ಪುರಿ: ಇಲ್ಲಿನ ಜಗನ್ನಾಥ ದೇವಾಲಯದ ‘ರತ್ನ ಭಂಡಾರ’ದ ಎರಡನೇ ಸುತ್ತಿನ ತಾಂತ್ರಿಕ ಸಮೀಕ್ಷೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್ಐ) ಶನಿವಾರ ಮಧ್ಯಾಹ್ನ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಮೀಕ್ಷೆ ಕಾರ್ಯ ಮೂರು ದಿನ ನಡೆಯಲಿದೆ ಎಂದು ಶ್ರೀ ಜಗನ್ನಾಥ ದೇವಸ್ಥಾನ ಆಡಳಿತ (ಎಸ್ಜೆಟಿಎ) ಹೇಳಿದೆ.
‘ಸಮೀಕ್ಷೆಯ ಕಾರಣ ಶನಿವಾರ ಮಧ್ಯಾಹ್ನ 1ರಿಂದ ಸಂಜೆ 6ರ ವರೆಗೆ ಭಕ್ತರಿಗೆ ‘ದರ್ಶನ’ಕ್ಕೆ ಅವಕಾಶ ನೀಡಲಾಗಿಲ್ಲ. ಈ ನಿರ್ಬಂಧ ಸೆ.22 ಮತ್ತು 23ರಂದೂ ಮುಂದುವರಿಯಲಿದೆ. ದೇವಾಲಯದ ಮುಖ್ಯ ದ್ವಾರದ ಮೂಲಕ ಭಕ್ತರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ’ ಎಂದು ಎಸ್ಜೆಟಿಐ ಮುಖ್ಯ ಆಡಳಿತಾಧಿಕಾರಿ ಅರವಿಂದ್ ಪಾಢಿ ತಿಳಿಸಿದ್ದಾರೆ.
‘ರತ್ನ ಭಂಡಾರದ ಒಳಗೆ ಸುರಂಗ ಇದೆಯೇ ಎಂಬುದನ್ನು ಪತ್ತೆಹಚ್ಚಲು ಸಮೀಕ್ಷೆ ಕೈಗೆತ್ತಿಕೊಳ್ಳಲಾಗಿದೆ. ಅದಕ್ಕಾಗಿ ಅತ್ಯಾಧುನಿಕ ರೆಡಾರ್ ಬಳಸಲಾಗಿದೆ’ ಎಂದು ‘ರತ್ನ ಭಂಡಾರ’ದ ಮೇಲುಸ್ತುವಾರಿ ಸಮಿತಿ ಮುಖ್ಯಸ್ಥ ಬಿಸ್ವನಾಥ್ ರಥ್ ಹೇಳಿದ್ದಾರೆ.