ನವದೆಹಲಿ: ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಮಂಗಳವಾರ ಪ್ರಕಟಿಸಿದ್ದು, ಹರಿಯಾಣದಲ್ಲಿ ಬಿಜೆಪಿ ಬಹುಮತ ಪಡೆದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) -ಕಾಂಗ್ರೆಸ್ ಮೈತ್ರಿಕೂಟಕ್ಕೆ ಬಹುಮತ ಪಡೆದಿದೆ.

ಈ ಫಲಿತಾಂಶಗಳು ಮತ್ತೊಮ್ಮೆ ಎಕ್ಸಿಟ್ ಪೋಲ್‌ಗಳು ಹೇಳಿದ್ದು ಠುಸ್‌ ಆಗಿದೆ. ಅದು ಹರಿಯಾಣದಲ್ಲಿ ಕಾಂಗ್ರೆಸ್‌ಗೆ ನಿರ್ಣಾಯಕ ಗೆಲುವು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಅತಂತ್ರ ಫಲಿತಾಂಶ ಬರುತ್ತದೆ ಎಂದು ಭವಿಷ್ಯ ನುಡಿದಿದ್ದವು. ಲೋಕಸಭೆ 2024 ರ ಚುನಾವಣೆಯಲ್ಲಿ ಇವರ ಸಮೀಕ್ಷೆಗಳು ಠುಸ್‌ ಆದ ನಂತರದಲ್ಲಿ ಸೋಲಿನ ನಂತರ ಈ ಮತಗಟ್ಟೆ ಸಮೀಕ್ಷೆಗಳು ಸತತ ಎರಡನೇ ಬಾರಿಗೆ ಠುಸ್‌ ಆಗಿವೆ.
2024ರ ಹರಿಯಾಣ ವಿಧನಸಭೆ ಚುನಾವಣೆ ಎಕ್ಸಿಟ್ ಪೋಲ್
ಹರಿಯಾಣದ ಮತಗಟ್ಟೆ ಸಮೀಕ್ಷೆಗಳು ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿಗೆ ಹಿನ್ನಡೆಯಾಗಲಿದ್ದು, ಕಾಂಗ್ರೆಸ್ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಮತ್ತು 90 ಸ್ಥಾನಗಳ ವಿಧಾನಸಭೆಯಲ್ಲಿ ಬಹುಮತದ 60 ಸ್ಥಾನಗಳನ್ನು (ಬಹುಮತಕ್ಕೆ ಬೇಕಾದ ಸಂಖ್ಯೆ 46) ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಿದ್ದವು.

ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್‌ಗಳು 90 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ 53-65 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜು ಮಾಡಿತ್ತು. ಬಿಜೆಪಿ 18-28 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಿತ್ತು, ಐಎನ್‌ಎಲ್‌ಡಿ-ಬಿಎಸ್‌ಪಿ ಮೈತ್ರಿ 1-5 ಸ್ಥಾನಗಳನ್ನು ಗೆಲ್ಲಬಹುದು. ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) ಕಳಪೆ ಫಲಿತಾಂಶ ಪಡೆಯಲಿದೆ ಎಂದು ಭವಿಷ್ಯ ನುಡಿದಿತ್ತು. ರಿಪಬ್ಲಿಕ್ ಟಿವಿ-ಮ್ಯಾಟ್ರಿಜ್ ಸಮೀಕ್ಷೆಯು ಕಾಂಗ್ರೆಸ್ 55-62 ಸ್ಥಾನಗಳನ್ನು ಗಳಿಸಬಹುದು ಎಂದು ಸೂಚಿಸಿತ್ತು, ಬಿಜೆಪಿ 18-24 ಗೆಲ್ಲುವ ನಿರೀಕ್ಷೆಯಿದೆ ಎಂದು ಹೇಳಿತ್ತು. ದೈನಿಕ್ ಭಾಸ್ಕರ್ ಅವರ ಸಮೀಕ್ಷೆಯು ಕಾಂಗ್ರೆಸ್ 44-54, ಬಿಜೆಪಿ 15-29 ಮತ್ತು ಇತರರು 4-9 ಸ್ಥಾನಗಳನ್ನು ಗೆಲ್ಲಲಿದ್ದಾರೆ ಎಂದು ಅಂದಾಜಿಸಿತ್ತು. ಇನ್ನೂ ಅನೇಕ ಸಮೀಕ್ಷೆಗಳು ಬಹುತೇಕ ಇದನ್ನೇ ಹೇಳಿದ್ದವು. ಪೀಪಲ್ಸ್ ಪಲ್ಸ್ ಎಕ್ಸಿಟ್‌ ಪೋಲ್‌
ಕಾಂಗ್ರೆಸ್ 49-61, ಬಿಜೆಪಿ 20-32, ಜೆಜೆಪಿ 0-1, ಐಎನ್‌ಎಲ್‌ಡಿ 2-3, ಇತರೆ: 3-5 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಅಂದಾಜಿಸಿತ್ತು. ಧ್ರುವ್ ರಿಸರ್ಚ್ ಎಕ್ಸಿಟ್‌ ಪೋಲ್‌ ಕಾಂಗ್ರೆಸ್ 50-64, ಬಿಜೆಪಿ 22-32, ಜೆಜೆಪಿ 0, ಐಎನ್‌ಎಲ್‌ಡಿ 0, ಇತರೆ: 2-8 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಹೇಳಿತ್ತು.
ಅಧಿಕೃತ ಫಲಿತಾಂಶಗಳು
ಆದರೆ ಬಿಜೆಪಿ 48 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ನಾಟಕೀಯ ತಿರುವುಗಳ ನಂತರ, ಬಿಜೆಪಿಯು ಆರಂಭಿಕ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್ ಅನ್ನು ಹಿಂದಿಕ್ಕಿ ಸರಳ ಬಹುಮತದತ್ತ ಮುನ್ನಡೆಯಿತು. ಕಾಂಗ್ರೆಸ್‌ 37 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತು.

