ಸೆ.30 ರಂದು ಜತ್ತ ಶ್ರೀ ದಾನಮ್ಮ ದೇವಿ ಸುಕ್ಷೇತ್ರದಲ್ಲಿ ಗಡಿನಾಡ ಚೇತನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುತ್ತಿದೆ. ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಗಡಿಭಾಗದಲ್ಲಿ ಕನ್ನಡ ಉಳಿಸಿ ಬೆಳೆಸಲು ಸಾಹಿತಿಕವಾಗಿ, ಸಾಂಸ್ಕೃತಿಕವಾಗಿ, ಪ್ರತ್ಯಕ್ಷ ಹೋರಾಟಗಳಲ್ಲಿ ಭಾಗವಹಿಸಿದ್ದನ್ನು ಗುರುತಿಸಿ ಗಡಿನಾಡ ಚೇತನ ಪ್ರಶಸ್ತಿ ನೀಡಲು ಪ್ರಾರಂಭಿಸಿರುವುದನ್ನು ಸ್ವಾಗತಿಸುತ್ತೇನೆ. ನನ್ನ 50 ವರ್ಷಗಳ ಸಾಹಿತ್ಯ ಸೇವೆ, ನಾಡು-ನುಡಿಗಳ ಸಂವರ್ಧನೆಗಾಗಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿರುವುದು ಅಭಿನಂದನೀಯ. ನನ್ನ ಅರಿವಿಗೆ ಬಾರದಂತೆ ನನಗೆ ಪ್ರಶಸ್ತಿ ನೀಡಲು ಕಾರಣರಾದ ಹಿರಿಯ ಸಾಹಿತಿಗಳಾದ ಡಾ. ಬರಗೂರು ರಾಮಚಂದ್ರಪ್ಪ, ಡಾ.ಸರಜೂ ಕಾಟ್ಕರ್ ಮತ್ತು ಅಶೋಕ ಚಂದರಗಿ ಅವರ ಸದ್ಬಾವನೆಗಳಿಗೆ ಋಣಿಯಾಗಿರುತ್ತೇನೆ.
ಈ ಪ್ರಶಸ್ತಿಯನ್ನು ಬೆಳಗಾವಿ ಜಿಲ್ಲೆಯ ಸಮಸ್ತ ಲೇಖಕರಿಗೆ,ಕವಿ ಕಲಾವಿದರಿಗೆ,ಹೋರಾಟಗಾರ ಸಂಘಟನೆಗಳಿಗೆ ಅರ್ಪಿಸುತ್ತೇನೆ.
ಜೊತೆಗೆ ಪ್ರಾಧಿಕಾರದ ಹಿಂದಿನ ಅಧ್ಯಕ್ಷ ಡಾ. ಸಿ. ಸೋಮಶೇಖರ ಮತ್ತು ಈಗಿನ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರನ್ನು ಅಭಿನಂದಿಸುವುದಾಗಿ ಈ ಬಾರಿಯ ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಬಿ.ಎಸ್. ಗವಿಮಠ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
