ಬೆಳಗಾವಿ : ಉತ್ತರ ಕರ್ನಾಟಕದ ಮೊದಲ ಟೈಗರ್ ಸಫಾರಿ ಎಂಬ ಖ್ಯಾತಿ ಪಡೆದಿರುವ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯ ಇದೀಗ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಬೆಳಗಾವಿ ಸನಿಹದ ಸುಮಾರು ಹದಿನೈದು ಕಿಲೋಮೀಟರ್ ದೂರದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಭೂತರಾಮನ ಹಟ್ಟಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯ ಪ್ರವಾಸಿಗರ ಮೆಚ್ಚಿನ ತಾಣವಾಗಿ ರೂಪುಗೊಳ್ಳುತ್ತಿದೆ. ಇದು ಉತ್ತರ ಕರ್ನಾಟಕದ ಮೊದಲ ಟೈಗರ್ ಸಫಾರಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ಕಳೆದ ವರ್ಷದಿಂದ ಟೈಗರ್ ಸಹ ಪ್ರಾರಂಭವಾಗಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಇಲ್ಲಿರುವ ಪ್ರಾಣಿಗಳು ಯಾವುವು ಗೊತ್ತೇ ?
ನಿರೂಪಮಾ ಮತ್ತು ಕೃಷ್ಣಾ ಎಂಬ ಎರಡು ಸಿಂಹಗಳಿವೆ. ಕನಿಷ್ಕಾ, ಶೌರ್ಯ, ಕೃಷ್ಣ ಎಂಬ ಹೆಸರಿನ ಮೂರು ಹುಲಿಗಳಿವೆ. ಅರ್ಪಿತಾ, ಅರ್ಜುನ, ಅನನ್ಯ ಎಂಬ ಹೆಸರಿನ ಮೂರು ಚಿರತೆಗಳಿವೆ. ಲಕ್ಷ್ಮಣ, ತೀರ್ಥ ಎಂಬ ಎರಡು ಕರಡಿಗಳು ಇವೆ. 13 ನರಿಗಳು, 16 ಜಿಂಕೆಗಳು, 26 ಕೃಷ್ಣಮೃಗಗಳು, ನಾಲ್ಕು ಕತ್ತೆ ಕಿರುಬಗಳು, ಆರು ನವಿಲುಗಳು, ಮೊಸಳೆಗಳು, ಕಡವೆಗಳು,ಎಮು, ಗುಲಾಬಿ ಕೊರಳಿನ ಗಿಳಿ, ಕೆಂದಲೆ ಗಿಳಿ ಸೇರಿದಂತೆ ಒಟ್ಟು 25 ಪ್ರಭೇದಗಳ ಒಟ್ಟು 198 ಪ್ರಾಣಿ ಮತ್ತು ಪಕ್ಷಿಗಳನ್ನು ಇಲ್ಲಿ ವೀಕ್ಷಣೆ ಮಾಡಬಹುದಾಗಿದೆ.
