ಬೆಳಗಾವಿ: ನಮ್ಮ ಸಂಸ್ಕೃತಿಯನ್ನು ಮುನ್ನೆಲೆಗೆ ತಂದವರು, ಇಡೀ ವಿಶ್ವಕ್ಕೆ ಪರಿಚಯಿಸಿದರು ಮಹಿಳೆಯರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬೆಳಗಾವಿಯ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಭುವನೇಶ್ವರಿ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಭಾರತ ಐದು ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ನಮ್ಮ ಕನ್ನಡಕ್ಕೂ ಕೂಡ ಅಷ್ಟೇ ದೊಡ್ಡ ಇತಿಹಾಸ ಇದೆ ಎಂದರು.
ಬಸವಣ್ಣನವರನ್ನು ನಮ್ಮ ಸರ್ಕಾರ ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ. ಆದರೆ, ಪ್ರತಿ ಮನೆಯ ಸಾಂಸ್ಕೃತಿಕ ನಾಯಕಿ ಮಹಿಳೆ ಎಂದು ಹೆಮ್ಮೆಯಿಂದ ಹೇಳುತ್ತೇನೆ. ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳಸುತ್ತಿರುವವರು ಮಹಿಳೆಯರು, ಮನೆ ಮುಂದೆ ರಂಗೋಲಿ ಹಾಕಿ, ಹಬ್ಬಗಳನ್ನು ಆಚರಿಸುವುದರಿಂದ ಹಿಡಿದು, ಮಕ್ಕಳಲ್ಲಿ ಸಂಸ್ಕೃತಿಯನ್ನು ಕಲಿಸಿ, ಮಕ್ಕಳನ್ನು ಬೆಳಸುವವರೆಗೆ ನಮ್ಮ ಮಹಿಳೆಯರದ್ದೆ ಪ್ರಮುಖ ಪಾತ್ರ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ನಾನು ಮಹಿಳೆಯರಿಗಾಗಿ ಗೃಹಲಕ್ಷ್ಮಿ ಯೋಜನೆಯನ್ನು ಪಟ್ಟುಹಿಡಿದು ಜಾರಿಗೊಳಿಸುವಂತೆ ಮಾಡಿದ್ದೇನೆ. ಅದನ್ನು ಜಾರಿಗೊಳಿಸುವ ಜವಾಬ್ದಾರಿ ನನಗೇ ಬಂದಿದ್ದು ನನ್ನ ಯೋಗಾಯೋಗಾ. ಮಹಿಳಾ ಸಬಲೀಕರಣಕ್ಕೆ ಇದು ದೊಡ್ಡ ಕೊಡುಗೆಯಾಗಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ಹೇಳಿದರು.
ಮಹಿಳೆಯರು ಪ್ರತಿ ಹಂತದಲ್ಲೂ ನಾವು ಮನೆಯವರಿಂದ ಹೀಗಿರಬೇಕು, ಹಾಗಿರಬೇಕು, ಇದನ್ನು ಮಾಡಬೇಕು, ಮಾಡಬಾರದು ಎಂದು ಕೇಳಿ ಕೇಳಿ ಬೆಳೆದಿದ್ದೇವೆ. ಆದರೆ, ಮಹಿಳೆಯರು ಮೂಲತಃ ಬಹಳ ಧೈರ್ಯವಂತರು ಎಂದರು.
ಭುವನೇಶ್ವರಿ ಉತ್ಸವವನ್ನು ಕಳೆದ 43 ವರ್ಷಗಳಿಂದ ಈ ಗಡಿ ಭಾಗದಲ್ಲಿ ಆಚರಿಸಿಕೊಂಡು ಬರುತ್ತಿದ್ದೀರಿ, ಯಾವುದೇ ಕಾರ್ಯಕ್ರಮವನ್ನು ಒಂದೆರಡು ವರ್ಷ ನಡೆಸುವುದೇ ಕಷ್ಟ. ಅಂತಹದರಲ್ಲಿ ನಿಮ್ಮದೇ ಮನೆಯ ಕಾರ್ಯಕ್ರಮದಂತೆ ಮಾಡುತ್ತಿರುವುದನ್ನು ನೋಡಿ ಖುಷಿ ಆಗಿದೆ ಎಂದು ಸಚಿವರು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜು ಆಸಿಫ್ ಸೇಠ್ ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ್ ಅವರು ಬಹಳ ಪರಿಶ್ರಮಿ, ಇಲಾಖೆಯನ್ನು ಅತ್ಯುತ್ತಮವಾಗಿ ನಡೆಸಿಕೊಂಡು ಬರುತ್ತಿದ್ದಾರೆ, ಅವರು ನಮ್ಮೆಲ್ಲರಿಗೂ ಸ್ಫೂರ್ತಿ ಎಂದರು.
ಕಾರ್ಯಕ್ರಮದಲ್ಲಿ ಉತ್ಸವ ಸಮಿತಿ ಅಧ್ಯಕ್ಷೆ ಜ್ಯೋತಿ ಭಾವಿಕಟ್ಟಿ, ಶಾಂತಾ ಹೆಗಡೆ, ಲೀಲಾ ಚೌಗುಲೆ, ರಾಘವೇಂದ್ರ ಆಚಾರ್ಯ, ಮಧು ಮುತಾಲಿಕ್ ಮುಂತಾದವರು ಉಪಸ್ಥಿತರಿದ್ದರು.