ಬೆಳಗಾವಿ : ಬೆಳಗಾವಿ – ಸಂಕೇಶ್ವರ – ಕೊಲ್ಲಾಪುರ – ಕರಾಡ ನಡುವೆ ನಿರ್ಮಾಣಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ವಾಹನ ಸವಾರರು ತಾವು ಮುಟ್ಟಬೇಕಾದ ನಗರಕ್ಕೆ ಹೆಚ್ಚಿನ ಸಮಯಾವಕಾಶ ಬೇಕಾಗುತ್ತಿರುವುದರಿಂದ ಹತ್ತಿರದ ಟೋಲ್ ಪ್ಲಾಜಾದಲ್ಲಿ ಪಾವತಿಸಬೇಕಾದ ಶುಲ್ಕವನ್ನು ಸಾರ್ವಜನಿಕರು ವಿರೋಧಿಸುತ್ತಿರುವುದನ್ನು ಕೇಂದ್ರ ಸಾರಿಗೆ ಸಂಪರ್ಕ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ಅವರು ಪತ್ರದ ಮುಖೇನ ವಿಷಯ ತಿಳಿಸಿ ಗಮನ ಸೆಳೆದಿದ್ದಾರೆ.
ಬೆಳಗಾವಿ – ಸಂಕೇಶ್ವರ – ಕೊಲ್ಲಾಪುರ – ಕರಾಡ ನಡುವೆ ರಸ್ತೆಯ ಅಗಲೀಕರಣ ಚಾಲ್ತಿಯಲ್ಲಿದ್ದು ಹಲವು ತಿರುವುಗಳು ಹಾಗೂ ಸಂಪೂರ್ಣವಾಗಿ ತಗ್ಗು ದಿನ್ನೆಗಳಿಂದ ಕೂಡಿದ್ದು ವಾಹನ ಸವಾರರಿಗೆ ತುಂಬಾ ತೊಂದರೆಯಾಗಿ ತಲುಪಬೇಕಾದ ಸ್ಥಳಕ್ಕೆ ನಿಗದಿತ ಸಮಯಕ್ಕಿಂತಲೂ ಎರಡು ಪಟ್ಟು ಹೆಚ್ಚು ಸಮಯ ವ್ಯಯವಾಗುತ್ತಿರುವುದಷ್ಟೇ ಅಲ್ಲದೇ ವಾಹನಗಳು ಸಹ ಕೆಟ್ಟು ಹೋಗುತ್ತಿವೆ. ಹತ್ತಿರದ ಟೋಲ್ ಪ್ಲಾಜಾದಲ್ಲಿ ಪಾವತಿಸಬೇಕಾದ ಶುಲ್ಕಕ್ಕೆ ವಾಹನ ಸವಾರರಿಂದ ವಿರೋಧ ವ್ಯಕ್ತವಾಗುತ್ತಿದೆ.
ಇದೇ ಪರಿಸ್ಥಿತಿಯು ಬೆಳಗಾವಿ – ಪಣಜಿ ರಾಷ್ಟ್ರೀಯ ಹೆದ್ದಾರಿಯ ಖಾನಾಪುರ ಹತ್ತಿರ ನಿರ್ಮಾಣವಾಗುತ್ತಿರುವ ರಸ್ತೆಗೆ ಗಣಿಬೈಲ್ ಟೋಲ್ ಪ್ಲಾಜಾದಲ್ಲಿ ಪಾವತಿಸಬೇಕಾದ ವಾಹನ ಶುಲ್ಕಕ್ಕೆ ಸವಾರರು ಬೇಸರಗೊಂಡಿದ್ದಾರೆ.
- ಬೆಳಗಾವಿ ಲೋಕಸಭಾ ಕ್ಷೇತ್ರದ ಸಾರ್ವಜನಿಕರಿಂದ ಅನೇಕ ದೂರುಗಳು ಬರುತ್ತಿದ್ದು ಈ ಹೆದ್ದಾರಿಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವವರೆಗೆ ಯಾವುದೇ ಟೋಲ್ ಪ್ಲಾಜಾದಲ್ಲಿ ಟೋಲ್ ಪಡೆಯಬಾರದೆಂದು ಸೂಕ್ತ ಸೂಚನೆಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ನೀಡುವಂತೆ ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ಅವರು ಕೇಂದ್ರ ಸಾರಿಗೆ ಸಂಪರ್ಕ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ವಿನಂತಿಸಿದ್ದಾರೆ.