ಬೆಳ್ವೆ: ಕಸ್ತೂರಿರಂಗನ್ ವರದಿ ಅವೈಜ್ಞಾನಿಕವಾಗಿದೆ.ಇಂತಹ ವರದಿ ಜಾರಿಯಾಗದಂತೆ ತಡೆಯುವಲ್ಲಿ ಜನರ ಸಹಕಾರದೊಂದಿಗೆ ಒಗ್ಗಟ್ಟಿನ ಹೋರಾಟ ನಡೆಸಬೇಕಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸ್ಪಂದಿಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಮಾಜಿ ಸ್ಪೀಕರ್, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.
ಅವರು ಬೆಳ್ವೆ ಗ್ರಾಮ ಹಿತರಕ್ಷಣಾ ಸಮಿತಿ ವತಿಯಿಂದ ಬೆಳ್ವೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ವಿರೋಧಿಸಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಸೋಮವಾರ ಮಾತನಾಡಿದರು.
ಅವೈಜ್ಞಾನಿಕ ಕಸ್ತೂರಿರಂಗನ್ ವರದಿಯ
ವಾಸ್ತವಾಂಶದಲ್ಲಿ ತಪ್ಪಿದೆ. ಜನರಿಗೆ ಆಗುವ ಅನ್ಯಾಯವನ್ನು ತಡೆಯುವಲ್ಲಿ ಜನಪ್ರತಿನಿಧಿಗಳು,ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯ ಸಹ ಕಾರಣವಾಗಿದೆ. ಜನ ವಸತಿ
ಪ್ರದೇಶಗಳು ಹಾಗೂ ಅರಣ್ಯ ಪ್ರದೇಶಗಳನ್ನು ಪ್ರತ್ಯೇಕವಾಗಿ ವಿಂಗಡಿಸದಿರುವುದು ಹಾಗೂ
ಭೂಮಿಯನ್ನು ಭೌತಿಕ ಸರ್ವೆ ಮಾಡುವ ಬದಲು ಅವೈಜ್ಞಾನಿಕವಾಗಿ ಸ್ಯಾಟ್ಲೈಟ್ ಸರ್ವೆ ಮಾಡಿರುವುದರಿಂದ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ನೈಸರ್ಗಿಕ ಕಾಡು ಪ್ರದೇಶವನ್ನು ಗುರುತಿಸದೇ ಕೃಷಿ ಭೂಮಿ,ಜನ ವಸತಿ ಪ್ರದೇಶವನ್ನು ಸಹ ಗುರುತಿಸಿ ದೊಡ್ಡ ತಪ್ಪು ಮಾಡಿದೆ.ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ಜಾರಿ ಬಗ್ಗೆ ಹತಾಶರಾಗದೇ ಹೋರಾಟವನ್ನು ಮುಂದುವರಿಸಬೇಕು.ಜನರಿಗೆ ಆಗುವ
ಅನ್ಯಾಯವನ್ನು ತಡೆಯುವಲ್ಲಿ ಹೋರಾಟಗಾರರಿಗೆ ಉಡುಪಿ ಜಿಲ್ಲಾ ರೈತ ಸಂಘದ ಸಂಪೂರ್ಣ ಬೆಂಬಲವಿದೆ. ಕೇಂದ್ರ,ರಾಜ್ಯ,ಜಿಲ್ಲೆ,ಗ್ರಾಮ ಸಮಿತಿಗಳ ಮೂಲಕ ಒಂದಾಗಿ ಹೋರಾಟದ ಮೂಲಕ ಸಮಸ್ಯೆಗೆ ಸೂಕ್ತ ಪರಿಹಾರ ದೊರೆಯುವಂತಾಗಬೇಕು
