ಬೆಳಗಾವಿ: ಲೋಕೋಪಯೋಗಿ ಇಲಾಖೆಯ ವಿವಿಧ ಯೋಜನೆಗಳ ಅಡಿಯಲ್ಲಿ ಖಾನಾಪುರ-ಬೀಡಿ, ಪಾರಿಶ್ವಾಡ-ಅವರೊಳ್ಳಿ ಸೇರಿದಂತೆ ಖಾನಾಪುರ ತಾಲೂಕಿನ ವಿವಿಧ ರಸ್ತೆಗಳ ಅಭಿವೃದ್ಧಿಗೆ ಒಟ್ಟು ₹24.15 ಕೋಟಿ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲೇ ಈ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಆರಂಭವಾಗಲಿದೆ ಎಂದು ಶಾಸಕ ವಿಠ್ಠಲ ಹಲಗೇಕರ ಮಾಹಿತಿ ನೀಡಿದರು.
ಖಾನಾಪುರ ಪಟ್ಟಣದ ಶಿವಸ್ಮಾರಕ ವೃತ್ತದಲ್ಲಿ ಶಿವಸ್ಮಾರಕ ವೃತ್ತದಿಂದ ರೈಲ್ವೆ ಸ್ಟೇಷನ್ ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಖಾನಾಪುರ ತಾಲೂಕಿನ 6 ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಮೊದಲ ಹಂತದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅನುದಾನ ಮಂಜೂರಾಗಿದ್ದು, ಈ ಅನುದಾನದ ಪೈಕಿ ಪಟ್ಟಣದಲ್ಲಿ 70 ಲಕ್ಷದಲ್ಲಿ ಸ್ಟೇಶನ್ ರಸ್ತೆ ಅಭಿವೃದ್ಧಿಗೆ ಪೂಜೆ ಸಲ್ಲಿಸಲಾಗಿದೆ. ಸಿಂಧನೂರು-ಹೆಮ್ಮಡಗಾ ರಾಜ್ಯ ಹೆದ್ದಾರಿಯ ಆಯ್ದ ಭಾಗಗಳಲ್ಲಿ ₹1.36 ಕೋಟಿ ಅನುದಾನದಲ್ಲಿ ರಸ್ತೆ ಸುಧಾರಣೆಯಾಗಲಿದೆ ಎಂದರು.
ಬೆಳಗಾವಿ-ತಾಳಗುಪ್ಪ ರಾಜ್ಯ ಹೆದ್ದಾರಿಯ ಖಾನಾಪುರ ತಾಲೂಕು ಕರಂಬಳದಿಂದ ಬೀಡಿ ಗ್ರಾಮದವರೆಗೆ ಆಯ್ದ ಭಾಗಗಳಲ್ಲಿ 10 ಕೋಟಿ ಅನುದಾನದಲ್ಲಿ ರಸ್ತೆ ಸುಧಾರಣೆ, ₹1.85 ಕೋಟಿ ಅನುದಾನದಡಿ ಚಾಪಗಾಂವ-ಹಡಲಗಾ ರಸ್ತೆಯ ಅಭಿವೃದ್ಧಿ, ₹10 ಕೋಟಿ ಅನುದಾನದಲ್ಲಿ ಪಾರಿಶ್ವಾಡದಿಂದ ಚಿಕ್ಕದಿನಕೊಪ್ಪ ಕ್ರಾಸ್ ವರೆಗೆ ರಸ್ತೆ ಸುಧಾರಣೆ ಮತ್ತು ಕೊಡಚವಾಡ ಗ್ರಾಮದ ಪರಿಶಿಷ್ಟ ಜಾತಿ ಕಾಲನಿಯಲ್ಲಿ ಸಿ.ಸಿ ರಸ್ತೆ ನಿರ್ಮಾಣಕ್ಕೆ ₹24 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದರು.
ಲೈಲಾ ಶುಗರ್ಸ್ ಎಂ.ಡಿ. ಸದಾನಂದ ಪಾಟೀಲ, ಪಟ್ಟಣ ಪಂಚಾಯಿತಿ ಸದಸ್ಯ ಅಪ್ಪಯ್ಯ ಕೊಡೋಳಿ, ಬಿಜೆಪಿ ಮುಖಂಡರಾದ ಬಸವರಾಜ ಸಾಣಿಕೊಪ್ಪ, ಮಲ್ಲಪ್ಪ ಮಾರಿಹಾಳ, ಗುಂಡು ತೋಪಿನಕಟ್ಟಿ, ಪ್ರಮೋದ ಕೊಚ್ಚೇರಿ, ರವಿ ಪಾಟೀಲ ಉಪಸ್ಥಿತರಿದ್ದರು.