ಬೆಳಗಾವಿ : ಮಾಜಿ ಮುಖ್ಯಮಂತ್ರಿ ಮತ್ತು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಮಂಗಳವಾರ ನಗರದ ವಿವಿಧ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕುರಿತು ಅಧಿಕಾರಿಗಳ ಜೊತೆಗೆ ಮಹತ್ವದ ಚರ್ಚೆ ನಡೆಸಿದರು. ರೇಲ್ವೆ ಇಲಾಖೆಯ ಎಲ್ ಸಿ ನಂ: 381(ಟಿಳಕವಾಡಿ ಗೇಟ್ ನಂ:3) ಹತ್ತಿರ ನಿರ್ಮಾಣ ಹಂತದಲ್ಲಿರುವ ರಸ್ತೆ ಮೇಲು ಸೇತುವೆ ಎರಡನೇ ಲೇನ್ ಕಾಮಗಾರಿ ಹಾಲಿ ಸ್ಥಗಿತಗೊಂಡಿರುವ ಬಗ್ಗೆ ವಿಷಯ ತಿಳಿಯಲು ಸ್ಥಳಕ್ಕೆ ಭೇಟಿ ನೀಡಿ ರೇಲ್ವೆ ಇಲಾಖೆ ಅಭಿಯಂತರರೊಡನೆ ಹಾಗೂ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರೊಡನೆ ಚರ್ಚಿಸಿದರು. ಸದ್ಯ ಇರುವ ಲೋಪದೋಷಗಳನ್ನು ಸರಿಪಡಿಸಿ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಸುಗಮ ವಾಹನ ಸಂಚಾರಕ್ಕೆ ಅನುಕೂಲವಾಗಲು ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸುವಂತೆ ಸಂಸದರು ಸೂಚಿಸಿದರು.

ಅದರಂತೆ ಒಂದನೇ ಲೇನ್ ರಸ್ತೆಯಲ್ಲಿ ಈಗಾಗಲೇ ಕಾಣಿಸಿಕೋಂಡಿರುವ ಗುಂಡಿಗಳನ್ನು ದುರಸ್ತಿ ಮಾಡುವಂತೆ ಸೂಚಿಸಿದರು.

ರೇಲ್ವೆ ಇಲಾಖೆಯ ಎಲ್ ಸಿ ನಂ: 382 (ಟಿಳಕವಾಡಿ ಗೇಟ್ ನಂ:2) ಮತ್ತು 383 ( ಟಿಳಕವಾಡಿ ಗೇಟ್ ನಂ: 1 ) ಹತ್ತಿರ ನೂತನವಾಗಿ ನಿರ್ಮಾಣವಾಗ ಬೇಕಾದ ರಸ್ತೆ ಮೇಲು ಸೇತುವೆ ಬಗ್ಗೆ ಅಗತ್ಯ ಮಾಹಿತಿಯನ್ನು ಪಡೆದು ಈ ನಿಟ್ಟಿನಲ್ಲಿ ಸಹ ಕಾಮಗಾರಿಯನ್ನು ಪ್ರಾರಂಭಿಸುವ ಬಗ್ಗೆ ಕ್ರಮ ವಹಿಸಲು ರೇಲ್ವೆ ಇಲಾಖೆ ಅಭಿಯಂತರರಿಗೆ ಹಾಗೂ ಮಹನಗರ ಪಾಲಿಕೆ ಅಭಿಯಂತರರಿಗೆ ಸೂಚನೆ ನೀಡಿದರು.

ಅದರಂತೆ ಬೆಳಗಾವಿ ನಗರದ ತಾನಾಜಿ ಗಲ್ಲಿಯ ಎಲ್ ಸಿ ನಂ: 386 ಹತ್ತಿರ ನಿರ್ಮಾಣ ಆಗಬೇಕಾದ “ರಸ್ತೆ ಮೇಲು ಸೇತುವೆ” ಬಗ್ಗೆ ಅಲ್ಲಿನ ನಿವಾಸಿಗಳ ಅನಿಸಿಕೆಯನ್ನು ಪಡೆದು ಈ ಕುರಿತು ಸಾರ್ವಜನಿಕರಿಗೆ ಅನಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಕೊಳ್ಳಲಾಗುವುದು ಎಂದು ತಿಳಿಸಿದರು.

ಶಾಸಕ ಅಭಯ ಪಾಟೀಲ, ಮೇಯರ್ ಸವಿತಾ ಕಾಂಬಳೆ, ಉಪಮೇಯರ್ ಆನಂದ ಚವಾಣ, ಮಾಜಿ ಶಾಸಕ ಅನಿಲ ಬೆನಕೆ, ನಗರ ಸೇವಕರಾದ ವಾಣಿ ಜೋಶಿ, ರಾಜು ಭಾತಖಂಡೆ, ವಿನೋದ ಭಾಗವತ್, ರೇಲ್ವೆ, ಲೋಕೋಪಯೋಗಿ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಅಭಿಯಂತರರು, ಸಾರ್ವಜನಿಕರು ಉಪಸ್ಥಿತರಿದ್ದರು.