ಬೆಳಗಾವಿ: ಬ್ರಿಟಿಷರ ವಿರುದ್ಧ ವೀರರಾಣಿ ಕಿತ್ತೂರು ಚನ್ನಮ್ಮ ದಿಗ್ವಿಜಯ ಸಾಧಿಸಿದ ಘಟನೆಗೆ ಈ ವರ್ಷ ಬರೋಬ್ಬರಿ 200 ವರ್ಷಗಳ ಸಂಭ್ರಮ. ಈ ವಿಜಯೋತ್ಸವಕ್ಕೆ ಮುಖ್ಯ ಕಾರಣಿಕರ್ತರಾಗಿರುವ ಗುರಿಕಾರ ಅಮಟೂರು ಬಾಳಪ್ಪ ಬ್ರಿಟಿಷ್ ಕಲೆಕ್ಟರ್ ಥ್ಯಾಕರೆ ಎದೆಗೆ ಗುಂಡಿಟ್ಟು ಹೊಡೆದು ಉರುಳಿಸಿ ರಾಣಿ ಚನ್ನಮ್ಮ ರನ್ನು ರಕ್ಷಿಸಿ ಗೆಲುವು ತಂದು ಕೊಟ್ಟಿದ್ದರು. ಇದರಿಂದ ಕಿತ್ತೂರಿನಲ್ಲಿ ಸಂಭ್ರಮ ಮುಗಿಲು ಮುಟ್ಟಲು ಕಾರಣವಾಗಿತ್ತು.
ವೀರ ಕೇಸರಿ ಆಗಿದ್ದ ಬಾಳಪ್ಪರ ಶೌರ್ಯ, ಪರಾಕ್ರಮ ಕಿತ್ತೂರು ಇತಿಹಾಸದಲ್ಲೇ ಅಚ್ಚಳಿಯದ ಘಟನೆ. ಆದರೆ, ಕಿತ್ತೂರು ಚನ್ನಮ್ಮರ ಪಾಲಿನ ಆಶಾಕಿರಣವಾಗಿದ್ದ ಬಾಳಪ್ಪ ಅವರಿಗೆ ಸಿಗಬೇಕಾದ ಪ್ರಚಾರ ಮತ್ತು ಗೌರವ ಸಿಗದೇ ಇರುವುದು ದುರಂತ.
ಅಕ್ಟೋಬರ್ 23 ರಂದು ಮತ್ತೆ ಕಿತ್ತೂರು ಉತ್ಸವ ನಡೆಯುತ್ತಿದೆ. ಈ ಸಂದರ್ಭದಲ್ಲಾದರೂ ಅಮಟೂರು ಬಾಳಪ್ಪರನ್ನು ನೆನಪಿಸಿಕೊಳ್ಳುವುದು ಆಡಳಿತದ ಮುಖ್ಯ ಜವಾಬ್ದಾರಿ.
ಬ್ರಿಟಿಷರನ್ನು ಕಂಡರೆ ಬೆಚ್ಚಿ ಬೀಳುತ್ತಿದ್ದ ಕಾಲ ಅದಾಗಿತ್ತು. ವಿಶ್ವದಲ್ಲಿ ದೊಡ್ಡ ದೊಡ್ಡ ಸಾಮ್ರಾಜ್ಯಗಳು ಬ್ರಿಟಿಷರ ಮುಂದೆ ಶರಣಾಗಿದ್ದವು. ಆದರೆ ಕಿತ್ತೂರು ರಾಣಿ ಚನ್ನಮ್ಮ ಮಾತ್ರ ಬ್ರಿಟಿಷರಿಗೆ ತಲೆಬಾಗಿರಲಿಲ್ಲ. ಪುಟ್ಟ ಸಂಸ್ಥಾನವಾದರೂ ವೀರರಾಣಿ ಚನ್ನಮ್ಮರ ಧೈರ್ಯ- ಸಾಹಸ ಅಗಾಧವಾದದ್ದು. ಕಿತ್ತೂರು ಕೋಟೆ ಮೇಲೆ ದಂಡೆತ್ತಿ ಬಂದ ಧಾರವಾಡ ಕಲೆಕ್ಟರ್ ಥ್ಯಾಕರೆಯನ್ನು 1824 ರ ಅಕ್ಟೋಬರ್ 23 ರಂದು ತನ್ನ ಬಂದುಕಿನಿಂದ ಹೊರಬಂದ ಗುಂಡಿಯಿಂದ ಗುರಿಕಾರ ಬಾಳಪ್ಪ ಹೊಡೆದು ಉರುಳಿಸಿ, ಕಿತ್ತೂರು ವಿಜಯೋತ್ಸವದ ರಣಕಹಳೆ ಬಾರಿಸಲು ಕಾರಣರಾಗಿದ್ದರು. ಕಿತ್ತೂರು ವಿಜಯೋತ್ಸವದ ಪ್ರಮುಖ ಕಾರಣಿಕರ್ತರು ಅಮಟೂರು ಬಾಳಪ್ಪರು.