ಜಮ್ಮು-ಕಾಶ್ಮೀರಕ್ಕೆ ಎಕ್ಸಿಟ್ ಪೋಲ್
ಜಮ್ಮು ಮತ್ತು ಕಾಶ್ಮೀರದ ಎಕ್ಸಿಟ್‌ ಪೊಲ್‌ಗಳು ಅತಂತ್ರ ವಿಧಾಸಭೆಯ ಭವಿಷ್ಯ ನುಡಿದಿದ್ದವು.
ದೈನಿಕ್ ಭಾಸ್ಕರ್ ಅವರ ಎಕ್ಸಿಟ್‌ ಪೋಲ್‌ ಪ್ರಕಾರ, ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ ಮೈತ್ರಿಕೂಟ 35-40 ಸ್ಥಾನಗಳನ್ನು ಗೆಲ್ಲಬಹುದು. ಬಿಜೆಪಿ 20-25 ಸ್ಥಾನಗನ್ನು ಗೆಲ್ಲಬಹುದು, ಸ್ವತಂತ್ರ ಅಭ್ಯರ್ಥಿಗಳು 12-16 ಸ್ಥಾನಗಳನ್ನು, ಪಿಡಿಪಿ 4-7 ಸ್ಥಾನಗಳನ್ನು ಪಡೆಯಬಹುದು ಎಂದು ಹೇಳಿತ್ತು. ಗುಲಿಸ್ತಾನ್ ಎಕ್ಸಿಟ್‌ ಪೋಲ್‌ ಹೆಚ್ಚು ನಿಕಟ ಸ್ಪರ್ಧೆಯನ್ನು ಮುನ್ಸೂಚಿಸಿತ್ತು. ಎನ್‌ಸಿ-ಕಾಂಗ್ರೆಸ್ 31-36 ಸ್ಥಾನಗಳು ಮತ್ತು ಬಿಜೆಪಿಗೆ 28-30 ಸ್ಥಾನಗಳು. ಸ್ವತಂತ್ರ ಅಭ್ಯರ್ಥಿಗಳು 19-23 ಸ್ಥಾನಗಳು ಹಾಗೂ ಪಿಡಿಪಿ 5-7 ಸ್ಥಾನಗಳಿಸಬಹುದು ಎಂದು ಹೇಳಿತ್ತು. ಮ್ಯಾಟ್ರಿಜ್ ಮತಗಟ್ಟೆ ಸಮೀಕ್ಷೆಯು ಬಿಜೆಪಿ – 25, ಕಾಂಗ್ರೆಸ್ – 12, ನ್ಯಾಷನಲ್ ಕಾನ್ಫರೆನ್ಸ್ -15, ಪಿಡಿಪಿ- 28, ಇತರೆ – 7 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಹೇಳಿತ್ತು. ಇಂಡಿಯಾ ಟುಡೇ ಸಿ-ವೋಟರ್ ಎಕ್ಸಿಟ್‌ ಪೋಲ್‌ ಕಾಂಗ್ರೆಸ್ -ನ್ಯಾಶನಲ್‌ ಕಾನ್ಫರೆನ್ಸ್‌ 40-48, ಬಿಜೆಪಿ 27-32, ಪಿಡಿಪಿ : 6-12, ಇತರೆ: 6-11 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಅಂದಾಜಿಸಿತ್ತು.
ಅಧಿಕೃತ ಫಲಿತಾಂಶ
ಆದಾಗ್ಯೂ, 2024 ರ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಚುನಾವಣೆಯಲ್ಲಿ ನ್ಯಾಶನಲ್‌-ಕಾಂಗ್ರೆಸ್‌ ಬಹುಮತಕ್ಕೆ ಬೇಕಾದಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಜಮ್ಮು ಮತ್ತು ಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್ 42 ಗೆದ್ದರೆ, ಅದರ ಮಿತ್ರ ಪಕ್ಷ, ಕಾಂಗ್ರೆಸ್ ಪಕ್ಷವು ಆರು ಸ್ಥಾನಗಳನ್ನು ಗಳಿಸಿತು. ಬಿಜೆಪಿ 29 ಸ್ಥಾನಗಳನ್ನು ಹಾಗೂ ಪಿಡಿಪಿ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿತು.