ಕಿತ್ತೂರು : ಚನ್ನಮ್ಮನ ವಿಜಯೋತ್ಸವರ 200 ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಚನ್ನಮ್ಮನ ಕಿತ್ತೂರು ಉತ್ಸವವನ್ನು ವಿಶ್ವ ಮಟ್ಟದ ಕಾರ್ಯಕ್ರಮವನ್ನಾಗಿ ಅದ್ದೂರಿಯಾಗಿ ಆಚರಿಸಲಾಗುವುದು. ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಹೇಳಿದರು.

ಕಿತ್ತೂರಿನ‌ ಶೆಟ್ಟರ ಕಲ್ಯಾಣ‌‌ ಮಂಟಪದಲ್ಲಿ ಮಂಗಳವಾರ (ಸೆ.24 ) ಜರುಗಿದ ಚನ್ನಮ್ಮನ ಕಿತ್ತೂರು ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ‌ ವಹಿಸಿ ಅವರು ಮಾತನಾಡಿದರು.

ಈ ಬಾರಿಯ 200ನೇ‌ ವರ್ಷದ ವಿಜಯೊತ್ಸವದ ಪ್ರಯುಕ್ತ‌ ದೇಶದ‌ ವಿವಿಧ ರಾಜ್ಯಗಳ‌ ಆಹಾರ ಪದ್ಧತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಅನ್ನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.

ಈ ಬಾರಿಯ ಉತ್ಸವದ ನೆನಪಿಗಾಗಿ ರಾಣಿ ಚನ್ನಮ್ಮನ ಭಾವಚಿತ್ರವಿರುವ ಅಂಚೆ ಚೀಟಿ ಬಿಡುಗಡೆಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ವಾಯುವ್ಯ ಕರ್ನಾಟಕ ಸಾರಿಗೆ ಹೆಸರನ್ನು “ಕಿತ್ತೂರು ಕರ್ನಾಟಕ ಸಾರಿಗೆ ಸಂಸ್ಥೆ” ಎಂದು ನಾಮಕರಣಕ್ಕೆ ಹಾಗೂ ರಾಣಿ‌ಚನ್ನಮ್ಮ ವಿಶ್ವವಿದ್ಯಾಲಯದ ಬದಲಾಗಿ “ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ’ ಎಂದು‌ ಮರು‌ನಾಮಕರಣಕ್ಕಾಗಿ ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದರು.

ಈ ಬಾರಿ‌ ಕಿತ್ತೂರು ಉತ್ಸವದ ಮೆರವಣಿಗೆಯಲ್ಲಿ ಕೇವಲ ನಂದಿ ಧ್ವಜಕ್ಕೆ ಅನುಮತಿಸಲಾಗುವುದು. ಅಕ್ಟೋಬರ್ 23 ರಿಂದ ಮೂರು ದಿನಗಳ‌ ಕಾಲ‌ ಜರುಗಲಿರುವ ಉತ್ಸವದಲ್ಲಿ ರಾಷ್ಟ್ರಮಟ್ಟದ ಕಲಾವಿದರ ಜತೆಗೆ ಸ್ಥಳೀಯ ಕಲಾವಿದರುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವದು ಎಂದರು.

ಏರ್ ಷೋ ಆಯೋಜನೆಗೆ ಕ್ರಮ:

ಈ ಬಾರಿಯ ಕಿತ್ತೂರು‌ ಉತ್ಸವದ ಅಂಗವಾಗಿ ಏರ್ ಶೋ ಆಯೋಜನೆಗಾಗಿ ಕೇಂದ್ರ‌ ರಕ್ಷಣಾ ಸಚಿವಾಲಯವನ್ನು ಸಂಪರ್ಕಿಸಲಾಗಿದೆ. ಏರ್ ಷೋ ನಡೆಯುವ ವಿಶ್ಚಾಸವಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.

ಉತ್ಸವದ ಅಂಗವಾಗಿ ಪಾರಂಪರಿಕ ಕ್ರೀಡೆಗಳ ಆಯೋಜನೆಗೆ ಪಟ್ಟಿ ತಯಾತಿಸಲಾಗುತ್ತಿದ್ದು, ಅಂತರಾಷ್ಟ್ರೀಯ ಮಟ್ಟದ ಕುಸ್ತಿ ಆಯೋಜನೆಗೆ ಚಿಂತಿಸಲಾಗುವದು.

ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ‌ ಅವರು‌ ಮಾತನಾಡಿ, ಈ ಬಾರಿಯ ಕಿತ್ತೂರು ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಎಲ್ಲ‌ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದರ.. ಈ ಬಾರಿಯ ಯುವ‌ ಅಧಿಕಾರಿಗಳ ನೇತೃತ್ವದಲ್ಲಿ ಅತ್ಯಂತ ಹುಮಸ್ಸಿನಿಂದ ಈ ಬಾರಿಯ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಈ ಬಾರಿಯ ಉತ್ಸವದಲ್ಲಿ ಯಾವುದೇ ಲೋಪಗಳಿಗೆ ಆಸ್ಪದ ನೀಡದಂತೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ‌ ಕಿತ್ತೂರು ಉತ್ಸವದ ಯಶಸ್ವಿಗೆ ಸಾರ್ವಜನಿಕರ‌ ಪಾಲ್ಗೊಳುವಿಕೆ ಹಾಗೂ ಜವಾಬ್ದಾರಿ ಕೂಡ ಅಷ್ಟೃ ಮಹತ್ವದ್ದಾಗಿದೆ. ಉತ್ಸವದ ಯಶಸ್ಸಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಮನವಿ ಮಾಡಿಕೊಂಡರು.

ಸಾನಿಧ್ಯ‌ ವಹಿಸಿ ಮಾತನಾಡಿದ ಕಲ್ಮಠದ ರಾಜಗುರು ಸಂಸ್ಥಾನ ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮಿಜಿಗಳು, ಈ ಬಾರಿಗೆ ವಿಜಯೋತ್ಸವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುವುದು ಸರಕಾರದ ಜೊತೆಗೆ ಸಾರ್ವಜನಿಕರ ಜವಾಬ್ದಾರಿಯು ಆಗಿದೆ. ಈ ಬಾರಿಯ ಉತ್ಸವ ಸ್ಮರಣೀಯ ಉತ್ಸವವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾರ್ವಜನಿಕರ ಸಲಹೆ-ಸೂಚನೆಗಳು:

ಕಿತ್ತೂರು ಉತ್ಸವದಲ್ಲಿ ಕವಿಗೋಷ್ಠಿ ಆಯೋಜನೆ ಜೊತೆಗೆ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಗೋಷ್ಠಿ ಆಯೋಜನೆ, 200ನೇ ವರ್ಷದ ವಿಜಯೋತ್ಸವದ ಪ್ರಯುಕ್ತ 200 ಜನ ಸಾಧಕರನ್ನು ಗುರುತಿಸಿ ಸನ್ಮಾನ; ಮಲ್ಲಸರ್ಜ ಪುತ್ಥಳಿ ನಿರ್ಮಾಣ; ಕಿತ್ತೂರು ಆಳ್ವಿಕೆಗೆ ಸಂಬಂಧಿಸಿದ ಸ್ಮಾರಕಗಳ‌ ಸಂರಕ್ಷಣೆ; ಉತ್ಸವದ ಮೆರವಣಿಗೆಯಲ್ಲಿ ಪೋಲಿಸ್ ಬ್ಯಾಂಡ ಹಾಗೂ ಮರಾಠಾ ಲೈಟ್ ಇನಫೆಂಟ್ರಿ ಬ್ಯಾಂಡ್ ಕರೆತರುವುದರ ಮೂಲಕ ಅದ್ಧೂರಿ‌ ಕಿತ್ತೂರು ಉತ್ಸವ ಆಚರಣೆಗಾಗಿ ಸಾರ್ವಜನಿಕರು ಅನೇಕ ಸಲಹೆಗಳನ್ನು ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ ಸಿ.ಇ.ಓ ರಾಹುಲ್ ಶಿಂಧೆ, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಪ್ರಶಿಕ್ಷಣಾರ್ಥಿ ಆಯ್.ಎ.ಎಸ್. ಅಧಿಕಾರಿ ದಿನೇಶಕುಮಾರ ಮೀನಾ, ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ‌ ಫಕೀರಪೂರ, ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸಂಪಗಾವಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.