*******
ತೀರ ಇತ್ತೀಚೆಗೆ ನನಗೆ ಕರ್ನಾಟಕ ಸರಕಾರ, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರವು “ಗಡಿಚೇತನ” ಪ್ರಶಸ್ತಿ ನೀಡುತ್ತಿರುವ ಬಗ್ಗೆ ಪ್ರಕಟಣೆ ಹೊರಡಿಸಿದೆ. ಮತ್ತು ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾದ ಡಾ. ಸರಜೂ ಕಾಟಕರ ನನಗೆ ದೂರವಾಣಿ ಮೂಲಕ ಈ ಸಂದೇಶ ತಿಳಿಸಿದರು. ಅವರ ಜತೆಗೆ ಅಶೋಕ ಚಂದರಗಿ, ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಹಿಂದಿನ ಅಧ್ಯಕ್ಷ ಡಾ. ಸಿ. ಸೋಮಶೇಖರ ಅವರು ಕರೆ ಮಾಡಿ ಸಂತೋಷ ಹಂಚಿಕೊಂಡರು. ಪ್ರಕಟಣೆ ನೋಡಿದ ನನ್ನ ಆಪ್ತಗೆಳೆಯರು, ನೂರಾರು ಶಿಷ್ಯ ಬಳಗದವರು, ಬಂಧು ಬಳಗದವರು, ಹಿತಚಿಂತಕರು ಸಂದೇಶ ಕಳುಹಿಸಿ ಸಂತೋಷ ಪಟ್ಟರೆ, ಕೆಲವರು ಖುದ್ದಾಗಿ ಮಾತನಾಡಿ ಸಂತೋಷ ಪಟ್ಟರು.ಈ ‘ಗಡಿನಾಡ ಚೇತನ’ ಪ್ರಶಸ್ತಿಯನ್ನು ನಾನು ನಿರೀಕ್ಷಿಸಿರಲಿಲ್ಲ. ಈ ಪ್ರಶಸ್ತಿಗಾಗಿ ಕನಿಷ್ಠ 15 ಶಿಫಾರಸು ಪತ್ರಗಳು ಗಣ್ಯಮಾನ್ಯರಿಂದ, ಶಾಸಕರಿಂದ, ಸಂಸದರಿಂದ ಬಂದಿದ್ದವಂತೆ ಆದರೆ ಆಯ್ಕೆ ಸಮಿತಿಯ ಡಾ. ಬರಗೂರು ರಾಮಚಂದ್ರಪ್ಪ ಮತ್ತು ಸದಸ್ಯರು ಶಿಫಾರಸು ಪತ್ರಗಳನ್ನು ಪರಿಗಣಿಸದೆ, ಗಡಿಭಾಗದಲ್ಲಿ ಕನ್ನಡಕ್ಕಾಗಿ ಅಂತಃಕರಣಪೂರ್ವಕ ಬದುಕು ಸವೆಸಿದ ಕನ್ನಡ ಚಿಂತಕರನ್ನು ಪರಿಗಣಿಸಿದ್ದು ಒಂದು ಇತಿಹಾಸ. ಈ ಪರಂಪರೆ ಮುಂದುವರೆಯಲಿ. ನನ್ನ ಕನ್ನಡ ಸೇವೆಯ 55 ವರ್ಷಗಳ ಸೇವೆಯ ನೆನಪಿನ ಸುರುಳಿ ಬಿಚ್ಚಿಕೊಳ್ಳತೊಡಗಿದೆ.
ನನ್ನ ಭಾವಕೋಶದ ಪುಣ್ಯಕ್ಷೇತ್ರ- ಕೆ.ಎಲ್.ಇ. ಸಂಸ್ಥೆ 1968-69ರಲ್ಲಿ ಆ ಸಂಸ್ಥೆಯಲ್ಲಿ ಶಿಕ್ಷಕನಾಗಿ ನೇಮಕಗೊಂಡಾಗ ನನಗೆ ಕೇವಲ 22ರ ಹರೆಯ. ಪ್ರಿ. ಬಿ. ರುದ್ರಪ್ಪ, ಪ್ರಿ. ಎಸ್. ಡಿ. ಇಂಚಲ, ಡಾ. ಡಿ. ಎಸ್. ಕರ್ಕಿಯವರ ಕಾವ್ಯ ಮತ್ತು ಭಾಷಣಗಳಿಂದ ಪ್ರಭಾವಿತನಾಗಿದ್ದೆ. 1940 ರ ಕಾಲಘಟ್ಟದಲ್ಲಿ ಮರಾಠಿಗರ ಮಧ್ಯೆ ನೆಲೆನಿಂತು “ಹಚ್ಚೇವು ಕನ್ನಡದ ದೀಪ” ಎಂಬ ಕವನ ಬರೆದ ಡಾ. ಕರ್ಕಿ ನನಗೆ ಮೊದಲ ಸ್ಫೂರ್ತಿಯಾದರು. ನಾನೂ ಕನ್ನಡದ ದೀಪ ಬೆಳಗಲು ನಿರ್ಧರಿಸಿದೆ.
