ಐಗಳಿ: ಅಥಣಿ ತಾಲೂಕಿನ ಐಗಳಿ ಗ್ರಾಮಕ್ಕೆ ಸಾರಿಗೆ ಬಸ್ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಅಥಣಿ ತಾಲೂಕಿನ ಪೂರ್ವ ಭಾಗದಲ್ಲಿ 10 ಸಾವಿರಕ್ಕಿಂತ ಅಧಿಕ ಜನಸಂಖ್ಯೆ ಹೊಂದಿರುವ ಐಗಳಿ ಗ್ರಾಮಕ್ಕೆ ಬಸ್ ಸಂಚಾರ ವ್ಯವಸ್ಥೆ ಇಲ್ಲದಿರುವುದು ಅತ್ಯಂತ್ಯ ನೋವಿನ ಸಂಗತಿಯಾಗಿದೆ. ಐಗಳಿಯಿಂದ ದಿನ ನಿತ್ಯ ನೂರಾರು ಶಾಲಾ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಅಥಣಿ ಪಟ್ಟಣಕ್ಕೆ ಸಂಚಾರ ಮಾಡುತ್ತಾರೆ. ಆದರೆ ಐಗಳಿ ಗ್ರಾಮಕ್ಕೆಕಳೆದ 30 ವರ್ಷಗಳಿಂದ ಒಂದೇ ಒಂದು ಬಸ್ ದಿನದಲ್ಲಿ ಎರಡು ಬಾರಿ ಮಾತ್ರ ಸಂಚಾರ ಮಾಡುತ್ತದೆ. ಐಗಳಿ ಗ್ರಾಮದಲ್ಲಿ ಸಾರ್ವಜನಿಕ ಪ್ರಾಥಮಿಕ ಆರೋಗ್ಯ ಕೇಂದ್ರ, ಪೋಲಿಸ್ ಠಾಣೆ, ಡಿ ಸಿ ಸಿ ಬ್ಯಾಂಕ್, ನಾಡ ಕಚೇರಿ, ಪೋಸ್ಟ್ ಆಫೀಸ್, ಎರಡು ಪ್ರೌಢ ಶಾಲೆಗಳು, ಪ್ರಾಥಮಿಕ ಶಾಲೆಗಳು, ಕೆನರಾ ಬ್ಯಾಂಕ್, ಗ್ರಾಮ ಪಂಚಾಯತಿ, ವಿವಿಧ ಸರ್ಕಾರಿ ಕಚೇರಿಗಳು ಇದ್ದು ದಿನ ನಿತ್ಯ ನೂರಾರು ಸಿಬ್ಬಂದಿ ಗ್ರಾಮಕ್ಕೆ ಆಗಮಿಸುತ್ತಾರೆ.

ಇವರಿಗೆ ಸಾರಿಗೆ ವ್ಯವಸ್ಥೆ ಇಲ್ಲದೇ ಇರುವುದರಿಂದ ಸಾರ್ವಜನಿಕರ ಕೆಲಸಗಳ ಮೇಲೆ ಪರಿಣಾಮ ಬೀರುತ್ತಿದೆ.‌ ಸಾರಿಗೆ ಬಸ್ ಸರಿಯಾದ ಸಮಯಕ್ಕೆ ಇಲ್ಲದಿರುವುದರಿಂದ ಇಲ್ಲಿನ ವಿದ್ಯಾರ್ಥಿಗಳ ಶಿಕ್ಷಣದ ಮೇಲೆಯೂ ಪರಿಣಾಮ ಬೀರುತ್ತಿದೆ. ಗ್ರಾಮಕ್ಕೆ ಬರುವ ಪೋಸ್ಟ್ ಆಫೀಸ್ ಪತ್ರಗಳು ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ. ಮೂಲಭೂತ ಸೌಕರ್ಯಗಳು ಇದ್ದರೂ ಸಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಅಧಿಕಾರಿಗಳು ಹಾಗೂ ಗ್ರಾಮದ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ. ಅದರಂತೆ ಈ ಹಿಂದೆ ಜಮಖಂಡಿಯಿಂದ ಐಗಳಿಗೆ ಗ್ರಾಮಕ್ಕೆ ವಸತಿ ಬಸ್ ಸಂಚಾರ ಇತ್ತು. ಅದು ಕಳೆದ ಎರಡು ವರ್ಷಗಳಿಂದ ಕರೋನಾ ಸಂದರ್ಭದಲ್ಲಿ ಬಂದ್ ಆಗಿದೆ. ಈ ಕುರಿತು ಹಲವಾರು ಬಾರಿ ಜಮಖಂಡಿ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನಯಾಗಿಲ್ಲ.

ಪ್ರತಿ ನಿತ್ಯ ಗ್ರಾಮಕ್ಕೆ ಆಗಮಿಸುವ ಅಧಿಕಾರಿಗಳು, ಸಿಬ್ಬಂದಿಗಳು, ಶಾಲಾ ವಿದ್ಯಾರ್ಥಿಗಳು, ಪಿಂಚಣಿ ಪಡೆಯುತ್ತಿರುವ ವಯಸ್ಕರು ಐಗಳಿ ಕ್ರಾಸ್ ದಿಂದ ಐಗಳಿ ಗ್ರಾಮದವರಿಗೆ ಮೂರು ಕಿ.ಮೀ. ಕಾಲ್ನಡಿಗೆ ಮೂಲಕ ಆಗಮಿಸುತ್ತಾರೆ. ಈ ಕುರಿತು ಹಲವಾರು ಸಲ ಸಾರಿಗೆ ಇಲಾಖೆ ಅಧಿಕಾರಿಗಳಿಗೆ , ಗ್ರಾಮ ಪಂಚಾಯಿತಿ ಹಾಗೂ ಸಾರ್ವಜನಿಕರು ಮನವಿ ಸಲ್ಲಿಸಿದರೂ ಪ್ರಯೋಜನಯಾಗಿಲ್ಲ. ಇದೆ ಪರಿಸ್ಥಿತಿ ಮುಂದುವರಿದರೆ ಸಾರಿಗೆ ಅಧಿಕಾರಿಗಳ ವಿರುದ್ದ ಹೋರಾಟ ಪ್ರಾರಂಭ ಮಾಡುವುದಾಗಿ ಸಾರ್ವಜನಿಕರು ತಿಳಿಸಿದ್ದಾರೆ. ಈ ಕುರಿತು ಅಥಣಿ ಶಾಸಕರು ಗಮನಹರಿಸಿ ಐಗಳಿ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಬೇಡಿಕೆ ಇಟ್ಟಿದ್ದಾರೆ.