ಬೆಂಗಳೂರು :ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ಪಕ್ಷದ ಅಧ್ಯಕ್ಷರು. ನಮ್ಮ ನಾಯಕರು ಅವರನ್ನು ಭೇಟಿ ಮಾಡದೇ ಬೇರೆ ಇನ್ಯಾರನ್ನು ಭೇಟಿ ಮಾಡಬೇಕು. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸದಾಶಿವನಗರ ನಿವಾಸ ಹಾಗೂ ವಿ.ಆರ್ ಸುದರ್ಶನ್ ಅವರ ನೇತೃತ್ವದ ಸತ್ಯಶೋಧನಾ ಸಮಿತಿ ವರದಿ ಸ್ವೀಕರಿಸಿದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಶನಿವಾರ ಉತ್ತರಿಸಿದರು.

ಕೆಲ ನಾಯಕರ ದೆಹಲಿ ಭೇಟಿಯಿಂದ ಸಿಎಂ ಬದಲಾವಣೆ ವದಂತಿ ಮೂಡುತ್ತಿರುವ ಬಗ್ಗೆ ಕೇಳಿದಾಗ, “ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಇಲ್ಲ. ನಮ್ಮ ರಾಜ್ಯದವರು ಎಐಸಿಸಿ ಅಧ್ಯಕ್ಷರಾಗಿದ್ದು, ಅವರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ” ಎಂದು ಪುನಃರುಚ್ಚರಿಸಿದರು.

ವೇಣುಗೋಪಾಲ್ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆಯೇ ಎಂದು ಕೇಳಿದಾಗ, “ನನಗೆ ಗೊತ್ತಿಲ್ಲ. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಬಂದಿಲ್ಲ” ಎಂದು ತಿಳಿಸಿದರು.

ನೀವು ದೆಹಲಿಗೆ ಭೇಟಿ ನೀಡುತ್ತೀರಾ ಎಂದು ಕೇಳಿದಾಗ, “ಸಧ್ಯಕ್ಕೆ ನಾನು ದೆಹಲಿಗೆ ಹೋಗುವ ಅವಶ್ಯಕತೆ ಇಲ್ಲ” ಎಂದರು.

ರಾಜ್ಯ ಕಾಂಗ್ರೆಸ್ ನಾಯಕರು ಖರ್ಗೆ ಅವರನ್ನು ಭೇಟಿ ಮಾಡುತ್ತಿರುವ ಹಿನ್ನೆಲೆಯಲ್ಲಿ ವದಂತಿ ಮೂಡುತ್ತಿವೆ ಎಂದು ಕೇಳಿದಾಗ, “ನಮ್ಮ ನಾಯಕರು ನಮ್ಮ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡದೆ ಬೇರೆ ಯಾರನ್ನು ಭೇಟಿ ಮಾಡಬೇಕು? ನಮಗೂ ಮಾಧ್ಯಮದವರಿಗೂ ಸಂಬಂಧ ಇರುವಂತೆ ನಮ್ಮ ನಾಯಕರಿಗೂ ನಮ್ಮ ಅಧ್ಯಕ್ಷರಿಗೂ ಸಂಬಂಧ ಇರುತ್ತದೆ. ನಾನು ದೆಹಲಿಗೆ ಭೇಟಿ ಕೊಟ್ಟಾಗೆಲ್ಲಾ ನಮ್ಮ ಅಧ್ಯಕ್ಷರನ್ನು ಭೇಟಿ ಮಾಡುತ್ತೇನೆ. ನಾನು ದಿನ ನಿತ್ಯ ಅವರ ಸಂಪರ್ಕದಲ್ಲಿ ಇರುತ್ತೇನೆ. ಪಕ್ಷದ ಬೆಳವಣಿಗೆಗಳ ವರದಿ ನೀಡುತ್ತಿರುತ್ತೇವೆ. ಅದಕ್ಕೆ ಪ್ರತ್ಯೇಕ ತಂಡ ರಚಿಸಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಗುಪ್ತ ಸಭೆ ಮಾಡಿ ದೆಹಲಿ ಭೇಟಿ ನೀಡುವುದು ಯಾವ ಸಂದೇಶ ರವಾನಿಸುತ್ತವೆ ಎಂದು ಕೇಳಿದಾಗ, “ಸಚಿವರು, ಶಾಸಕರು, ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವುದು ಸ್ವಾಭಾವಿಕ. ಇದನ್ನು ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ. ನನ್ನನ್ನೂ ನೂರಾರು ಮಂದಿ ಬಂದು ಭೇಟಿ ಮಾಡುತ್ತಾರೆ. ಅದೆಲ್ಲದಕ್ಕೂ ವಿಶೇಷ ಅರ್ಥ ಕಲ್ಪಿಸಲು ಸಾಧ್ಯವೇ? ರಾಜಕೀಯ, ಆಡಳಿತ ಹಾಗೂ ಕೆಲವು ಸನ್ನಿವೇಶಗಳ ಸಮಸ್ಯೆ ಬಗ್ಗೆ ಚರ್ಚೆ ಮಾಡುವುದು ಸಹಜ” ಎಂದು ತಿಳಿಸಿದರು.