1976ರಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾವ್ಯದರ್ಶಿಯಾದೆ. ಅದೇ ವರ್ಷ ಕವಿ ಎಸ್. ಡಿ. ಇಂಚಲರ ನೆನಪಿಗಾಗಿ- ಸ್ಮಾರಕ ಸಮಿತಿ ಸ್ಥಾಪಿಸಲು ಯತ್ನಿಸಿ- ಇಂದಿನವರೆಗೂ ಮುನ್ನಡೆಸುವಲ್ಲಿ ಮಿತ್ರರ ಜತೆ ಸಫಲನಾಗಿದ್ದೇನೆ. 1984ರ ಸುಮಾರಿಗೆ ಪ್ರತಿಭಾ ಹವ್ಯಾಸ ಕಲಾವಿದರ ತಂಡ ಕಟ್ಟಿ ಹತ್ತಾರು ನಾಟಕಗಳನ್ನು ಜಿಲ್ಲೆಯ ತುಂಬ ಪ್ರದರ್ಶಿಸಲು ಶ್ರಮಿಸಿದ್ದೇವೆ. 1985ರಲ್ಲಿ ಕೇಂದ್ರ ನಾಟಕ ಮತ್ತು ಸಂಗೀತ ಅಕಾಡಮಿ ಏಣಗಿ ಬಾಳಪ್ಪನವರಿಗೆ ಪುರಸ್ಕಾರ ನೀಡಿದಾಗ ಜಿಲ್ಲಾಮಟ್ಟದಲ್ಲಿ ಅವರನ್ನು ಗೌರವಿಸಿ- ಸ್ಮರಣ ಸಂಚಿಕೆ ಪ್ರಕಟಿಸುವ ಕೆಲಸ ಮಾಡಿದ್ದೇನೆ. 1995-98ರ ಅವಧಿಯಲ್ಲಿ ಕರ್ನಾಟಕ ನಾಟಕ ಅಕೆಡಮಿ ಸದಸ್ಯನಾಗಿ
ಜಿಲ್ಲಾದ್ಯಂತ ನಾಟಕ ತರಬೇತಿ ಶಿಬಿರಗಳು, ನಾಟಕೋತ್ಸವಗಳನ್ನು ಆಯೋಜಿಸುತ್ತ ವೃತ್ತಿ ಕಲಾವಿದರಿಗೆ ಮಾಸಾಶನ ದೊರಕಿಸಿ ಕೊಟ್ಟಿದ್ದೇನೆ. ಗ್ರಾಮಾಂತರ ಪ್ರದೇಶಗಳಲ್ಲಿ ಬಯಲು ರಂಗಮಂದಿರಗಳ ಸ್ಥಾಪನೆಗೆ ನೆರವಾಗಿದ್ದೇನೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪರವಾಗಿ ಅಧಿಕಾರಿಗಳಿಗೆ “ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕಾಗಿ” ಶಿಬಿರಗಳನ್ನು ಸಂಘಟಿಸಿದ್ದೇನೆ. 1995ರಲ್ಲಿ ರಂಗಭೀಷ್ಮ ಏಣಗಿ ಬಾಳಪ್ಪನವರ ಜೀವನ ಚರಿತ್ರೆ ಬರೆದು “ಕಲಾವೈಭವ” ಹೆಸರಿನಲ್ಲಿ ಪ್ರಕಟಿಸಿದ್ದೇನೆ. 1996ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ “ಕರ್ನಾಟಕ ರಂಗಭೂಮಿ ಸಹಕಾರಿ ಸಂಘ” ಸ್ಥಾಪಿಸಲು ನೆರವಾಗಿದ್ದೇನೆ. 20 ವರ್ಷಗಳ ಕಾಲ ಈ ಸಂಘ ವೃತ್ತಿರಂಗಭೂಮಿಯ ಅಭಿವೃದ್ಧಿಗೆ ಶ್ರಮಿಸಿದ್ದು ಇತಿಹಾಸ. ಡಾ. ಎಂ. ಎಂ. ಕಲಬುರ್ಗಿ ಅವರ ನೇತೃತ್ವದಲ್ಲಿ “ನಾಟ್ಯಭೂಷಣ” ಎಂಬ ಅಭಿನಂದನಗ್ರಂಥ ಸಮರ್ಪಿಸಿದ್ದು ಸಾರ್ಥಕವೆನಿಸಿದೆ. ಜಿಲ್ಲೆಯ ತುಂಬ ನಾಟಕೋತ್ಸವಗಳನ್ನು ಆಯೋಜಿಸಿ ಬೆಳಗಾವಿಯಲ್ಲಿ ಕನ್ನಡದ ಸೊಲ್ಲು ಸದಾಕಾಲ ಕೇಳುವಂತೆ ಮಾಡಿದ್ದು ಕನ್ನಡದ ಸೇವೆ ಅಲ್ಲವೇ? ರಂಗಗೀತೆಗಳನ್ನು ಉಳಿಸಲು, ಬೆಳೆಸಲು ಗಾಯಕರಿಗೆ ತರಬೇತಿ ನೀಡಿ, ಕ್ಯಾಸೆಟ್-ಸಿಡಿಗಳ ನಿರಾಣ, ಪುಸ್ತಕ ಪ್ರಕಟಣೆಗಳಂತಹ ದಾಖಲಿಸುವ ಕಾರಮಾಡಿದ್ದೇವೆ. ಜಿಲ್ಲಾ ಜಾನಪದ ಸಾಹಿತ್ಯ ಸಮ್ಮೇಳನಗಳು, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳು, ಜಿಲ್ಲಾಮಟ್ಟದ / ರಾಜ್ಯಮಟ್ಟದ ಕವಿ ಸಮ್ಮೇಳನಗಳನ್ನು ಸಂಘಟಿಸಲು ನನ್ನ ಸೇವೆ ಸಂದಿದೆ. ಅಖಿಲ ಭಾರತ 52ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾವ್ಯದರ್ಶಿಯಾಗಿ, ಅಖಿಲ ಭಾರತ 70ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕರ್ತನಾಗಿ, ಸ್ಮರಣ ಸಂಪುಟಗಳ ಲೇಖಕನಾಗಿ- ಕನ್ನಡಕ್ಕೆ ಬಲ ತುಂಬಿದ್ದೇನೆ. ಒಂದೇ ಎರಡೇ ನಿತ್ಯ ನಿರಂತರ ಕನ್ನಡಕ್ಕಾಗಿ ನನ್ನ ಬದುಕು ಮೀಸಲಾಗಿದೆ. ಸ್ವಾರ್ಥದ ಲವಲೇಶವಿಲ್ಲದೆ ನಾನು ಶ್ರಮಸಿದ್ದನ್ನು ನನ್ನ ಸಮಕಾಲೀನ ಗೆಳೆಯರು ಕಂಡಿದ್ದಾರೆ. ಅವರ ಪ್ರೀತಿ ವಿಶ್ವಾಸಗಳೇ ಇದು ನನಗೆ ಪ್ರಶಸ್ತಿ ಕೊಡಿಸಿವೆ ಎಂದು ಅಭಿಮಾನದಿಂದ ಹೇಳುವೆ.ಕೆ.ಎಲ್.ಇ. ಸಂಸ್ಥೆಯಲ್ಲಿ ಶಿಕ್ಷಕ ಸ್ಥಾನದಿಂದ ಪ್ರಿನ್ಸಿಪಾಲನೂ ಆದೆ. ಅಡಳಿತ ಮಂಡಳಿಯ ಭಾಗವೆನಿಸಿರುವ ಆಜೀವ ಸದಸ್ಯರ ಮಂಡಳಿಯ ಸದಸ್ಯನೂ ಆದೆ. ಪ್ರಸಾರಾಂಗದ ಮೊದಲ ನಿರ್ದೇಶಕನೂ ಆದೆ. ಕೆ.ಎಲ್.ಇ. ವಾರ್ತಾಪತ್ರಿಕೆಯ ಪ್ರಥಮ ಸಂಪಾದಕನಾಗಿ ಕಾರನಿರ್ವಹಿಸಿದೆ. ನೂರುವರ್ಷಗಳ ಕೆ.ಎಲ್.