ಕಾರವಾರ : ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ ವಿಜಯ ಕರ್ನಾಟಕ ಹಿರಿಯ ವರದಿಗಾರ ಪ್ರಮೋದ ಹರಿಕಾಂತ ಅವರಿಗೆ ಟ್ಯಾಗೋರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರವಾರದ ಪತ್ರಿಕಾ ಭವನ ನಿರ್ವಹಣಾ ಸಮಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಿಕಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ಇವರ ಜತೆಗೆ ಪಬ್ಲಿಕ್ ಟಿವಿ ವರದಿಗಾರ ನವೀನ ಸಾಗರ, ಸಂಯುಕ್ತ ಕರ್ನಾಟಕ ಜಿಲ್ಲಾ ವರದಿಗಾರ ವಾಸುದೇವ ಗೌಡ, ವಿಸ್ತಾರ ಕ್ಯಾಮೆರಾಮನ್ ಸಾಯಿಕಿರಣ ಬಾಬ್ರೇಕರ್ ಹೀಗೆ ನಾಲ್ವರಿಗೆ ಪ್ರಶಸ್ತಿ ಪ್ರದಾನ ನಡೆಯಿತು. ಎಂಸಿಎ ಅಧ್ಯಕ್ಷ, ಶಾಸಕ ಸತೀಶ ಸೈಲ್, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಪ್ರಶಸ್ತಿ ಪ್ರದಾನ ಮಾಡಿದರು.
ಟ್ಯಾಗೋರ್ ಪ್ರಶಸ್ತಿ ಸ್ವೀಕರಿಸಿದ ಪ್ರಮೋದ ಹರಿಕಾಂತ ಮಾತನಾಡಿ, ಮಾಧ್ಯಮಗಳ ಸ್ವರೂಪ ಬದಲಾದಂತೆ ಸತ್ಯ, ಸುಳ್ಳು ಸುದ್ದಿಗಳ ಸಂಘರ್ಷ ನಡೆಯುತ್ತಿದೆ. ವೃತ್ತಿಗೆ ಪೂರಕವಾಗಿ ಆಡಳಿತ ವ್ಯವಸ್ಥೆ ಮತ್ತು ಪತ್ರಕರ್ತರ ನಡುವೆ ಸಕಾಲಕ್ಕೆ ಮಾಹಿತಿಗಳ ವಿನಿಮಯ ಆಗುವುದರಿಂದ ಸುಳ್ಳು ಸುದ್ದಿಗಳ ಸಂಘರ್ಷ ತಪ್ಪಿಸಬಹುದು. ಪತ್ರಿಕೋದ್ಯಮ ಎಂದಿಗೂ ಸಮಾಜಕ್ಕಾಗಿ ದುಡಿಯುವ ವೃತ್ತಿಯಾಗಿದೆ. ಆಡಳಿತ ವ್ಯವಸ್ಥೆ ಮತ್ತು ಪತ್ರಕರ್ತರ ನಡುವಿನ ಸಂಬಂಧ ಉತ್ತಮವಾಗಿರಬೇಕು ಎಂದರು.
ಪತ್ರಿಕಾ ಭವನ ನಿರ್ವಹಣಾ ಸಮಿತಿ ಉಪಾಧ್ಯಕ್ಷ ನಾಗರಾಜ ಹರಪನಹಳ್ಳಿ, ಜಿಲ್ಲಾ ಕೇಂದ್ರ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ದರ್ಶನ ನಾಯ್ಕ ವೇದಿಕೆಯಲ್ಲಿದ್ದರು. ವಿನುತಾ ಅಂಬೇಕರ್ ಪ್ರಾರ್ಥಿಸಿದರು. ಪತ್ರಿಕಾ ಭವನ ನಿರ್ವಹಣಾ ಸಮಿತಿಯ ಅಧ್ಯಕ್ಷ ಟಿ.ಬಿ.ಹರಿಕಾಂತ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿ ಕಾರ್ಯದರ್ಶಿ ಸುನೀಲ ನಾಯ್ಕ ಹಣಕೋಣ ನಿರೂಪಿಸಿದರು. ಜುಲೈ ನಲ್ಲಿ ನಡೆಯಬೇಕಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವು ಅಂಕೋಲಾ ಶಿರೂರು ದುರಂತ ಹಿನ್ನೆಲೆಯಲ್ಲಿ ತಡವಾಗಿ ನಡೆಸಲಾಯಿತು.ವಿವರ: ಅಂಕೋಲಾ ತಾಲೂಕಿನ ಬಿಳಿಹೊಂಯ್ಲಿ ಗ್ರಾಮದ ರುವು ಹಾಗೂ ಸಾವಿತ್ರಿ ಹರಿಕಂತ್ರ ಎಂಬ ಮೀನುಗಾರರ ಕುಟುಂಬದಲ್ಲಿ ಜನಿಸಿದ ಪ್ರಮೋದ ಕಷ್ಟದಲ್ಲಿ ಬೆಳೆದು. ಪತ್ರಿಕೋದ್ಯಮ ವೃತ್ತಿಗೆ ಕಾಲಿರಿಸಿ, ಧಾರವಾಡ ಮತ್ತು ಮೈಸೂರು ವಿವಿಗಳಿಂದ ಪತ್ರಿಕೋದ್ಯಮ ಪದವಿ ಪಡೆದು 15 ವರ್ಷಗಳು ಕಳೆದಿವೆ. ನಾಡಿನ ಹೆಸರಾಂತ ಪತ್ರಿಕೆಗಳಾದ ಪ್ರಜಾವಾಣಿ, ವಿಜಯ ಕರ್ನಾಟಕದಲ್ಲಿ ಹಾವೇರಿ, ಹುಬ್ಬಳ್ಳಿ, ಬೆಳಗಾವಿ. ಪ್ರಸ್ತುತ ಮೂರು ವರ್ಷಗಳಿಂದ ಕಾರವಾರದಲ್ಲಿ ಪ್ರಧಾನ ವರದಿಗಾರರಾಗಿ ಮಾಡಿದ ಮೌಲ್ಯಯುತ ವರದಿಗಳು ಸರ್ಕಾರದ ಕಣ್ಣು ತೆರೆಸಿವೆ. ಜನರನ್ನು ಜಾಗೃತರಾಗಿಸಿದೆ.
ಅಘನಾಶಿನಿ ನದಿಯಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ವಿರುದ್ಧ ಜೀವ ಬೆದರಿಕೆಯನ್ನೂ ಲೆಕ್ಕಿಸದೆ ರಾಜ್ಯ ಮಟ್ಟದಲ್ಲಿ ‘ಅಘನಾಶಿನಿ ಉಳಿಸಿ’ ಅಭಿಯಾನ ಆರಂಭಿಸಿ ಸರಣಿ ವರದಿ ಪ್ರಕಟಿಸಿದ್ದರು. ಪರಿಣಾಮವಾಗಿ ಅಘನಾಶಿನಿ ನದಿ ಅಳಿವೆಗೆ ರಾಮ್‌ಸಾರ್ ಸೈಟ್ ಅಂತಾರಾಷ್ಟ್ರೀಯ ಮಾನ್ಯತೆ ದೊರೆತಿದೆ. ಪಂಚಾಯತ್ ರಾಜ್ ಇಲಾಖೆಯ ‘ಕಳ್ಳಗಂಟು’ ಹಗರಣ, ಶಾಲೆ ದುರಸ್ಥಿಗೆ ಶಾಸಕರಿಗೆ ಕೊಟ್ಟ ಹಣ ದುರ್ಬಳಕೆ, ಶಿಕ್ಷಕರ ಹೆಸರಿನ ‘ಐಡಿ ಕಾರ್ಡ್’ ಹಗರಣ ಸೇರಿ ಹಲವು ಗಂಭೀರ ವಿಷಯಗಳ ಬಗ್ಗೆ ಮಾಡಿದ ವರದಿಗಳು ರಾಜ್ಯದಲ್ಲಿ ಚರ್ಚೆಗೆ ಒಳಗಾದವು. ಗೂಗಲ್ ಸಂಸ್ಥೆಯ ಗೂಗಲ್ ನ್ಯೂಸ್ ಇನಿಶಿಯೇಟಿವ್ (ಜಿಎನ್‌ಐ) ಫ್ಯಾಕ್ಟ್ ಚೆಕ್ (ಸುಳ್ಳು ಸುದ್ದಿ ಪತ್ತೆ) ತರಬೇತಿ ಪಡೆದ ಕನ್ನಡದ ಕೆಲವೇ ಪತ್ರಕರ್ತರಲ್ಲಿ ಒಬ್ಬರು ಎಂಬುದು ಹೆಮ್ಮೆಯ ಸಂಗತಿ. ಮಾತ್ರವಲ್ಲ ಆಧುನಿಕ ವಿದ್ಯಮಾನಗಳಿಗೆ ಅನುಗುಣವಾಗಿ ಗೂಗಲ್ ನ್ಯೂಸ್ ಇನಿಶಿಯೇಟಿವ್ ಭಾಗವಾಗಿ ಪತ್ರಕರ್ತರಿಗೆ, ಸುದ್ದಿ ಸಂಸ್ಥೆಗಳಿಗೆ ಫ್ಯಾಕ್ಟ್ ಚೆಕ್ ತರಬೇತಿ ನೀಡುವ ಅರ್ಹತಾ ಪ್ರಮಾಣ ಪತ್ರವನ್ನು ಹೊಂದಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಕಾರವಾರದ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಪ್ರತಿಷ್ಠಿತ 2024- 25 ನೇ ಸಾಲಿನ ಟಾಗೋರ್ ಪ್ರಶಸ್ತಿ ನೀಡಿ ಗೌರವಿಸಿದೆ.