ಬೆಳಗಾವಿ : ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್ ಅವರು ವೀರರಾಣಿ ಬೆಳವಡಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನ(ರಿ), ಬೆಳವಡಿ ಇದರ ಕಾರ್ಯದರ್ಶಿ ಹಾಗೂ ಸದಸ್ಯರೊಂದಿಗೆ ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜಿಜು ಅವರನ್ನು ನವದೆಹಲಿಯ ನಿವಾಸದಲ್ಲಿ ಭೇಟಿ ಮಾಡಿ, ನೂತನ ಸಂಸದರ ಭವನ ಆವರಣದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮಳ EQUESTRIAN STATUE (ಕುದುರೆ ಸವಾರಿ ಮೂರ್ತಿ) ಸ್ಥಾಪನೆಗಾಗಿ ಮನವಿ ಸಲ್ಲಿಸಿದರು.

ವೀರ ರಾಣಿ ಬೆಳವಡಿ ಮಲ್ಲಮ್ಮ ಒಬ್ಬ ಧೀರ ಮಹಿಳೆ. 16 ನೇ ಶತಮಾನದಲ್ಲಿ ಸುಮಾರು 2000ಕ್ಕೂ ಹೆಚ್ಚು ಮಹಿಳೆಯರನ್ನು ಹೊಂದಿದ ಸೈನ್ಯವನ್ನು ಅವರು ಸ್ಥಾಪಿಸಿದ್ದರು. ಅವರು ಹೊಂದಿದ ಸಾಮ್ರಾಜ್ಯದ ಕೊಡುಗೆಯನ್ನು ಗೌರವಿಸುವ ನಿಟ್ಟಿನಲ್ಲಿ, ಕರ್ನಾಟಕ ಸರ್ಕಾರ ಪ್ರತಿ ವರ್ಷವೂ ಎರಡು ದಿನಗಳ ಕಾಲ ಬೆಳವಡಿ ಉತ್ಸವವನ್ನು ಆಚರಿಸುತ್ತದೆ ಎಂದು ಸಂಕ್ಷಿಪ್ತವಾಗಿ ಕೇಂದ್ರ ಸಂಸದೀಯ ಸಚಿವರಿಗೆ ಜಗದೀಶ್ ಶೆಟ್ಟರ್ ಅವರು ತಿಳಿಸಿದರು. ಬೆಳವಡಿ ಮಲ್ಲಮ್ಮ ಅವರ ಸಾಧನೆಯ ಇನ್ನೂ ಹೆಚ್ಚಿನ ಮಾಹಿತಿಯನ್ನು ಒಳಗೊಂಡ ಒಂದು ಕಿರು ಪುಸ್ತಕವನ್ನು ಹಾಗೂ 7 ನಿಮಿಷದ ಸಾಕ್ಷ ಚಿತ್ರವನ್ನು ಸಾದರಪಡಿಸಿದರು.

ವೀರರಾಣಿ ಬೆಳವಡಿ ಮಲ್ಲಮ್ಮನ ಕೊಡುಗೆಯನ್ನು ಗಣನೆಗೆ ತೆಗೆದುಕೊಂಡು, ಅವರ ಗೌರವಾರ್ಥ ಮುಂಬರುವ ದಿನಗಳಲ್ಲಿ ನವದೆಹಲಿಯ “ನೂತನ ಸಂಸದರ ಭವನ ಆವರಣದಲ್ಲಿ” ಅವರದ್ದೊಂದು EQUESTRIAN STATUE (ಕುದುರೆ ಸವಾರಿ) ಮೂರ್ತಿ ಸ್ಥಾಪನೆ ಮಾಡುವಂತೆ ಕೋರಿದರು.

ವಿಷಯವನ್ನು ಆಲಿಸಿದ ಕೇಂದ್ರ ಸಚಿವರು ಪ್ರಸ್ತಾಪಿತ ಬೇಡಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ಹೇಳಿದ್ದಾರೆಂದು ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

ಪ್ರಸ್ತಾಪಿತ ವಿಷಯವಾಗಿ ಪ್ರಥಮವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿನಂತಿಸಿ ಪತ್ರ ಬರೆದಿದ್ದು, ಈ ಬೇಡಿಕೆಯನ್ನು ಅವಲೋಕಿಸುವಂತೆ ಕೇಂದ್ರ ಸಂಸದೀಯ ಸಚಿವ ಕಿರಣ್ ರಿಜೀಜು ಇವರಿಗೆ ಪ್ರಧಾನ ಮಂತ್ರಿಗಳು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಇಂದು ಈ ಭೇಟಿಗೆ ಅವಕಾಶವನ್ನು ಕೇಂದ್ರ ಸಚಿವರು ನಿಯೋಗಕ್ಕೆ ನೀಡಿದ್ದು ಇಲ್ಲಿ ಸ್ಮರಣೀಯ.

ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸುಭಾಷ್ ಪಾಟೀಲ ನಿಯೋಗದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನ(ರಿ) ಬೆಳವಡಿ ಕಾರ್ಯದರ್ಶಿ ಸವಿತಾ ಪಾಟೀಲ, ಉಪಾಧ್ಯಕ್ಷೆ ನೀಲವ್ವ ಕರಿಕಟ್ಟಿ, ಸದಸ್ಯೆ ಪಾರ್ವತಿ ಕರಿಕಟ್ಟಿ, ಕಾನೂನು ಸಲಹೆಗಾರ ರವೀಂದ್ರ ತೋಟಿಗೇರ, ಸಲಹೆಗಾರ ಪ್ರಕಾಶ ಐಹೊಳೆಯವರು ಭಾಗವಹಿಸಿದ್ದರು.