*ಒಂದು ವಾರದಲ್ಲಿ ಇತರೆ ಸಮಿತಿಗಳ ವರದಿ ಸಲ್ಲಿಕೆಗೆ ಸೂಚನೆ*

“ಲೋಕಸಭೆ ಚುನಾವಣೆ ಸೋಲು, ಗೆಲುವಿನ ಬಗ್ಗೆ ಪರಾಮರ್ಶೆ ನಡೆಸಲು ಸತ್ಯಶೋಧನಾ ಸಮಿತಿ ರಚಿಸಿದ್ದೆವು. ವಿ.ಆರ್ ಸುದರ್ಶನ್ ಅವರ ನೇತೃತ್ವದ ಸಮಿತಿ ಹಾಸನ, ಮಂಡ್ಯ, ಮೈಸೂರು, ಕೊಡಗು ಜಿಲ್ಲೆಗಳ ಪ್ರವಾಸ ಮಾಡಿ ವರದಿ ಸಲ್ಲಿಸಿದ್ದಾರೆ. ಈ ವರದಿಯನ್ನು ಅಧ್ಯಯನ ಮಾಡಿ ಹಾಗೂ ರಾಜ್ಯದ ಎಲ್ಲಾ ವಲಯಗಳ ವರದಿ ಸೇರಿಸಿ, ನಂತರ ಅದನ್ನು ಚರ್ಚಿಸುತ್ತೇವೆ” ಎಂದು ತಿಳಿಸಿದರು.

ಎಐಸಿಸಿ ಕೂಡ ಇಂತಹ ಸಮಿತಿ ಕಳುಹಿಸಿತ್ತು ಎಂದು ಕೇಳಿದಾಗ, “ಅವರು ರಾಜ್ಯದ ಕೇಂದ್ರ ಕಚೇರಿಗೆ ಬಂದು ಹೋಗಿದ್ದರು. ನಮ್ಮ ಸಮಿತಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಮಾಡಲು ಸೂಚಿಸಿದ್ದೆ. ಬೇರೆ ಭಾಗಗಳ ಸಮಿತಿಗಳು ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ತಿಳಿಸುತ್ತೇನೆ” ಎಂದು ತಿಳಿಸಿದರು.

ವರದಿ ನೋಡಿದ ನಂತರ ಕ್ರಮ ಆಗುತ್ತದೆಯೇ ಎಂದು ಕೇಳಿದಾಗ, “ಯಾಕೆ ಆಗುವುದಿಲ್ಲ? ವರದಿಯಲ್ಲಿ ಕೆಲವು ಸಲಹೆ, ಸೂಚನೆಗಳನ್ನು ನೀಡಿರುತ್ತಾರೆ. ಪಕ್ಷ, ಸರ್ಕಾರ ಯಾವ ರೀತಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಲಾಗುತ್ತದೆ” ಎಂದು ತಿಳಿಸಿದರು.

