಹಿಂದಿನ ಪ್ರಧಾನಿ ಸಿಂಗ್ ಹಮ್ಮಿಕೊಂಡ ಇಫ್ತಾರ್ಗೆ ಅಂದಿನ ಸಿಜೆ ಐ ಹಾಜರಾದರೆ. ‘ಶ್, ಇದು ಜಾತ್ಯತೀತ ವಾದ. ಇಲ್ಲಿ ನ್ಯಾಯಾಂಗ ಬಲು ಸುರಕ್ಷಿತ’ ಎಂದು ವ್ಯಂಗ್ಯ ಮಾಡಿದ್ದಾರೆ.