ಹೆಬ್ರಿ : ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ವಿದ್ಯಾರ್ಥಿ ಜೀವನದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಅಗತ್ಯ. ಆರೋಗ್ಯವನ್ನು ಕಾಪಾಡಿಕೊಳ್ಳಲು ಸೂಕ್ತ ಆಹಾರ ಕ್ರಮವನ್ನು, ಜೀವನಶೈಲಿಯನ್ನು ಅನುಸರಿಸುವುದು ಅತೀ ಮುಖ್ಯ. ಹದಿಹರೆಯದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಯೋಗ, ನಿಯಮಿತ ಕ್ರೀಡೆ ಸಹಕಾರಿ ಎಂದು ಉಡುಪಿಯ ಬಿಗ್ ಮೆಡಿಕಲ್ ಸೆಂಟರ್ನ ಸಲಹೆಗಾರರು, ಮಧುಮೇಹ ತಜ್ಞರು ಮತ್ತು ಕುಟುಂಬ ವೈದ್ಯೆ ಡಾ.ಶ್ರುತಿ ಬಲ್ಲಾಳ್ ಹೇಳಿದರು.
ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಲೇಡೀಸ್ ಕ್ಲಬ್ ಉದ್ಘಾಟನೆಯನ್ನು ನೆರವೇರಿಸಿ ಹಾಗೂ ಹದಿಹರೆಯದ ಸಮಸ್ಯೆ ಮತ್ತು ನಿರ್ವಹಣೆಯ ಕುರಿತು ವಿದ್ಯಾರ್ಥಿನಿಯರಿಗೆ ಮಾಹಿತಿಯನ್ನು ನೀಡಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಪ್ನಾ ಶೆಟ್ಟಿ ಮಾತನಾಡಿ, ಖಾದ್ಯ ಪದಾರ್ಥಗಳನ್ನು ಅತಿಯಾಗಿ ಸೇವಿಸುವುದರ ಬದಲು ತರಕಾರಿ, ಹಣ್ಣು ಹಂಪಲು, ಮುಂತಾದ ಆರೋಗ್ಯಕರವಾದ ಆಹಾರವನ್ನು ಸೇವಿಸಿ ಆರೋಗ್ಯವನ್ನು ಕಾಪಾಡುವಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಎಸ್. ಆರ್ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲೆ ಭಗವತಿ ಉಪಸ್ಥಿತರಿದ್ದರು.
ಉಪನ್ಯಾಸಕಿ ವನಿತಾ ತೋಳಾರ್ ಸ್ವಾಗತಿಸಿ, ಶುಭಲಕ್ಷ್ಮೀ ನಿರೂಪಿಸಿ, ವಂದಿಸಿದರು.