ಬೆಳಗಾವಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಗರದಲ್ಲಿ ರವಿವಾರ ನಡೆದ ರಾಜ್ಯಮಟ್ಟದ ವಕೀಲರ ಪರಿಷತ್ ಮುಖ್ಯಮಂತ್ರಿ ಅವರಿಗೆ ತಲುಪಿದ್ದು ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ಟೋಬರ್ 15ರಂದು ಚರ್ಚೆಗೆ ಅಹ್ವಾನ ನೀಡಿದ್ದಾರೆ.

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ರವಿವಾರ ನಡೆದ ಲಿಂಗಾಯತ ಪಂಚಮಸಾಲಿ ವಕೀಲರ ಸಮಾವೇಶದಲ್ಲಿ ಸ್ವತಃ ಮುಖ್ಯಮಂತ್ರಿ, ಸ್ವಾಮೀಜಿ ಜೊತೆ ಮೊಬೈಲ್ ಕರೆ ಮೂಲಕ ಸ್ಪಂದನೆ ನೀಡಿದ್ದಾರೆ.

ಮುಖ್ಯಮಂತ್ರಿಗಳು ನಮ್ಮ ಬೇಡಿಕೆ ಕುರಿತು ವಾರದಲ್ಲಿ ನಮ್ಮ ಭೇಟಿಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಹೋರಾಟಕ್ಕೆ ಚಾಲನೆ ನೀಡಲಾಗುವುದು ಎಂದು ವಕೀಲರು ಬೇಡಿಕೆ ಮಂಡಿಸಿದರು. ಆಗ ಸಮಾವೇಶದ ಬಳಿ ಬಂದ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್, ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ವಿಷಯವಾಗಿ ಚರ್ಚಿಸಲು ಮುಖ್ಯಮಂತ್ರಿಗಳು ಅಕ್ಟೋಬರ್ 15 ರಂದು ಸಮಯ ನೀಡಿದ್ದಾರೆ ಎಂದು ವಿವರಿಸಿದರು. ಆದರೆ, ಇದಕ್ಕೆ ವಕೀಲರು ಸ್ಪಂದನೆ ನೀಡಲಿಲ್ಲ. ಸಿದ್ದರಾಮಯ್ಯ, ಸ್ವಾಮೀಜಿ ಅವರಿಗೆ ಫೋನ್ ಮಾಡಿ ತಿಳಿಸಲೇಬೇಕು ಎಂದು ಹಠ ಹಿಡಿದರು. ಆಗ ಶಾಸಕ ವಿನಯ ಕುಲಕರ್ಣಿ ಅವರು ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಸ್ವಾಮೀಜಿ ಜೊತೆ ಮಾತುಕತೆಗೆ ಅವಕಾಶ ಕಲ್ಪಿಸಿದರು. ಆಗ ಸಿದ್ದರಾಮಯ್ಯ ದಸರಾ ಹಬ್ಬವಿದ್ದು ಹಬ್ಬದ ನಂತರ ಎಲ್ಲರೂ ಸೇರಿ ಮಾತನಾಡೋಣ. ಯಾವ ಕಾರಣಕ್ಕೂ ಹೋರಾಟ ಮುಂದುವರಿಸಬೇಡಿ ಎಂದು ಮನವಿ ಮಾಡಿದರು. ಆಗ ವಕೀಲರು ಈ ಭರವಸೆಗೆ ಸ್ಪಂದನೆ ನೀಡಲಿಲ್ಲ. ಪರ ಹಾಗೂ ವಿರೋಧ ಚರ್ಚೆಯಿಂದ ಸಭೆ ಕೆಲ ಹೊತ್ತು ಗೊಂದಲಮಯವಾಯಿತು.

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವ ಕುರಿತು ಬೆಳಗಾವಿಯಲ್ಲಿ ರವಿವಾರ ನಡೆದ ರಾಜ್ಯಮಟ್ಟದ ವಕೀಲರ ಸಮಾವೇಶದಲ್ಲಿ ಮೂರು ನಿರ್ಣಯ ಅಂಗೀಕರಿಸಲಾಗಿದೆ. ಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳು ನಿರ್ಣಯ ಮಂಡಿಸಿದರು. ಅತಿ ಹಿಂದುಳಿದ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಅನುಕೂಲವಾಗಲು ಹಿಂದುಳಿದ ವರ್ಗಗಳ ಆಯೋಗದಿಂದ ಪೂರ್ಣ ಪ್ರಮಾಣದ ವರದಿ ಪಡೆದು 2A ಮೀಸಲಾತಿ ನೀಡಬೇಕು. ಲಿಂಗಾಯತ ಒಳಪಂಗಡಗಳಿಗೆ ಕೇಂದ್ರ ಸರಕಾರದಿಂದ ದೊರೆಯುವ ಒಬಿಸಿ ಮೀಸಲಾತಿ ಸೌಲಭ್ಯ ನೀಡುವಂತೆ ರಾಜ್ಯ ಸರಕಾರ ಈ ಕೂಡಲೇ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಬೇಕು. ಅಕ್ಟೋಬರ್ 15 ರಂದು ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿಗಳು 2A ಮೀಸಲಾತಿ ನಿರ್ಣಯ ಕೈಗೊಳ್ಳಬೇಕು ಎಂಬ ನಿರ್ಣಯವನ್ನು ಅಂಗೀಕರಿಸಲಾಗಿದೆ. ಒಂದು ವೇಳೆ ಮುಖ್ಯಮಂತ್ರಿಗಳು ನಮ್ಮ ಬೇಡಿಕೆ ಈಡೇರಿಸದೆ ಇದ್ದರೆ ಡಿಸೆಂಬರ್ 15 ರಂದು ಹದಿನೈದು ಹತ್ತು ಸಾವಿರ ವಕೀಲರು ಮತ್ತು 5,000 ರೈತರ ಟ್ರ್ಯಾಕ್ಟರ್ ಮೂಲಕ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಸ್ವಾಮೀಜಿಗಳು ನುಡಿದರು.