ಅವರು ವೀರರಾಣಿ ಚನ್ನಮ್ಮ ಅವರ ಪ್ರಮುಖ ಅಂಗರಕ್ಷಕರಾಗಿದ್ದು ರಣರಂಗದಲ್ಲಿ ಹೋರಾಡುತ್ತಲೇ ಬ್ರಿಟಿಷ್ ಅಧಿಕಾರಿಯ ಗುಂಡು ಚನ್ನಮ್ಮರಿಗೆ ತಾಗುವುದನ್ನು ತಪ್ಪಿಸಿದ್ದರು. ಮತ್ತೊಂದು ಕಡೆಯಲ್ಲಿ ಥ್ಯಾಕರೆ ಎದೆಗೆ ನೇರವಾಗಿ ಗುಂಡಿಟ್ಟು ಬೇಟೆಯಾಡುವ ಮೂಲಕ ಬ್ರಿಟಿಷರ ವಿರುದ್ಧ ಇಡೀ ಭಾರತದಲ್ಲಿ ಕಿತ್ತೂರು ಸಂಸ್ಥಾನ ಗೆಲುವು ಸಾಧಿಸುವಂತೆ ಮಾಡಿದ ಶ್ರೇಯಸ್ಸು ಅಮಟೂರು ಬಾಳಪ್ಪ ಅವರಿಗೆ ಸಲ್ಲುತ್ತದೆ. ಅಮಟೂರು ಬಾಳಪ್ಪ ಅವರು ವೀರರಾಣಿ ಚನ್ನಮ್ಮ ಅವರ ಅಂಗರಕ್ಷಕರಾಗಿ ಜೀವನದ ಕೊನೆಯ ಉಸಿರು ಇರುವವರೆಗೂ ಅವರ ನೆರಳಾಗಿ ಬಾಳಿ ಬದುಕಿದವರು. ಬಂದೂಕು ಹಾರಿಸುವುದರಲ್ಲಿ, ಖಡ್ಗ ಜಳಪಿಸುವುದರಲ್ಲಿ ಬರ್ಚಿ ಎಸೆಯುವುದರಲ್ಲಿ ಅತ್ಯಂತ ನಿಷ್ಟಾತರಾಗಿದ್ದರು. ಅವರ ಗುಂಡು, ಖಡ್ಗ ಮತ್ತು ಬರ್ಚಿಯ ಗುರಿ ಎಂದೂ ಗುರಿ ತಪ್ಪುತಿರಲಿಲ್ಲ. ಆದ್ದರಿಂದಲೇ ಬಾಳಪ್ಪ ಅವರಿಗೆ ಗುರಿಕಾರ ಎಂದು ಕರೆಯುತ್ತಿದ್ದರು. ಅಮಟೂರು ಬಾಳಪ್ಪ ಅವರನ್ನು ತಮ್ಮತ್ತ ಸೆಳೆದುಕೊಳ್ಳಲು ಬ್ರಿಟಿಷ್ ಅಧಿಕಾರಿ ಥ್ಯಾಕರೆ ಮುಂದಾಗಿದ್ದರು. ಅಮಟೂರು ಬಾಳಪ್ಪ ಕೇಳಿದಷ್ಟು ಹಣ ಮತ್ತು ಬಂಗಾರ ಕೊಡುವುದಾಗಿ ಆಮಿಷ ಒಡ್ಡಿದ್ದರು. ಆದರೆ, ಆಮಿಷಕ್ಕೆ ಬಲಿಯಾಗದ ಅಮಟೂರು ಬಾಳಪ್ಪ ಕಿತ್ತೂರು ನೆಲದಲ್ಲಿ ಹೋರಾಡಿ ಇತಿಹಾಸದಲ್ಲಿ ಇಂದಿಗೂ ಅಮರರಾಗಿದ್ದಾರೆ.