ಸುಮಾರು 125 ಎಕರೆ ಪ್ರದೇಶದಲ್ಲಿ ಈ ಸುಂದರ ಮೃಗಾಲಯ ನಿರ್ಮಾಣಗೊಂಡಿದೆ. ಈ ಮೊದಲು ಚುಕ್ಕೆ ಜಿಂಕೆಗಳ ವಾಸಸ್ಥಾನವಾಗಿ ಇದು ಗುರುತಿಸಿಕೊಂಡಿತ್ತು. ಆದ್ದರಿಂದ ಇದನ್ನು ಸ್ಥಳೀಯರು ಚಿಗರಿ ಮಾಳ ಎಂದು ಕರೆಯುತ್ತಿದ್ದರು. 1989 ರಲ್ಲಿ ಇಲ್ಲಿ ನಿಸರ್ಗಧಾಮವನ್ನು ನಿರ್ಮಿಸಲಾಯಿತು. 2018 ರಲ್ಲಿ ಕೇಂದ್ರೀಯ ಮೃಗಾಲಯ ಪ್ರಾಧಿಕಾರದಿಂದ ಅನುಮತಿ ಪಡೆದು ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯವನ್ನು ಅಸ್ತಿತ್ವಕ್ಕೆ ತರಲಾಗಿದೆ. ಮೃಗಾಲಯದಲ್ಲಿ ಮಕ್ಕಳಿಗೆ ರೂ.30 ಮತ್ತು ವಯಸ್ಕರಿಗೆ ರೂ.30 ನಿಗದಿ ಮಾಡಲಾಗಿದೆ. ಮಂಗಳವಾರದಂದು ಮೃಗಾಲಯಕ್ಕೆ ರಜೆ ಇರುತ್ತದೆ. ಇದನ್ನು ಹೊರತುಪಡಿಸಿ ವಾರದ ಆರು ದಿನಗಳ ಕಾಲ ಬೆಳಗ್ಗೆ 9 ಗಂಟೆಯಿಂದ ಸಂಜೆ 5:30 ವರೆಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
ಇಡೀ ಮೃಗಾಲಯ ಹಸಿರಿನಿಂದ ಕಂಗೊಳಿಸುತ್ತಿದೆ. ಎರಡು ಎಲೆಕ್ಟ್ರಿಕ್ ವಾಹನಗಳು ಇಲ್ಲಿವೆ. ತಲಾ ಒಬ್ಬರಿಗೆ 75 ರೂ. ಟಿಕೆಟ್ ದರ ಇದೆ. ಇಲ್ಲಿನ ಟೈಗರ್ ಸಫಾರಿ ಮೃಗಾಲಯದ ಮುಖ್ಯ ಆಕರ್ಷಣೆಯಾಗಿದೆ.
20 ಪ್ರದೇಶದಲ್ಲಿ ಸಫಾರಿಗೆ ಅವಕಾಶವಿದೆ. ಎರಡು ವಾಹನಗಳಿದ್ದು ವೀಕ್ಷಕರು ಯಾವುದೇ ಭಯ ಇಲ್ಲದೆ ಹುಲಿಗಳನ್ನು ನೋಡಬಹುದು. ಟೈಗರ್ ಸಫಾರಿಗೆ ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಗಿದೆ. ಮೃಗಾಲಯಕ್ಕೆ ಬರುವ ಹೆಚ್ಚಿನ ಜನ ಟೈಗರ್ ಸಫಾರಿಗೆ ಬರುವುದು ವಿಶೇಷ.
ಕಿರು ಮೃಗಾಲಯದ ವಲಯ ಅರಣ್ಯ ಅಧಿಕಾರಿ ಪವನ್ ಕರನಿಂಗ ಮಾತನಾಡಿ, ವೀಕ್ಷಕರಿಂದ 2023-24ರಲ್ಲಿ 1.80 ಕೋಟಿ ರೂಪಾಯಿ ಹಾಗೂ ಈ ವರ್ಷ ಅಂದರೆ 2024-25 ರಲ್ಲಿ ಇದುವರೆಗೆ 85 ಲಕ್ಷ ಆದಾಯ ಬಂದಿದೆ. ಕಳೆದ ವರ್ಷ 2.80 ಲಕ್ಷ ಜನ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಇದುವರೆಗೆ 89 ಸಾವಿರ ಜನ ಬಂದಿದ್ದಾರೆ. ಮೃಗಾಲಯದ ಆದಾಯದಿಂದ ಪ್ರಾಣಿ-ಪಕ್ಷಿಗಳ ಆಹಾರ ಆರೈಕೆ, ಹೊರಗುತ್ತಿಗೆ ಸಿಬ್ಬಂದಿಗೆ, ವೇತನ ಪಾವತಿ, ಮೃಗಾಲಯದ ನಿರ್ವಹಣೆ, ಸಂದರ್ಶಕರಿಗೆ ಸೌಕರ್ಯ ಕಲ್ಪಿಸಲು ಬಳಸಿಕೊಳ್ಳಲಾಗುತ್ತಿದೆ. ಪ್ರಾಣಿ- ಪಕ್ಷಿಗಳ ಸಂಖ್ಯೆ ಹೆಚ್ಚಿಸಬೇಕಾಗಿದೆ. ಅದರ ಜೊತೆಗೆ ಮತ್ತೊಂದು ಟೈಗರ್ ಸಫಾರಿ ಪ್ರದೇಶ ಆರಂಭಿಸುವ ಯೋಜನೆ ಇದೆ. ಹೆಚ್ಚುರಿಯಾಗಿ ಮತ್ತೊಂದು ಸಫಾರಿ ವಾಹನದ ಅಗತ್ಯವಿದೆ. ಆಗಮಿಸುವ ಮಕ್ಕಳ ಸಂಖ್ಯೆ ಹೆಚ್ಚು ಇರುವುದರಿಂದ ಅವರಿಗೆ ಆಟಿಕೆ ಮೈದಾನ ನಿರ್ಮಿಸಬೇಕಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವ ಪ್ರಯತ್ನ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ನಡುವೆ ಇಲ್ಲಿ ಪ್ರಾಣಿ ಮತ್ತು ಪಕ್ಷಿಗಳನ್ನು ದತ್ತು ಪಡೆಯುವ ಅವಕಾಶವಿದೆ. ವನ್ಯ ಪ್ರಾಣಿಗಳ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಪ್ರಾಣಿ ದತ್ತು ಸ್ವೀಕಾರ ಯೋಜನೆ ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಅಥವಾ ಸಂಘ-ಸಂಸ್ಥೆಗಳು ಯಾವುದೇ ಪ್ರಾಣಿ ಮತ್ತು ಪಕ್ಷಿಯನ್ನು ಒಂದು ವರ್ಷದ ಅವಧಿಗೆ ದತ್ತು ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ನಾಲ್ಕು ಶ್ರೇಣಿಗಳ ಅಡಿ ಪ್ರಾಣಿ ಮತ್ತು ಪಕ್ಷಿ ದತ್ತು ಪಡೆಯಲು ಅವಕಾಶ ಇದೆ. ವಜ್ರದ ಶ್ರೇಣಿಯಡಿ 2 ಲಕ್ಷ ರೂಪಾಯಿ ಪಾವತಿ ಮಾಡಿ ಒಂದು ವರ್ಷದ ಅವಧಿಗೆ ಹುಲಿ ಮತ್ತು ಸಿಂಹವನ್ನು ದತ್ತು ಪಡೆಯಬಹುದಾಗಿದೆ. ಚಿನ್ನ, ಬೆಳ್ಳಿ ಮತ್ತು ಕಂಚಿನ ಶ್ರೇಣಿಗಳ ಅಡಿ ಒಂದು ಸಾವಿರದಿಂದ 50,000 ವರೆಗೆ ಪಾವತಿಸಿ ವಿವಿಧ ಪ್ರಾಣಿ ಮತ್ತು ಪಕ್ಷಿಗಳನ್ನು ದತ್ತು ಪಡೆಯಬಹುದು. ಆಸಕ್ತರು ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 7411434788 ಸಂಪರ್ಕಿಸಬಹುದು. ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಯವರು ತಮ್ಮ ಜನ್ಮದಿನ, ವಾರ್ಷಿಕೋತ್ಸವ, ವಿಶೇಷ ಸಂದರ್ಭದಲ್ಲಿ ಸವಿ ನೆನಪಿಗೆ ದತ್ತು ಪಡೆಯಬಹುದು. ನಿಯಮಾನಸಾರವಾಗಿ ಅವರಿಗೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಮೃಗಾಲಯದಲ್ಲಿ ವಿಶೇಷ ಸೌಕರ್ಯ ನೀಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ.