ಬೆಳಗಾವಿ: ವಕೀಲರ ಸಂಘದಲ್ಲಿ ಮಹಿಳಾ ನ್ಯಾಯವಾದಿಗಳಿಗೆ 33% ಮೀಸಲಾತಿ ಕಲ್ಪಿಸಲು ಬೆಳಗಾವಿ ವಕೀಲರ ಸಂಘಕ್ಕೆ ಬೆಳಗಾವಿ ಜಿಲ್ಲೆ ನೋಟರಿ ಸಂಘದ ಅಧ್ಯಕ್ಷ ಚನ್ನಬಸಪ್ಪ (ರಾಜು) ಬ. ಬಾಗೇವಾಡಿ ಮನವಿ ಸಲ್ಲಿಸಿದರು.
ಈ ಮನವಿಗೆ ಒಬ್ಬರೇ ಹತ್ತಾರು ದಿನ ಅಲೆದಾಡಿ ಅಂದಾಜು 700 ವಕೀಲರ ಸಹಿ ಸಂಗ್ರಹಿಸಿ, ಅವರೆಲ್ಲರ ಬೆಂಬಲದೊಂದಿಗೆ ಮನವಿ ಸಲ್ಲಿಸಲಾಯಿತು. ವಕೀಲರ ಸಂಘದ ಅಧ್ಯಕ್ಷ ಎಸ್. ಎಸ್. ಕಿವಡಸನ್ನವರ, ಪ್ರಧಾನ ಕಾರ್ಯದರ್ಶಿ ವೈ. ಕೆ. ದಿವಟೆ, ಮಹಿಳಾ ಸದಸ್ಯೆ ಅಶ್ವಿನಿ ಹವಾಲ್ದಾರ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಸುನೀಲ ಸಾಣಿಕೊಪ್ಪ, ಬಸವರಾಜ ಜರಲಿ ಮತ್ತು ಮಹಿಳಾ ನ್ಯಾಯವಾದಿಗಳು ಉಪಸ್ಥಿತರಿದ್ದರು.
ಲೋಕಸಭೆ, ರಾಜ್ಯಸಭೆ, ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರ ವಿರುದ್ಧದ ಎಲ್ಲಾ ರೀತಿಯ ತಾರತಮ್ಯಗಳ ನಿರ್ಮೂಲನೆ ಮಾಡುವ ಉದ್ದೇಶದಿಂದ ಸಂವಿಧಾನ (128 ನೇ ತಿದ್ದುಪಡಿ) ಮಸೂದೆ, 2023, ಸಂವಿಧಾನ (106 ನೇ ತಿದ್ದುಪಡಿ) ಕಾಯಿದೆ, 2023 ಮಾಡಲಾಗಿದೆ. ಮಹಿಳೆಯರಿಗೆ 33% ಮೀಸಲಾತಿ ಕಲ್ಪಿಸಲು ಮಹಿಳಾ ಮೀಸಲಾತಿ ಕಾಯಿದೆ, 2023 ಕಾಯ್ದೆ ಮಾಡಲಾಗಿದೆ.
ಇದೇ ಆಧಾರದಲ್ಲಿ ಇತ್ತೀಚೆಗೆ, ಗೌರವಾನ್ವಿತ ಸುಪ್ರೀಂ ಕೋರ್ಟ್ (1) ಅದಿತಿ ಚೌಧರಿ ವಿರುದ್ಧ ಬಾರ್ ಕೌನ್ಸಿಲ್ ಆಫ್ ದೆಹಲಿ ಮತ್ತು (2) ಶೋಭಾ ಗುಪ್ತಾ ವಿರುದ್ಧ ಬಾರ್ ಕೌನ್ಸಿಲ್ ಆಫ್ ದೆಹಲಿ ಪ್ರಕರಣದಲ್ಲಿ ಮುಂಬರುವ ಎಲ್ಲಾ ವಕೀಲರ ಬಾರ್ ಕೌನ್ಸಿಲ್ ಚುನಾವಣೆಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಬೇಕು ಎಂದು ನಿರ್ದೇಶನಗಳನ್ನು ನೀಡಿದೆ.
ಇದಲ್ಲದೆ, WP-104411/2021 ರಿಟ್ ಅರ್ಜಿಯಲ್ಲಿ, ಕರ್ನಾಟಕದ ಗೌರವಾನ್ವಿತ ಹೈಕೋರ್ಟ್, ಧಾರವಾಡ ಪೀಠವು ದಿನಾಂಕ: 07-12-2023 ರ ಆದೇಶದಲ್ಲಿ ನಮ್ಮ ಬೆಳಗಾವಿಯ ವಕೀಲರ ಸಂಘವು ನಿಯಮಾನುಸಾರವಾಗಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ರೂಪಿಸಿರುವ ಮಾದರಿ ಉಪ-ವಿಧಿಗಳನ್ನು (ಬೈ ಲಾ) ಅಳವಡಿಸಿಕೊಳ್ಳಲು ನಿರ್ದೇಶನ ನೀಡಿದೆ. ಆದರೂ ನಮ್ಮ ಬೆಳಗಾವಿಯ ವಕೀಲರ ಸಂಘ ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಈ ಹೋರಾಟ ಅನಿವಾರ್ಯವಾಗಿದೆ. ನ್ಯಾಯ ಸಿಗುವವರೆಗೆ ಹೋರಾಟ ಮಾಡಲಾಗುವುದು. ಈ ಹೋರಾಟ ಬೆಳಗಾವಿಯಿಂದ ಪ್ರಾರಂಭವಾಗಿ, ಬೆಳಗಾವಿಯಲ್ಲಿಯೇ ಪ್ರಪ್ರಥಮವಾಗಿ ಅನುಷ್ಠಾನಗೊಳ್ಳುವುದರ ಮೂಲಕ ಮಹಿಳೆಯರಿಗೆ ನ್ಯಾಯ ಕೊಡಿಸಲಾಗುವುದು ಎಂದು ಚನಬಸಪ್ಪ [ರಾಜು] ಬಾಗೇವಾಡಿ ತಿಳಿಸಿದರು.