ರಾಯಣ್ಣ, ಚನ್ನಮ್ಮ ಬ್ರಿಗೇಡ್(RCB)ಅಸ್ತಿತ್ವಕ್ಕೆ ತರುವುದಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ಇಂದು ವಿಜಯಪುರದಲ್ಲಿ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಹಿಂದುಳಿದವರಿಗೆ, ದಲಿತರಿಗೆ, ಬ್ರಾಹ್ಮಣರಿಗೆ ಮತ್ತು ಲಿಂಗಾಯತರಿಗೆ ಅನ್ಯಾಯವಾಗುವುದನ್ನು ತಡೆಯುವ ದಿಸೆಯಲ್ಲಿ ಶೀಘ್ರವೇ ರಾಯಣ್ಣ, ಚನ್ನಮ್ಮ ಬ್ರಿಗೇಡ್ ಅಸ್ತಿತ್ವಕ್ಕೆ ಬರಲಿದೆ ಎಂದು ಘೋಷಣೆ ಮಾಡಿದ್ದಾರೆ. ಹಿಂದುಳಿದವರಿಗೆ ಅನ್ಯಾಯ ತಡೆಯಲು ಬ್ರಿಗೇಡ್ ಬೇಕು ಎಂದು ಹಲವರು ಅಪೇಕ್ಷಿಸಿದ್ದಾರೆ. ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಈಶ್ವರಪ್ಪ ಹಾಗೂ ಬಸನಗೌಡ ಪಾಟೀಲ ಯತ್ನಾಳ ಸೇರಿ ಆರ್ಸಿಬಿ ಸ್ಥಾಪಿಸುವಂತೆ ಸಲಹೆ ನೀಡಿದ್ದಾರೆ. ಈ ಕುರಿತು ಚರ್ಚಿಸಿ ತೀರ್ಮಾನಿಸಲಾಗುವುದು. ಈ ಹಿಂದೆ ರಾಯಣ್ಣ ಬ್ರಿಗೇಡ್ ಚಟುವಟಿಕೆ ನಿಲ್ಲಿಸುವಂತೆ ಯಡಿಯೂರಪ್ಪ ದೂರಿನಂತೆ ಅಮಿತ್ ಶಾ ನನಗೆ ಸೂಚಿಸಿದ್ದರಿಂದ ಅದನ್ನು ಕೈ ಬಿಟ್ಟಿದ್ದೆ. ಅಂದು ರಾಯಣ್ಣ ಬ್ರಿಗೇಡ್ ಕೈಬಿಟ್ಟು ತಪ್ಪು ಮಾಡಿದೆ ಅನಿಸುತ್ತದೆ ಎಂದು ಹೇಳಿದರು.
ಬಿಜೆಪಿ ನನ್ನ ಪಾಲಿನ ತಾಯಿ ಇದ್ದಂತೆ. ಆ ಪಕ್ಷ ಬಿಟ್ಟು ಬೇರೆ ಯಾವ ಪಕ್ಷಕ್ಕೂ ಈ ಜೀವನದಲ್ಲಿ ಹೋಗುವುದಿಲ್ಲ. ಆದರೆ ಭ್ರಷ್ಟಾಚಾರಿಗಳು ಅಪ್ಪ-ಮಕ್ಕಳ ಕಪಿಮುಷ್ಟಿಯಿಂದ ಶುದ್ಧೀಕರಣವಾಗದ ವಿನಾ ಬಿಜೆಪಿಗೆ ಸದ್ಯಕ್ಕೆ ಹೋಗಲ್ಲ. ಬಿಜೆಪಿ ತಾಯಿಯಂತಿದ್ದು ಆ ತಾಯಿಯ ಮೇಲೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಧ್ವನಿ ಎತ್ತಿ ಹೊರಬಂದಿರುವೆ. ಶುದ್ಧೀಕರಣಕ್ಕೆ ಪಕ್ಷದ ಹಿರಿಯರು ಗಮನಹರಿಸುತ್ತಾರೆ ಎಂಬ ನಂಬಿಕೆ ಇದೆ. ತಿರುಪತಿ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಬೆರೆಸುವ ಮೂಲಕ ಹಿಂದುಗಳಿಗೆ ಭಾವನೆಗೆ ಧಕ್ಕೆ ತರಲಾಗಿದೆ. ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.