ಮುಂಬಯಿ : ಭಿಕ್ಷಾಟನೆಯು ಸಾಮಾನ್ಯವಾಗಿ ಬಡತನದೊಂದಿಗೆ ಸಂಬಂಧಿಸಿದೆ ಎಂಬುದು ಸಾಮಾನ್ಯವಾದ ನಂಬಿಕೆ. ಆದರೆ ಕೆಲವರಿಗೆ ಇದು ಭಾರೀ ಲಾಭದಾಯಕ ಉದ್ಯೋಗ. ಭಾರತದ ಭಿಕ್ಷುಕರೊಬ್ಬರು ವಿಶ್ವದ ಶ್ರೀಮಂತ ಭಿಕ್ಷುಕ ಎಂದು ಗುರುತಿಸಲ್ಪಟ್ಟಿದ್ದಾರೆ, ಅವರ ಆಸ್ತಿಯ ಮೌಲ್ಯ ನಿವ್ವಳ 7.5 ಕೋಟಿ ರೂ.ಗಳು.

ಮುಂಬೈನಲ್ಲಿ ನೆಲೆಸಿರುವ ಭರತ್‌ ಜೈನ್ ಎಂಬ 54 ವರ್ಷ ವಯಸ್ಸಿನ ವ್ಯಕ್ತಿ 40 ವರ್ಷಗಳಿಂದ ಭಿಕ್ಷಾಟನೆ ಮಾಡುತ್ತಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಅವರು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ ರೈಲು ನಿಲ್ದಾಣ (CSMT) ಅಥವಾ ಆಜಾದ್ ಮೈದಾನದಂತಹ ಪ್ರಮುಖ ಸ್ಥಳಗಳಲ್ಲಿ ಭಿಕ್ಷೆ ಬೇಡುತ್ತಾರೆ. ಅವರ ದಿನವೊಂದಕ್ಕೆ 2,000 ರಿಂದ 2,500 ರೂ. ಗಳಿಸುತ್ತಾರಂತೆ. ದಿನಕ್ಕೆ 10 ರಿಂದ 12 ಗಂಟೆಗಳ ಕಾಲ ಭಿಕ್ಷಾಟನೆ ಮಾಡುತ್ತಾರೆ ಮತ್ತು ಯಾವುದೇ ರಜೆಯನ್ನು ತೆಗೆದುಕೊಳ್ಳುವುದಿಲ್ಲ.

ಇಂದು, ಭರತ್‌ ಜೈನ್ ಮುಂಬೈನಲ್ಲಿ ಬೆಲೆಬಾಳುವ ಆಸ್ತಿಯನ್ನು ಹೊಂದಿದ್ದಾರೆ, ಪರೇಲ್‌ನಲ್ಲಿ 2 ಬೆಡ್‌ ರೂಂ ಫ್ಲಾಟ್ ಇದ್ದು, ಇದರ ಬೆಲೆ 1.2 ಕೋಟಿ ರೂ. ಅವರು ಅಲ್ಲಿ ಹೆಂಡತಿ, ಇಬ್ಬರು ಗಂಡುಮಕ್ಕಳು, ತಂದೆ ಹಾಗೂ ಸಹೋದರನೊಂದಿಗೆ ವಾಸಿಸುತ್ತಾರೆ. ಅವರು ತಮ್ಮ ಮಕ್ಕಳನ್ನು ಹೆಸರಾಂತ ಕಾನ್ವೆಂಟ್ ಶಾಲೆಗೆ ಸೇರಿಸಿ ಓದಿಸಿದ್ದಾರೆ ಮತ್ತು ಮಕ್ಕಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಅವರ ಇತರ ಕುಟುಂಬ ಸದಸ್ಯರು ಸ್ಟೇಷನರಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಅಲ್ಲದೆ, ಭರತ್‌ ಜೈನ್‌ ಥಾಣೆಯಲ್ಲಿ ಎರಡು ಅಂಗಡಿಗಳನ್ನು ಹೊಂದಿದ್ದಾರೆ, ಅದನ್ನು ತಿಂಗಳಿಗೆ ₹ 30,000 ರೂ. ಬಾಡಿಗೆಗೆ ನೀಡಲಾಗಿದೆಯಂತೆ.

ಜೈನ್ ಕುಟುಂಬದ ಪ್ರಕಾರ, ಭರತ್‌ ಜೈನ್‌ ಭಿಕ್ಷಾಟನೆಯನ್ನು ಆನಂದಿಸುತ್ತಾರೆ ಮತ್ತು ಅವರು ಅದನ್ನು ತ್ಯಜಿಸಲು ಬಯಸುವುದಿಲ್ಲ. ಜೈನ್ ಅವರಿಗೆ ಭಿಕ್ಷಾಟನೆ ಎಂಬುದು ಅವರ ಆಯ್ಕೆ, ಅದನ್ನು ಅವಶ್ಯಕತೆಗಾಗಿ ಮಾಡುತ್ತಿಲ್ಲ. ತನಗೆ ದುರಾಸೆಯಿಲ್ಲ ಎಂದು ಅವರು ಹೇಳುತ್ತಾರೆ, ಅವರು ಆಗಾಗ್ಗೆ ದೇವಾಲಯಗಳು ಮತ್ತು ದತ್ತಿಗಳಿಗೆ ಹಣವನ್ನು ದಾನ ಮಾಡುತ್ತಾರೆ.
ಭರತ್‌ ಜೈನ್ ಮಾತ್ರ ಭಾರತದಲ್ಲಿ ಶ್ರೀಮಂತ ಭಿಕ್ಷುಕರಲ್ಲ, ₹1.5 ಕೋಟಿ ಆಸ್ತಿ ಹೊಂದಿರುವ ಸಂಭಾಜಿ ಕಾಳೆ, ₹1 ಕೋಟಿ ಆಸ್ತಿ ಹೊಂದಿರುವ ಲಕ್ಷ್ಮೀ ದಾಸ್ ಸೇರಿದಂತೆ ಅವರಂತಹ ಇನ್ನೂ ಅನೇಕ ಭಿಕ್ಷುಕರು ಭಿಕ್ಷಾಟನೆ ಮಾಡಿ ಲಕ್ಷಾಂತರ ರೂ.ಗಳಿಸಿದ್ದಾರೆ.