ಕಿತ್ತೂರು ಚನ್ನಮ್ಮ ಅವರ ಪ್ರಾಣವನ್ನು ರಕ್ಷಿಸಿ, ಆ ಗುಂಡಿನೇಟಿಗೆ ತಾನು ಗುರಿಯಾಗಿ ಕಿತ್ತೂರು ನೆಲದಲ್ಲಿ ರಕ್ತ ಚೆಲ್ಲಿದ ಬಾಳಪ್ಪ ಅವರು ನಿಜವಾದ ಕಿತ್ತೂರು ವಿಜಯೋತ್ಸವದ ರೂವಾರಿಯಾಗಿದ್ದಾರೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಅಮಟೂರು ಬಾಳಪ್ಪ ಅವರು ರಾಣಿ ಚನ್ನಮ್ಮ ಅವರಿಗೆ ನೀವು ಇಲ್ಲಿಂದ ಹೋಗಿ. ನೀವು ಬದುಕಬೇಕು. ನೀವು ಬದುಕಿದರೆ ಎಲ್ಲವೂ ಎಂದು ತನ್ನ ಪ್ರೀತಿಯ ಸಂಸ್ಥಾನದ ರಾಣಿಗೆ ತಿಳಿಸಿ ಅಜರಾಮರವಾಗಿ ಉಳಿದಿದ್ದಾರೆ.
ಅದೇ ರೀತಿಯಾಗಿ ಸಂಗೊಳ್ಳಿ ರಾಯಣ್ಣ, ಸರ್ದಾರ್ ಗುರು ಸಿದ್ದಪ್ಪ, ಗಜವೀರ ಮುಂತಾದವರು ತಪ್ಪಿಸಿಕೊಳ್ಳುವಂತೆ ಅಮಟೂರು ಬಾಳಪ್ಪ ಹೇಳುತ್ತಾರೆ. ತನ್ನ ಎದೆಯಿಂದ ಹರಿದ ರಕ್ತವನ್ನು ರಾಯಣ್ಣನ ಹಣೆಗೆ ಹಚ್ಚಿ ಕಿತ್ತೂರು ಕೋಟೆಯಲ್ಲಿ ನುಸುಳಿದ ಬ್ರಿಟಿಷರನ್ನು ಚೆಂಡಾಡಿ ಚನ್ನಮ್ಮ ರಾಣಿಯನ್ನು ಮತ್ತೆ ಕಿತ್ತೂರು ಆಡಳಿತದ ಚುಕ್ಕಾಣಿ ಹಿಡಿಯುವಂತೆ ಮಾಡುವುದು ನಿನ್ನ ಕರ್ತವ್ಯ. ನನ್ನ ಶಕ್ತಿಯನ್ನು ನಿನ್ನಲ್ಲಿ ತುಂಬುವೆ ಎಂದು ಬಾಳಪ್ಪ ಕೊನೆಯ ಉಸಿರು ಬಿಡುತ್ತಾರೆ.
ಅಮಟೂರು ಬಾಳಪ್ಪ ಅವರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಶೋಧಕ ಮಹೇಶ ಚನ್ನಂಗಿ ಅವರು, ಬ್ರಿಟಿಷ್ ಅಧಿಕಾರಿ ಥ್ಯಾಕರೆಯನ್ನು ಅಮಟೂರು ಬಾಳಪ್ಪ ಗುಂಡಿಕ್ಕಿ ಕೊಲ್ಲುತ್ತಾರೆ. ಹೀಗಾಗಿ ನಾವು ಇಂದು ವೀರರಾಣಿ ಕಿತ್ತೂರು ಚನ್ನಮ್ಮ ಅವರ ವಿಜಯೋತ್ಸವದ 200ನೇ ಸಂಭ್ರಮ ಆಚರಿಸುತ್ತಿದ್ದೇವೆ. ಥ್ಯಾಕರೆ ಹತ್ಯೆಯಿಂದ ಸಿಟ್ಟಿಗೆದ್ದಿದ್ದ ಬ್ರಿಟಿಷರು ಕಿತ್ತೂರಿನ ಮೇಲೆ ಮತ್ತೆ ಯುದ್ಧ ಸಾರುತ್ತಾರೆ. 1824ರ ನವೆಂಬರ್ 30 ರಿಂದ ಡಿಸೆಂಬರ್ 5 ರವರೆಗೆ ನಡೆದ ಮತ್ತೊಂದು ಯುದ್ಧದಲ್ಲಿ ಕಿತ್ತೂರಿನ ಗಡಾದಮರಡಿಯನ್ನು ವಶಕ್ಕೆ ಪಡೆಯುವ ವೇಳೆ ಬ್ರಿಟಿಷ್ ಅಧಿಕಾರಿ ಚಾಪ್ಲಿನ್ ಬಂದೂಕಿನ ನಳಿಕೆಯಿಂದ ಹೊರಬಂದ ಗುಂಡಿನಿಂದ ಬಾಳಪ್ಪ ಅವರು ವೀರ ಮರಣವನ್ನು ಅಪ್ಪುತ್ತಾರೆ. ತನ್ನ ಕೊನೆ ಉಸಿರು ಇರುವವರಿಗೆ ಕಿತ್ತೂರಿಗಾಗಿ ಹೋರಾಟ ನಡೆಸಿದ ಅಮಟೂರು ಬಾಳಪ್ಪ ಚಿರಸ್ಥಾಯಿಯಾಗಿದ್ದಾರೆ ಎಂದು ವಿವರಿಸಿದರು.
