ಬೆಳಗಾವಿ: ಗೃಹಲಕ್ಷ್ಮಿ ಯೋಜನೆಯ ಜುಲೈ ಕಂತಿನ ಹಣ ಬಿಡುಗಡೆಯ ಪ್ರಕ್ರಿಯೆ ನಡೆಯುತ್ತಿದ್ದು, ಇದಾದ ಕೆಲ ದಿನಗಳಲ್ಲೇ ಆಗಸ್ಟ್ ತಿಂಗಳ ಹಣವೂ ಬಿಡುಗಡೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಇದು ನಿರಂತರ ಪ್ರಕ್ರಿಯೆ ಸರ್ಕಾರ ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಮಾತೇ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಪಂಚಮಸಾಲಿ ಸಮುದಾಯಕ್ಕೆ ನಿರಾಣಿ ಕೊಡುಗೆ ಏನು?
ಪಂಚಮಸಾಲಿ ಸಮುದಾಯಕ್ಕೆ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಕೊಡುಗೆ ಏನು ಎಂದು ಸಚಿವರು ಪ್ರಶ್ನಿಸಿದರು. ನಾನು ಎಂದಿಗೂ ಪಂಚಮಸಾಲಿ ಮೀಸಲಾತಿ ಪರ, 2A ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಸದಾ ನನ್ನ ಬೆಂಬಲ ಇರುತ್ತದೆ ಎಂದರು.

ಮುರುಗೇಶ್ ನಿರಾಣಿ ಅವರು ಅಧಿಕಾರದಲ್ಲಿದ್ದಾಗ ಸಮುದಾಯದ ಬಗ್ಗೆ ಯೋಚಿಸಲಿಲ್ಲ. ಈಗ ಸುಖಾಸುಮ್ಮನೆ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಬೇರೆ ಸಮಾಜಕ್ಕೆ ಯಾವುದೇ ತೊಂದರೆಯಾಗದಂತೆ ಮೀಸಲಾತಿ ನೀಡಲಿ ಎಂಬುದೇ ನಮ್ಮ ಆಗ್ರಹವಾಗಿದೆ ಎಂದು ತಿಳಿಸಿದರು.

ಬೆಳಗಾವಿ ಜಿಲ್ಲಾ ವಿಭಜನೆಯಾದರೆ ಬೆಂಬಲ:
ಬೆಳಗಾವಿ ಜಿಲ್ಲೆಯನ್ನು ಮೂರು ವಿಭಾಗಗಳನ್ನಾಗಿ ಮಾಡಬಹುದು. ಜಿಲ್ಲೆ ವಿಭಜನೆಗೊಂಡರೆ ಅಭಿವೃದ್ಧಿಗೆ ಮತ್ತಷ್ಟು ಒತ್ತು ನೀಡಬಹುದು. ದಸರಾ ಹಬ್ಬ ಮುಕ್ತಾಯಗೊಂಡ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು ಎಂದರು.