ಭುವನೇಶ್ವರ : ಇಲ್ಲೊಬ್ಬರು ತಮ್ಮ ಉದ್ಯೋಗದಿಂದ ನಿವೃತ್ತಿಯಾದ ಬಳಿಕ ಬಳಿಕ ಶಿಕ್ಷಣವನ್ನು ಮುಂದುವರಿಸಿ ಯಶಸ್ಸನ್ನು ಸಾಧಿಸಿ ತಮ್ಮ ಕನಸನ್ನು ನನಸಾಗಿಸಲು ಹೊರಟಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ದ ನಿವೃತ್ತ ಉದ್ಯೋಗಿ 64 ನೇ ವಯಸ್ಸಿನಲ್ಲಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET UG) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಒಡಿಶಾ ಮೂಲದ ಜೈ ಕಿಶೋರ ಪ್ರಧಾನ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ಬಿಐ)ದಲ್ಲಿ ಡೆಪ್ಯುಟಿ ಮ್ಯಾನೇಜರ್ ಆಗಿ ನಿವೃತ್ತರಾಗಿದ್ದಾರೆ. ಅವರ ನಿವೃತ್ತಿಯ ನಂತರ, ಅವರು ವೈದ್ಯಕೀಯ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಲು ತಾವು ಈ ಮೊದಲು ಕಂಡಿದ್ದ ಕನಸನ್ನು ನನಸು ಮಾಡಲು ನಿರ್ಧರಿಸಿದರು.
ಈ ಗುರಿಯನ್ನು ಸಾಧಿಸಲು ನಿರ್ಧರಿಸಿದ ಜೈ ಕಿಶೋರ ಪ್ರಧಾನ ಅವರು ತಮ್ಮ ಕೌಟುಂಬಿಕ ಜವಾಬ್ದಾರಿಗಳೊಂದಿಗೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ (NEET) ತಯಾರಿ ಆರಂಭಿಸಿದರು.
ನೀಟ್ (NEET) ಪಠ್ಯಕ್ರಮವನ್ನು ವ್ಯವಸ್ಥಿತವಾಗಿ ಅರ್ಥಮಾಡಿಕೊಳ್ಳಲು ಅವರು ಆನ್ಲೈನ್ ಕೋಚಿಂಗ್ ಗೆ ಸೇರಿಕೊಂಡರು. ಅವರು ಹಲವಾರು ಸವಾಲುಗಳನ್ನು ಎದುರಿಸಿದರೂ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಗುರಿಯತ್ತಲೇ ಗಮನಹರಿಸಿದರು.2020 ರಲ್ಲಿ, ಅವರ ಪ್ರಯತ್ನ ಫಲ ನೀಡಿತು. ಜೈ ಕಿಶೋರ ಪ್ರಧಾನ ಅವರು ನೀಟ್ (NEET) ಪರೀಕ್ಷೆಯಲ್ಲಿ ತೇರ್ಗಡೆಯಾದರು. ಅವರು ವೀರ್ ಸುರೇಂದ್ರ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (VIMSAR) ಸೀಟು ಪಡೆದರು.