ಇ. ಚರಿತ್ರೆ ಬರೆದ ಮೊದಲ ಇತಿಹಾಸಕಾರನಾಗಿ ಗುರುತಿಸಿಕೊಂಡೆ ಸ್ವತಂತ್ರವಾಗಿ ಹಾಗೂ ಸಂಪಾದಕನಾಗಿ ಈವರೆಗೆ 50 ಕ್ಕೂ ಅಧಿಕ ಕೃತಿಗಳನ್ನು ಬೆಳಕಿಗೆ ತಂದಿದ್ದೇನೆ. ಎರಡು ಕವನ ಸಂಕಲನಗಳು ಬಂದಿವೆ. ಒಂದು ಕೃತಿ ಮರಾಠಿಯಿಂದ ಕನ್ನಡಕ್ಕೆ ಅನುವಾದವಾಗಿದೆ. ಎರಡು ಕೃತಿಗಳು 1. ಬೆಳಗಾವಿ ಕನ್ನಡ ಕನ್ನಡಿಗ 2. ಎಸ್. ಡಿ. ಇಂಚಲ- ಸಮಗ್ರಕಾವ್ಯ ಕರ್ನಾಟಕ ಸರಕಾರ ಪ್ರಕಟಿಸಿದೆ. ಅನೇಕ ಖಾಸಗಿ ಸಂಘ- ಸಂಸ್ಥೆಗಳು-ಮಠ-ಮಾನ್ಯಗಳು ಹಲವು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿವೆ. ನಾಗನೂರು ಶ್ರೀಮಠದ ಸಮಾಜಸೇವಾರತ್ನ, ನಾಡೋಜ ಪ್ರತಿಷ್ಠಾನ ಮತ್ತು ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿಗಳು ಬಂದಿವೆ. ಬೆಂಗಳೂರಿನ ಕುವೆಂಪು ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಪ್ರಶಸ್ತಿಗಳು ಬಂದಿವೆ. ಬೆಂಗಳೂರಿನ ಕುವೆಂಪು ಪ್ರತಿಷ್ಠಾನ, ಬೆಳಗಾವಿಯ ಡಾ. ಬಿ. ಎ. ಸನದಿ ಪ್ರತಿಷ್ಠಾನಗಳು ಕೂಡ ನನ್ನನ್ನು ಪುರಸ್ಕರಿಸಿವೆ. ಕರ್ನಾಟಕ ನಾಟಕ ಅಕಾಡಮಿ ನನಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಿದ್ದು ವಿಶೇಷ. ಜತೆಗೆ ಕವಿ ಎಸ್. ಡಿ. ಇಂಚಲ ಸ್ಮಾರಕ ಸಮಿತಿ, ಡಾ. ಡಿ. ಎಸ್. ಕರ್ಕಿ ಪ್ರತಿಷ್ಠಾನದವರೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಕೆ.ಎಲ್.ಇ. ಸಂಸ್ಥೆ ತನ್ನ ಶತಮಾನೋತ್ಸವದಲ್ಲಿ ನನ್ನನ್ನು ಗೌರವಿಸಿ ಸಂಭ್ರಮಿಸಿದೆ. ಆದರೆ ಇದೀಗ ಲಭಿಸಿರುವ ‘ಗಡಿನಾಡ ಚೇತನ’ ಪ್ರಶಸ್ತಿ ನನಗೆ ಗರಿಮೂಡಿಸಿದೆ. ನನ್ನ ಕನ್ನಡ ಸೇವೆಯನ್ನು ಗುರುತಿಸಿ, ಗಡಿಪ್ರದೇಶಗಳಿಗೆ ಈ ಪ್ರಶಸ್ತಿಗಳನ್ನು ನೀಡಿರುವುದು ಬೆಳಗಾವಿ ಜಿಲ್ಲೆಯ ಎಲ್ಲ ಸಾಹಿತ್ಯ-ಬಂಧು-ಭಗಿನಿಯರಿಗೆ, ಹೋರಾಟಗಾರರಿಗೆ ಸಿಕ್ಕ ಪ್ರಶಸ್ತಿಯೆನಿಸಿದೆ.
ನೀಡಿರುವದು ಬೆಳಗಾವಿ ಜಿಲ್ಲೆಯ ಎಲ್ಲ ಸಾಹಿತ್ಯ-ಬಂಧು-ಭಗಿನಿಯರಿಗೆ, ಹೋರಾಟಗಾರರಿಗೆ ಸಿಕ್ಕ ಪ್ರಶಸ್ತಿಯೆನಿಸಿದೆ.ಬೆಳಗಾವಿ ಜಿಲ್ಲೆಯ ನನ್ನ ಅಭಿಮಾನಿ ಮಿತ್ರರು ಸೇರಿ ‘ಸಾಹಿತ್ಯಭೂಷಣ’ ಅಭಿನಂದನಗ್ರಂಥ ಸಮರ್ಪಿಸಿದ್ದು ನಾನು ಹೇಗೆ ಮರೆತೇನು? ಹುಕ್ಕೇರಿ ತಾಲೂಕಿನ ನನ್ನ ಸಾಹಿತ್ಯ ಮಿತ್ರರು- ಹುಕ್ಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದು ಕನ್ನಡದ ಪರಿಚಾರಕ ಮರೆಯಲು ಸಾಧ್ಯವೇ?
ಮನುಷ್ಯ ಸಾಧನೆಗಳಿಲ್ಲದೆ ಸಾಯಬಾರದು. ಭಾವನೆಗಳಿಲ್ಲದೆ ಬದುಕಬಾರದು. ಪ್ರಶಸ್ತಿ ಪಡೆಯುವುದೇ ?
ಸಾಧನೆ ಅಲ್ಲ. ಆದರೆ ಪ್ರಶಸ್ತಿಗಳು ಓರ್ವ ವ್ಯಕ್ತಿಯ- ಸಾಧನೆಗಳಿಗೆ ಸಂದ ಪ್ರಮಾಣ ಪತ್ರಗಳು.
ಪ್ರಶಸ್ತಿಯಿಂದಲೇ ಮನುಷ್ಯ ದೊಡ್ಡವನೆನಿಸಿಸಲಾರ. ಆದರೂ ನಕಲಿ ಪಿಎಚ್.ಡಿ.ಗಳಿಗೆ ಏಕೆ- ಮಾರುಕಟ್ಟೆ ಹೆಚ್ಚಿದೆ ಎನ್ನುವದು ಪ್ರಜ್ಞಾವಂತರಿಗೆ ಹೇಳಬೇಕಾಗಿಲ್ಲ.
ನನಗೆ ಪ್ರಶಸ್ತಿ ಬಂದಿರುವದಕ್ಕೆ ಸಂತಸಪಟ್ಟವರೆಲ್ಲರಿಗೂ ನನ್ನ ಅಂತಃಕರಣದ ಅಭಿನಂದನೆಗಳನ್ನು ಸಲ್ಲಿಸುತ್ತ ವಿರಮಿಸುತ್ತೇನೆ.
✒️ಪ್ರಾ.ಬಿ.ಎಸ್.ಗವಿಮಠ