ಕಿತ್ತೂರು ವಿಜಯೋತ್ಸವಕ್ಕೆ ಸದ್ಯ 200ನೇ ವರ್ಷಾಚರಣೆ ಸಂಭ್ರಮ. ಕಿತ್ತೂರು ವಿಜಯೋತ್ಸವಕ್ಕೆ ಕಾರಣೀಭೂತರಾಗಿರುವ ಅಮಟೂರು ಬಾಳಪ್ಪ ಅವರಿಗೆ ಉತ್ಸವದಲ್ಲಿ ವಿಶೇಷ ಗೌರವ ಸಿಗಬೇಕು. ಅವರ ಹುಟ್ಟೂರು ಅಮಟೂರು ಗ್ರಾಮದಲ್ಲೂ ಕಾರ್ಯಕ್ರಮ ಆಯೋಜಿಸಬೇಕು. ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ಬಾಳಪ್ಪ ಅವರ ಪುತ್ಥಳಿ ಸ್ಥಾಪನೆ ಮಾಡಬೇಕು. ಶಾಲಾ- ಕಾಲೇಜುಗಳ ಪಠ್ಯದಲ್ಲೂ ಬಾಳಪ್ಪ ಅವರ ಶೌರ್ಯ ಮತ್ತು ಸಾಹಸಗಳ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಬೇಕು. ಪ್ರತಿ ವರ್ಷ ಅಮಟೂರು ಗ್ರಾಮದಲ್ಲಿ ಸರ್ಕಾರದಿಂದಲೇ ಉತ್ಸವ ಆಚರಿಸಬೇಕು. ಬಾಳಪ್ಪ ಅವರ ಹೆಸರಿನಲ್ಲಿ ಶೌರ್ಯ ಪ್ರಶಸ್ತಿ ಪ್ರದಾನ ಮಾಡಬೇಕು ಎನ್ನುವುದು ವೀರಕೇಸರಿ ಅಮಟೂರು ಬಾಳಪ್ಪ ಟ್ರಸ್ಟ್ ಕಮಿಟಿ ಅಧ್ಯಕ್ಷ ಸೋಮನಗೌಡ ಪಾಟೀಲ ಅವರ ಒತ್ತಾಯವಾಗಿದೆ.
ಅಮಟೂರನ್ನು ಪಾರಂಪರಿಕ ಅಭಿವೃದ್ಧಿಗೊಳ್ಳುವ ಪ್ರದೇಶವೆಂದು ಸರ್ಕಾರ ಘೋಷಣೆ ಮಾಡಬೇಕು. ಅಮಟೂರು ಗ್ರಾಮದ ಹೆಸರನ್ನು ಬಾಳಪ್ಪನ ಅಮಟೂರು ಎಂದು ಮರುನಾಮಕರಣ ಮಾಡಬೇಕು. ಗ್ರಾಮದಲ್ಲಿರುವ ಶಾಲೆ, ಕೃಷಿ ಪತ್ತಿನ ಸಹಕಾರಿ ಸಂಘ, ಗ್ರಂಥಾಲಯ ಮುಂತಾದ ಸಂಸ್ಥೆಗಳಿಗೆ ಬಾಳಪ್ಪ ಅವರ ಹೆಸರಿಡುವ ಮೂಲಕ ಅವರ ಹೆಸರನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡಬೇಕು ಎನ್ನುವುದು ಅಮಟೂರು ಬಾಳಪ್ಪ ಅವರ ಅಭಿಮಾನಿಗಳ ಒತ್ತಾಸೆಯಾಗಿದೆ.