ಬೆಳಗಾವಿ: ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಸಹಕೈದಿಯೊಬ್ಬನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಈ ಪ್ರಕರಣದಲ್ಲಿ ಬಂಧಿಯಾಗಿದ್ದ ಆರೋಪಿ ಮೇಲೆ ಜೈಲಿನಲ್ಲಿ ಹಲ್ಲೆ ಮಾಡಲಾಗಿದೆ. ಬಿಹಾರದ ಮೂಲದ ಸದ್ಯ ಬೆಳಗಾವಿ ರಾಮತೀರ್ಥನಗರ ನಿವಾಸಿ ಹಿತೇಶಕುಮಾರ ಚವಾಣ ಹಲ್ಲೆಗೆ ಗುರಿಯಾದವ. ಇನ್ನೊಂದು ಪ್ರಕರಣದಲ್ಲಿ ಜೈಲಿನಲ್ಲಿರುವ ವಿಚಾರಣಾಧೀನ ಕೈದಿ ಬಸವರಾಜ ಹೊಳೆಪ್ಪ ದಡ್ಡಿ, ಬಸವಣ್ಣಿ ಸಿದ್ದಪ್ಪ ನಾಯಿಕ, ಸವಿನಾ ಸಿದ್ದಪ್ಪ ದಡ್ಡಿ ಮತ್ತು ಪ್ರಧಾನಿ ಶೇಖರ ವಾಗ್ಮೊಡೆ ಹಲ್ಲೆ ಮಾಡಿದವರು. ಸೆಪ್ಟೆಂಬರ್ 30ರಂದು ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊನಗಾ ಕೈಗಾರಿಕಾ ಪ್ರದೇಶದ ವಿನಾಯಕ ಸ್ಟೀಲ್ ಅಂಡ್ ರೋಲಿಂಗ್ ಫ್ಯಾಕ್ಟರಿ ವ್ಯವಸ್ಥಾಪಕ ಹಿತೇಶ್ ಕುಮಾರ್ ಚವಾಣ ಮತ್ತು ಆಯುಬ್ ಖಾನ್ ಪಠಾಣ ನಡುವೆ ಹಣಕಾಸು ವಿಷಯವಾಗಿ ವಾಗ್ವಾದ ನಡೆದಿತ್ತು. ಮುತ್ಯಾನಟ್ಟಿಯ ಲಕ್ಷ್ಮಣ ದಡ್ಡಿ ಮಧ್ಯಸ್ಥಿಕೆ ವಹಿಸಲು ಹೋಗಿದ್ದ. ಆಗ ಹಿತೇಶ ಕುಮಾರ ಮತ್ತು ಲಕ್ಷ್ಮಣ ದಡ್ಡಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಲಕ್ಷ್ಮಣ ಮತ್ತು ಅವನ ಜೊತೆಗೆ ಬಂದಿದ್ದ ದಿಲೀಪ ಕಮಜಗಿ ಎಂಬವನ ಮೇಲೆ ಹಲ್ಲೆ ನಡೆಸಿದ್ದರಿಂದ ಇಬ್ಬರು ಗಾಯಗೊಂಡಿದ್ದರು. ಪೊಲೀಸರು ಹಿತೇಶ್ ಕುಮಾರ್ ನನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು.
ಆದರೆ, ಮತ್ತೊಂದು ಪ್ರಕರಣದಲ್ಲಿ ಬಂಧಿಯಾಗಿ ಜೈಲಿನಲ್ಲಿದ್ದ ಲಕ್ಷ್ಮಣ ದಡ್ಡಿ ಸಂಬಂಧಿಕರಿಗೆ ಹಲ್ಲೆ ವಿಷಯ ಗೊತ್ತಾಗಿ ಹಿತೇಶ್ ಕುಮಾರನನ್ನು ಅಕ್ಟೋಬರ್ 3 ರಂದು ಥಳಿಸಲಾಗಿದೆ. ಹಿತೇಶ್ ಕುಮಾರ್ ನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.