ನಿಗಮ ಮಂಡಳಿ ನೇಮಕ ವಿಳಂಬದ ಬಗ್ಗೆ ಬೇಸರ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದಾಗ, “ನಾವು ಸಮಿತಿ ರಚಿಸಿದ್ದು, ಶಾಸಕರು ಸೇರಿದಂತೆ ಮುಖಂಡರ ಜತೆ ಚರ್ಚೆ ಮಾಡಲಾಗುವುದು. ಮುಂದಿನ ವಾರ ಇದು ಅಂತಿಮವಾಗಲಿದೆ” ಎಂದು ತಿಳಿಸಿದರು.

*ಪಕ್ಷದ ನೀತಿಯನುಸಾರ ನಡೆಯುತ್ತೇನೆ*

ಮುಂದಿನ ಸಚಿವ ಸಂಪುಟದಲ್ಲಿ ಜಾತಿ ಗಣತಿ ಪ್ರಸ್ತಾಪದ ಬಗ್ಗೆ ಕೇಳಿದಾಗ, “ಈ ವಿಚಾರದಲ್ಲಿ ವೈಯಕ್ತಿಕ ಅಭಿಪ್ರಾಯವೇ ಬೇರೆ, ಪಕ್ಷದ ಅಧ್ಯಕ್ಷನಾಗಿ ಅಭಿಪ್ರಾಯ ಬೇರೆ. ಪಕ್ಷದ ನೀತಿಯಂತೆ ನಾವು ನಡೆಯಬೇಕು. ಪಕ್ಷದ ನೀತಿಯನ್ನು ನಾನೊಬ್ಬನೇ ತೀರ್ಮಾನಿಸಲು ಆಗುವುದಿಲ್ಲ. ಇಡೀ ಪಕ್ಷ ಹಾಗೂ ವರಿಷ್ಠರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ರಾಹುಲ್ ಗಾಂಧಿ ನಮಗೆ ನಿರ್ದಿಷ್ಟ ನಿರ್ದೇಶನ ನೀಡಿದ್ದು, ಪಕ್ಷದ ಪ್ರಣಾಳಿಕೆಯಲ್ಲಿ ಕೆಲವು ವಿಚಾರ ಪ್ರಸ್ತಾಪವಾಗಿವೆ. ಎಲ್ಲವನ್ನು ಗಮನದಲ್ಲಿ ಇಟ್ಟುಕೊಂಡು ತೀರ್ಮಾನ ಮಾಡಲಾಗುವುದು” ಎಂದು ತಿಳಿಸಿದರು.

ಸುರೇಶ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನೀವು ಅವರ ಬಳಿಯೇ ಕೇಳಿ” ಎಂದು ತಿಳಿಸಿದರು.

*ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಲ್ಲ:*

ನನ್ನನ್ನು ಹೆದರಿಸಲು ಎಫ್ ಐ ಆರ್ ದಾಖಲಿಸಲಾಗಿದ್ದು, ನಾನು ಇದಕ್ಕೆಲ್ಲ ಹೆದರುವುದಿಲ್ಲ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರ ವೈಯಕ್ತಿಕ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ನಾನು ಗೃಹ ಸಚಿವನಲ್ಲ, ನನಗೆ ಈ ಬಗ್ಗೆ ಗೊತ್ತಿಲ್ಲ. ನಾನು ದಸರಾ ಕಾರ್ಯಕ್ರಮ ಉದ್ಘಾಟನೆ ಹಾಗೂ ಚನ್ನಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆಯಲ್ಲಿ ನಿರತನಾಗಿದ್ದೆ. ನನ್ನ ಕನಸಿನ ಯೋಜನೆ ಸಿಎಸ್ ಆರ್ ನಿಧಿಯಲ್ಲಿ ನಿರ್ಮಿಸಿರು ಕೆಪಿಎಸ್ ಶಾಲೆ ಉದ್ಘಾಟನೆ ಮಾಡಲಾಗಿದೆ. ಕಣ್ವ ನದಿಗೆ ಕಟ್ಟಲಾಗುತ್ತಿರುವ 9 ಸೇತುವೆಗಳ ಪೈಕಿ ಆರು ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿದೆ” ಎಂದು ತಿಳಿಸಿದರು.