ಪುತ್ತೂರು: ಪುತ್ತೂರಿಗೆ ಮೆಡಿಕಲ್ ಕಾಲೇಜು ಸಿಗಲೇಬೇಕು. ಇದಕ್ಕಾಗಿ ಯಾವುದೇ ತ್ಯಾಗಕ್ಕಾದರೂ ಸಿದ್ದ ಎಂದು ಹೇಳಿರುವ ಪುತ್ತೂರು ಶಾಸಕ ಅಶೋಕ್ ರೈ ಅವರು, ಈ ಬಗ್ಗೆ ಬಜೆಟ್ ಗೆ ಒಂದು ತಿಂಗಳು ಮೊದಲು ಹೋರಾಟ ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.
ಮೆಡಿಕಲ್ ಕಾಲೇಜ್ ಸ್ಥಾಪನೆ ಸಂಬಂಧ ಜನಾಂದೋಲನ ಹಮ್ಮಿಕೊಳ್ಳುವ ನಿಟ್ಟಿನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಅತಿ ಹೆಚ್ಚು ತೆರಿಗೆ ನೀಡುವ ಎರಡನೇ ಜಿಲ್ಲೆ ದಕ್ಷಿಣ ಕನ್ನಡ. ಆದರೆ, ಆಶ್ಚರ್ಯ ಎಂದರೆ ಸರಕಾರದ ಯಾವುದೇ ಯೋಜನೆಗಳು ಇಲ್ಲಿಗೆ ಮಂಜೂರು ಆಗುವುದಿಲ್ಲ. ಅವುಗಳು ಬೇರೆ ಜಿಲ್ಲೆಗಳ ಪಾಲಾಗುತ್ತಿವೆ. ಶಕುಂತಲಾ ಶೆಟ್ಟಿ ಶಾಸಕರಾಗಿದ್ದ ಅವಧಿಯಲ್ಲಿ ಮೆಡಿಕಲ್ ಕಾಲೇಜಿಗೆ 40 ಎಕರೆ ಜಾಗ ಕಾಯ್ದಿರಿಸಿದ್ದು ಇದೊಂದು ಉತ್ತಮ ಹೆಜ್ಜೆಯಾಗಿದೆ. ಮುಂದಿನ ದಿನಗಳಲ್ಲಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಆಗಬೇಕು. ಈ ಬಗ್ಗೆ ನಾನು ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿರುವೆ. ಬಜೆಟ್ ನಲ್ಲಿ ಮನ್ನಣೆ ನೀಡುವ ಭರವಸೆ ನೀಡಿದ್ದಾರೆ. ಒಂದು ವೇಳೆ ಬಜೆಟ್ ನಲ್ಲಿ ಮನ್ನಣೆ ಸಿಗದೇ ಹೋದರೆ ಕಾಲೇಜು ಸ್ಥಾಪನೆಗೆ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಅವರು ಹೇಳಿದರು.
ಸಮಿತಿಯ ಗೌರವಾಧ್ಯಕ್ಷ ಅಣ್ಣಾ ವಿನಯಚಂದ್ರ ಮಾತನಾಡಿ, ಜಿಲ್ಲಾ ಕೇಂದ್ರಕ್ಕೆ ಪೂರಕವಾಗಿ ಮೆಡಿಕಲ್ ಕಾಲೇಜಿನ ಬೇಡಿಕೆ ಇದ್ದು ಜಿಲ್ಲೆಯಾದ್ಯಂತ ಸಂಘ-ಸಂಸ್ಥೆಗಳು ಮತ್ತು ಕಾಲೇಜುಗಳಿಗೆ ತೆರಳಿ ಬೆಂಬಲ ಪಡೆದುಕೊಂಡಿದ್ದು ಪಕ್ಷಾತೀತವಾಗಿ ಮುಖ್ಯಮಂತ್ರಿಗೆ ಅವರನ್ನು ಭೇಟಿಯಾಗಿ ಮಾನವಿ ಮಾಡಿಕೊಳ್ಳುವ ಬಗ್ಗೆ ಸಲಹೆ ನೀಡಿದರು.