ಬೆಳಗಾವಿ: ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯನ್ನು ವಿಭಜಿಸಿ ಹೊಸ ಜಿಲ್ಲೆ ರಚಿಸುವ ಸಂದರ್ಭದಲ್ಲಿ ನೂತನವಾಗಿ ಗೋಕಾಕ ಜಿಲ್ಲೆ ಮತ್ತು ಕೌಜಲಗಿಯನ್ನು ತಾಲೂಕು ಮಾಡಬೇಕು ಎಂದು ನಿಯೋಜಿತ ಕೌಜಲಗಿ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಎಂ.ಆರ್. ಬೋವಿ ಮತ್ತು ಪ್ರಧಾನ ಕಾರ್ಯದರ್ಶಿ ಡಾ.ರಾಜೇಂದ್ರ ಸಣ್ಣಕ್ಕಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪತ್ರಕರ್ತರ ಜೊತೆ ಮಾತನಾಡಿದ ಅವರು, ಕಳೆದ ಐದು ದಶಕಗಳಿಂದ ಕೌಜಲಗಿಯನ್ನು ತಾಲೂಕು ಮಾಡಬೇಕು ಎಂದು ಒತ್ತಾಯಿಸುತ್ತಾ ಬರಲಾಗಿದೆ. ತಾಲೂಕು ರಚನೆಗಾಗಿ ರಚಿಸಲಾಗಿದ್ದ ಹುಂಡೇಕರ, ಗದ್ದಿಗೌಡರ ಮತ್ತು ವಾಸುದೇವ ರಾವ್ ಸಮಿತಿಗಳು ಕೌಜಲಗಿ ತಾಲೂಕು ರಚಿಸಲು ಶಿಫಾರಸು ಮಾಡಿವೆ. ಅದರಂತೆ ಕೌಜಲಗಿಯನ್ನು ಹೊಸ ತಾಲೂಕು ಮಾಡಬೇಕು. ಸುಮಾರು 61 ಗ್ರಾಮಗಳನ್ನು ಹೊಂದಿರುವ ಕೌಜಲಗಿ ತಾಲೂಕು ರಚನೆಗೆ ಯೋಗ್ಯ ಸ್ಥಳವಾಗಿದೆ ಎಂದು ಹೇಳಿದರು.

ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಇತ್ತೀಚಿಗೆ ಜಿಲ್ಲೆ ರಚನೆಗೆ ಮೊದಲು ತಾಲೂಕನ್ನು ರಚಿಸಬೇಕು ಎಂದು ಹೇಳಿದ್ದರು. ಜೊತೆಗೆ ಕೌಜಲಗಿ ತಾಲೂಕು ರಚನೆಗೆ ಬೆಂಬಲ ವ್ಯಕ್ತಪಡಿಸಿದ್ದರು. ಬಾಲಚಂದ್ರ ಜಾರಕಿಹೊಳಿ ಅವರು ಸಹ ಕೌಜಲಗಿ ತಾಲೂಕು ರಚನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೌಜಲಗಿ ತಾಲೂಕು ರಚನೆ ಕುರಿತು ಮುಖ್ಯಮಂತ್ರಿಗೆ ಇನ್ನೊಮ್ಮೆ ಮನವರಿಕೆ ಮಾಡಲಾಗುವುದು. ಈ ಬಗ್ಗೆ ಬೆಂಗಳೂರಿಗೆ ನಿಯೋಗ ಒಯ್ಯಲಾಗುತ್ತದೆ ಎಂದು ತಿಳಿಸಿದರು.