ಎಂದರು.ಕುಂದಾಪುರ ಕ್ಷೇತ್ರ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ,ಕುಂದಾಪುರ ಕ್ಷೇತ್ರ ಶಾಸಕ ಎ.ಕಿರಣ್ಕುಮಾರ್ ಕೊಡ್ಗಿ, ಉಡುಪಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸತೀಶ್ ಕಿಣಿ ಬೆಳ್ವೆ,ಸದಸ್ಯ ಉದಯಕುಮಾರ್ ಶೆಟ್ಟಿ ಅಡಕೆಕೊಡ್ಲು, ಸಾಮಾಜಿಕ
ಹೋರಾಟಗಾರ ಸತೀಶ್ ಶೆಟ್ಟಿ ಮುಟ್ಲುಪಾಡಿ, ಸಂಪನ್ಮೂಲ ವ್ಯಕ್ತಿ ನ್ಯಾಯವಾದಿ ಡಾ.ಸಲೀಂ ಜೋಸೆಫ್,ಬೆಳ್ವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧ, ಬೆಳ್ವೆ ಗ್ರಾಮ ಹಿತರಕ್ಷಣಾ ಸಮಿತಿ ಗೌರವ ಸಲಹೆಗಾರ ಬಿ.ರಾಜೇಂದ್ರ ಕಿಣಿ ಬೆಳ್ವೆ,ಬಿ.ಉದಯಕುಮಾರ್ ಪೂಜಾರಿ ಬೆಳ್ವೆ, ಸುರೇಂದ್ರ ನಾಯ್ಕ ಯಳಂತೂರು,ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿ ಬೆಳ್ವೆ,ಅಧ್ಯಕ್ಷ ಎಸ್.ಚಂದ್ರಶೇಖರ್ ಶೆಟ್ಟಿ ಸೂರ್ಗೋಳಿ,ಉಪಾಧ್ಯಕ್ಷ
ಎಸ್.ಜಯರಾಮ ಶೆಟ್ಟಿ ಸೂರ್ಗೋಳಿ,ಶಿವರಾಮ ಪೂಜಾರಿ ಅಲ್ಬಾಡಿ, ಕಾರ್ಯದರ್ಶಿ ಪ್ರವೀಣ್ ಲೋಬೊ ಗುಮ್ಮೋಲ, ಪ್ರಥ್ವೀಜ್ ಶೆಟ್ಟಿ ಹಾಗೂ ಗ್ರಾಮಸ್ಥರು
ಉಪಸ್ಥಿತರಿದ್ದರು.
ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ವಿರೋಧಿಸಿ ನಡೆದ
ಕಾರ್ಯಕ್ರಮಕ್ಕೆ ಉಡುಪಿ ಚಿಕ್ಕಮಗಳೂರು ಸಂಸದ
ಕೋಟ ಶ್ರೀನಿವಾಸ ಪೂಜಾರಿಯವರು ಕಳುಹಿಸಿದ ಸಂದೇಶವನ್ನು ಗ್ರಾಮಸ್ಥರಿಗೆ ತಿಳಿಸಲಾಯಿತು. ಬೆಳ್ವೆ
ಶ್ರೀಶಂಕರನಾರಾಯಣ ದೇವಳದ ಸ್ವಾಗತ
ಗೋಪುರದಿಂದ ಬೆಳ್ವೆ ಪೇಟೆಯಲ್ಲಿ ಗ್ರಾಮಸ್ಥರು ಅವೈಜ್ಞಾನಿಕ ಕಸ್ತೂರಿರಂಗನ್ ವರದಿ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿ, ಬೆಳ್ವೆ ಗ್ರಾಮವನ್ನು ಕೈ
ಬಿಡುವಂತೆ ಆಗ್ರಹಿಸಿ ಭಿತ್ತಿಪತ್ರಗಳನ್ನು
ಪ್ರದರ್ಶಿಸಿದರು. ಅಲ್ಬಾಡಿ ಮೂರುಕೈ ಪೇಟೆಯಲ್ಲಿ ವರ್ತಕರು ಅಂಗಡಿ ಮುಗ್ಗಟ್ಟುಗಳನ್ನು ಸಂಪೂರ್ಣವಾಗಿ ಮುಚ್ಚಿ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ಸೂಚಿಸಿದರು.